ಬಿಳಿ ಲಕೋಟೆ ಬಗ್ಗೆ ಹಸಿ ಸುಳ್ಳು; ಮೋದಿ ಕುರಿತ ಟೀಕೆಗೆ ಪ್ರಿಯಾಂಕಾ ಗಾಂಧಿಗೆ ಬಿಜೆಪಿ ತಿರುಗೇಟು
ಅಕ್ಟೋಬರ್ 20ರಂದು ದೌಸಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಖಲೆಗಳಿಲ್ಲದೆ ವೈಯಕ್ತಿಕ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಹಲವು ದಶಕಗಳಿಂದ ಹಸಿ ಸುಳ್ಳುಗಳನ್ನು ಹೇಳಿ ಜನರ ದಾರಿ ತಪ್ಪಿಸುತ್ತಿದೆ ಎಂದಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರಾಜಸ್ಥಾನದ ದೌಸಾದ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಿಳಿ ಲಕೋಟೆಯಲ್ಲಿ 21 ರೂ. ದೇಣಿಗೆ ನೀಡಿದ್ದರು ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿಕೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಗ್ರ್ಯಾಂಡ್ ಓಲ್ಡ್ ಪಾರ್ಟಿಯಾಗಿರುವ ಕಾಂಗ್ರೆಸ್ ಹಲವು ದಶಕಗಳಿಂದ ಇಂತಹ ಸುಳ್ಳುಗಳಿಂದಲೇ ಜನರ ದಾರಿ ತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅಕ್ಟೋಬರ್ 20ರಂದು ದೌಸಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೃಢೀಕೃತವಲ್ಲದ ಆರೋಪಗಳನ್ನು ಮಾಡಿದ್ದರು. ಮೋದಿ ದೇವಸ್ಥಾನದಲ್ಲಿ ನೀಡಿದ ದೇಣಿಗೆಯ ಲಕೋಟೆಯನ್ನು ತೆರೆದಾಗ ಅದರಲ್ಲಿ ಕೇವಲ 21 ರೂ. ಇದ್ದುದನ್ನು ಟಿವಿಯಲ್ಲಿ ನೋಡಿದೆ. ದೇವನಾರಾಯಣ ದೇವಸ್ಥಾನಕ್ಕೆ ತೆರಳಿದ್ದ ಪ್ರಧಾನಿ ಮೋದಿ ಕಾಣಿಕೆ ಹುಂಡಿಯಲ್ಲಿ ದೇಣಿಗೆಯ ಲಕೋಟೆಯನ್ನು ಹಾಕಿದ್ದರು. ಅದನ್ನು ತೆರೆದಾಗ 21 ರೂ. ಇತ್ತು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.
ಇದನ್ನೂ ಓದಿ: One Nation One Election: ಒಂದು ರಾಷ್ಟ್ರ, ಒಂದು ಚುನಾವಣೆ, ಇಂದು ಕೋವಿಂದ್ ನೇತೃತ್ವದ ಸಮಿತಿಯ ಎರಡನೇ ಸಭೆ
ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಬಿಜೆಪಿ, ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರದ ಸಮಯದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಪ್ರಶ್ನಿಸಿದ್ದಾರೆ ಎಂದು ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿಗೆ ನೋಟಿಸ್ ನೀಡಿದ್ದ ಚುನಾವಣಾ ಆಯೋಗ ಅಕ್ಟೋಬರ್ 30ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಚುನಾವಣಾ ಆಯೋಗ ನೋಟಿಸ್
ಮುಂದಿನ ತಿಂಗಳು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್- ಬಿಜೆಪಿ ಪಕ್ಷಗಳ ನಡುವೆ ವಾದ- ವಿವಾದಗಳು ಮುಂದುವರೆದಿವೆ. ಕಾಂಗ್ರೆಸ್ ಬಿಳಿ ಲಕೋಟೆಯ ಬಗ್ಗೆ ಬಿಳಿ ಸುಳ್ಳುಗಳನ್ನು ಹೇಳುತ್ತಿದೆ. ಕಾಂಗ್ರೆಸ್ ತನ್ನ ಸುಳ್ಳು ಹೇಳುವ ಸಂಸ್ಕೃತಿಗೆ ಬದ್ಧವಾಗಿದೆ. ಕಾಂಗ್ರೆಸ್ ರಾಜಸ್ಥಾನದ ಜನರಿಗೆ ಮಾತ್ರ ಸುಳ್ಳು ಹೇಳಿಲ್ಲ, ಸಾರ್ವಜನಿಕರಿಗೂ ಹಸಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ದಾರಿ ತಪ್ಪಿಸುತ್ತಿದೆ ಎಂದು ಪೂನಾವಾಲಾ ತಮ್ಮ ವೀಡಿಯೊದಲ್ಲಿ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದೆ. ಇತರ 4 ರಾಜ್ಯಗಳ ಮತಗಳೊಂದಿಗೆ ಡಿಸೆಂಬರ್ 3ರಂದು ರಾಜಸ್ಥಾನದಲ್ಲಿ ಮತ ಎಣಿಕೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ