Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ತಗ್ಗಿದ ಯಮುನೆಯ ಪ್ರವಾಹ, ಮೂಲಸೌಕರ್ಯ ಮರುಸ್ಥಾಪಿಸುವುದೇ ದೆಹಲಿ ಸರಕಾರಕ್ಕಿರುವ ಚಾಲೆಂಜ್!

ದೆಹಲಿಯಲ್ಲಿ ಪ್ರವಾಹದ ಅಬ್ಬರ ತಗ್ಗಿದ್ದರೂ ಜನವಸತಿ ಪ್ರದೇಶಗಳಿಗೆ ನುಗ್ಗಿರುವ ನೀರನ್ನು ಹೊರಹಾಕುವುದು ದೆಹಲಿ ಸರಕಾರಕ್ಕೆ ಹರಸಾಹಸವಾಗಿದೆ.‌

ದೆಹಲಿಯಲ್ಲಿ ತಗ್ಗಿದ ಯಮುನೆಯ ಪ್ರವಾಹ, ಮೂಲಸೌಕರ್ಯ ಮರುಸ್ಥಾಪಿಸುವುದೇ ದೆಹಲಿ ಸರಕಾರಕ್ಕಿರುವ ಚಾಲೆಂಜ್!
ದೆಹಲಿ ಪ್ರವಾಹ (ಸಾಂದರ್ಭಿಕ ಚಿತ್ರ)
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on: Jul 16, 2023 | 6:26 PM

ನವದೆಹಲಿ: ಕಳೆದೊಂದು ವಾರದಿಂದ ದೆಹಲಿಗೆ (Delhi) ಜಲದಿಗ್ಬಂದನ ಹೇರಿದ್ದ ಯಮುನೆ (Yamuna River) ಈಗ ಶಾಂತವಾಗಿದ್ದಾಳೆ. ದೆಹಲಿಯಲ್ಲಿ ಯಮುನಾ ನದಿಯ ಪ್ರವಾಹದ ಅಬ್ಬರ ಕಡಿಮೆಯಾಗುತ್ತಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 205.88 ಮೀಟರ್‌ಗೆ ಇಳಿದಿದೆ. ಕಳೆದ ಎರಡು ದಿನಗಳಲ್ಲಿ ಮೂರು ಮೀಟರ್ ನಷ್ಟು ಯಮುನಾ ನದಿಯಲ್ಲಿ‌ ಪ್ರವಾಹ ತಗ್ಗಿದೆ. ದೆಹಲಿಯ ತಗ್ಗುಪ್ರದೇಶಗಳಿಗೆ ನುಗ್ಗಿರುವ ಪ್ರವಾಹದ ನೀರನ್ನು ಹೋಗಲಾಡಿಸಲು ದೆಹಲಿ ಸರಕಾರ ಕಾರ್ಯೋರ್ನುಖವಾಗಿದೆ. ಕೆಂಪುಕೋಟೆ ಹಿಂಬದಿಯ ರಿಂಗ್ ರೋಡ್ ಸಂಪೂರ್ಣ ಮುಳುಗಡೆಯಾಗಿದ್ದು ನೀರು ಹೋಗಲಾಡಿಸಲು ಕಾರ್ಯಾಚರಣೆ ನಡೆಯುತ್ತದೆ.

ದೆಹಲಿಯಲ್ಲಿ ಪ್ರವಾಹದ ಅಬ್ಬರ ತಗ್ಗಿದ್ದರೂ ಜನವಸತಿ ಪ್ರದೇಶಗಳಿಗೆ ನುಗ್ಗಿರುವ ನೀರನ್ನು ಹೊರಹಾಕುವುದು ದೆಹಲಿ ಸರಕಾರಕ್ಕೆ ಹರಸಾಹಸವಾಗಿದೆ.‌ ಪ್ರವಾಹದಿಂದ ಚರಂಡಿ ವ್ಯವಸ್ಥೆಯೇ ಹಾಳಾಗಿ ಹೋಗಿದ್ದು ವಿಶೇಷ ತಜ್ಞರ ತಂಡ ಚರಂಡಿ ವ್ಯವಸ್ಥೆ ಸರಿಪಡಿಯವಲ್ಲಿ ಕಾರ್ಯೋನ್ಮುಖವಾಗಿವೆ. ದೆಹಲಿಯಲ್ಲಿರುವ ಭಾರತೀಯ ನೌಕಾಪಡೆಯ ಡೈವಿಂಗ್ ತಂಡ ಜವಾನ್ ಯಮುನಾ ಬ್ಯಾರೇಜ್, ಐಟಿಒನಲ್ಲಿ ಐದು ಗೇಟ್‌ಗಳನ್ನು ಸರಿಮಾಡಲು ಪ್ರಯತ್ನಿಸುತ್ತಿದೆ.

ಪ್ರವಾಹದಿಂದ ಕೆಟ್ಟುಹೋಗಿದ್ದು ಜಲಸಂಸ್ಕರಣ ಘಟಕಗಳಿಗೆ ಮರು ಚಾಲನೆ ಸಿಕ್ಕಿದೆ. ಚಂದ್ರವಾಲ್ ನೀರು ಶುದ್ಧೀಕರಣ ಘಟಕದ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಚಿತಪಡಿಸಿದ್ದಾರೆ. ಜಲಸಂಸ್ಕರಣ ಘಟಕಗಳು ಬಂದ್ ಆಗಿದ್ದ ಕಾರಣ ದೆಹಲಿ ನಗರದ ಉತ್ತರ, ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ನೀರು ಸರಬರಾಜು ಮಾಡಲು ಬಿಕ್ಕಟ್ಟು ಸೃಷ್ಟಿಯಾಗಿತ್ತು.

ದೆಹಲಿಯ ತಗ್ಗು ಪ್ರದೇಶಗಳಿಗೆ ನುಗ್ಗಿರುವ ನೀರು ಹಾಗೆ ನಿಂತಿದೆ. ಮಯೂರ್ ವಿಹಾರ್ ಮತ್ತು ಹಳೆಯ ಯಮುನಾ ಸೇತುವೆ ಪ್ರದೇಶಗಳಲ್ಲಿ ಪ್ರವಾಹ ಸಂತ್ರಸ್ತರ ಪರಿಸ್ಥಿತಿ‌ ಹೇಳತೀರದಾಗಿದೆ. ಅನೇಕರು ಟಾರ್ಪಾಲಿನ್‌ ಹೊದಿಕೆ ಮೇಲೆ ತೆರೆದ ಸ್ಥಳದಲ್ಲಿ ಮಲಗಿದ್ದಾರೆ. ಬಯಲಿನಲ್ಲೇ ಮಲವಿಸರ್ಜನೆ ಮಾಡುತ್ತುದ್ದಾರೆ. ಯಮುನೆಯ ನೀರಿನ ಮಟ್ಟ ಕಡಿಮೆಯಾಗುವುದನ್ನೇ ಕಾಯುತ್ತಿದ್ದಾರೆ. ಸಂತ್ರಸ್ತರಿಗೆ ವಸತಿ, ಆಹಾರ, ನೀರು ಮತ್ತು ಶೌಚಾಲಯ ಸೇರಿದಂತೆ ವಿಶೇಷ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ.

ಇನ್ನು ಗ್ರೇಟರ್ ನೋಯ್ಡಾದ ಯಮುನಾ ನದಿಯಲ್ಲಿ ಭಾನುವಾರ ಸ್ನಾನಕ್ಕೆ ತೆರಳಿದ್ದ ಇಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ನದಿ ದಡದಲ್ಲಿ ಸ್ನಾನ ಮಾಡಲು ತೆರಳಿದ್ದ ಯುವಕರು ಪ್ರವಾಹದಲ್ಲಿ‌ ಸಿಲುಕಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಡಂಕೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಕಾನ್‌ಪುರ ಖಾದರ್ ಗ್ರಾಮದ 21 ವರ್ಷದ ಧೀರಾಜ್ ಮತ್ತು 17 ವರ್ಷದ ಸಂಜಿತ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Delhi Flood: ಯಮುನಾ ನದಿ ನೀರಿನ ಮಟ್ಟ ಇಳಿಕೆಯಾದರೂ ದೆಹಲಿ ಪ್ರವಾಹ ತಗ್ಗಿಲ್ಲ ಯಾಕೆ?

ದೆಹಲಿಯ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ಸರಕಾರ ನಿರ್ವಹಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಯಮುನಾ ಪ್ರವಾಹದಲ್ಲಿ ಎಎಪಿ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ದೆಹಲಿ ಬಿಜೆಪಿ ಆರೋಪಿಸಿದೆ. ನಗರದಲ್ಲಿ ಯಮುನಾ ನದಿ ಮತ್ತು ಚರಂಡಿಗಳ ಹೂಳು ತೆಗೆಯುವಿಕೆಯನ್ನು ಎಎಪಿ ಸರ್ಕಾರ ಮಾಡಿದೆಯೇ ಮತ್ತು ಹೌದು ಎಂದಾದರೆ ಅದಕ್ಕೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂಬುದರ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಅಲ್ಲದೆ ಆಮ್ ಆದ್ಮಿ‌ಸರಕಾರದ‌ ವಿರುದ್ಧ ಸಂಸದ ಗೌತಮ್ ಗಂಭೀರ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮೂಲಸೌಕರ್ಯಕ್ಕೆ ಎಷ್ಟು ಹಣ ವ್ಯಯಿಸಲಾಗಿದೆ, ಜಾಹೀರಾತಿಗೆ ಎಷ್ಟು ಹಣ ವ್ಯಯಿಸಲಾಗಿದೆ ಎಂದು ದೆಹಲಿ ಜನತೆಗೆ ದೆಹಲಿ ಸಿಎಂ ಹೇಳಬೇಕು ಎಂದು ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಆಪ್ ಸರಕಾರಕ್ಕೆ ಪ್ರಶ್ನೆ ಮುಂದಿಟ್ಟಿದ್ದಾರೆ.

ದೆಹಲಿಯಲ್ಲಿ ಯಮುನೆಯ ಪ್ರವಾಹ ತಗ್ಗುತ್ತಿದೆ. ಇನ್ನೊಂದೆಡೆ ದೆಹಲಿಯಲ್ಲಿ ಶನಿವಾರ ರಾತ್ರಿ ಭಾರೀ ಮಳೆ ಸುರಿದಿದೆ. ಅಲ್ಲದೆ ಇನ್ನು ಎರಡು ದಿನಗಳು ದೆಹಲಿಯಲ್ಲಿ ಸಾಧಾರಣ ಮಳೆ‌ ಸುರಿಯಲಿದೆ ಎಂದು ಹವಾಮಾನ‌ ಇಲಾಖೆ ಮುನ್ಸೂಚನೆ ನೀಡಿದೆ. ಹೆಚ್ಚು ಮಳೆ ಸುರಿದರೆ ಮತ್ತೆ ದೆಹಲಿಗೆ ಯಮುನೆ ಕಂಟಕವಾಗುವ ಸಾಧ್ಯತೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ