ಬಿಜೆಪಿ ನಾಯಕ ಅಮಿತ್​ ಮಾಳವಿಯ ಟ್ವೀಟ್​ಗೆ manipulated media ಲೇಬಲ್ ಅಂಟಿಸಿದ ಟ್ವಿಟರ್!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 03, 2020 | 6:06 PM

ವ್ಯಕ್ತಿ ಮಾಡಿರುವ ಟ್ವೀಟ್ ಸುಳ್ಳಾಗಿದ್ದರೆ, ಯಾವುದೇ ವ್ಯಕ್ತಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡರೆ, ತಿರುಚಲಾದ ಫೋಟೋ, ಎಡಿಟ್ ಮಾಡಲಾದ ವಿಡಿಯೋಗಳು ಪೋಸ್ಟ್ ಆಗಿದ್ದರೆ ಅವುಗಳಿಗೆ ಟ್ವಿಟರ್ ಲೇಬಲ್ ಅಂಟಿಸಲಿದೆ.

ಬಿಜೆಪಿ ನಾಯಕ ಅಮಿತ್​ ಮಾಳವಿಯ ಟ್ವೀಟ್​ಗೆ manipulated media ಲೇಬಲ್ ಅಂಟಿಸಿದ ಟ್ವಿಟರ್!
ಬಿಜೆಪಿ ನಾಯಕ ಅಮಿತ್ ಮಾಳವೀಯ
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವಿಡಿಯೋವನ್ನು ತಿರುಚಿ ಹಾಕಿದ್ದ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್​ಗೆ ಟ್ವಿಟರ್ ತಿರುಚಿದ ಟ್ವೀಟ್ (manipulated media) ಲೇಬಲ್ ಅಂಟಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿ ವಿರೋಧಿಸಿ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರೊಬ್ಬರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಲಾಠಿ ಅವರ ದೇಹಕ್ಕೆ ತಾಗಿತ್ತು. ಈ ಘಟನೆಯ ಸಣ್ಣ ವಿಡಿಯೋ ಕ್ಲಿಪ್ ಹಾಕಿದ್ದ ಅಮಿತ್ ಮಾಳವಿಯಾ, ರೈತನಿಗೆ ಲಾಠಿ ತಾಗಲೇ ಇಲ್ಲ ಎಂದು ಹೇಳಿದ್ದರು. ಆದರೆ, ಪೂರ್ಣ ವಿಡಿಯೋದಲ್ಲಿ ರೈತನಿಗೆ ಲಾಠಿ ತಾಗಿತ್ತು. ಈ ಬೆಳವಣಿಗೆ ನಡೆದ ಕೆಲವೇ ಹೊತ್ತಿನಲ್ಲಿ ಟ್ವಿಟರ್ ಅಮಿತ್ ಮಾಳವಿಯಾ ಟ್ವೀಟ್​ಗೆ manipulated media ಲೇಬಲ್ ಅಂಟಿಸಿದೆ. ಜೊತೆಗೆ ರೀಟ್ವೀಟ್ ಮಾಡುವವರಿಗೆ ಎಚ್ಚರಿಕೆ ಸಂದೇಶ ಕೂಡ ನೀಡುತ್ತಿದೆ.


ಲೇಬಲ್ ಅಂಟಿಸೋದೇಕೆ?:

ಅಮೆರಿಕ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಕೆಲ ಟ್ವೀಟ್​ಗಳು ಸಾಕಷ್ಟು ಟೀಕೆಗಳಿಗೆ ಕಾರಣವಾಗಿದ್ದವು. ಅವರು ಮಾಡಿದ್ದ ಟ್ವೀಟ್​ಗಳಲ್ಲಿ ನೈಜ ಅಂಶ ಇರದ ಕಾರಣ ಟ್ವಿಟರ್ ಅದಕ್ಕೆ ನಕಲಿ ಟ್ವೀಟ್ ಎನ್ನುವ ಲೇಬಲ್ ಅಂಟಿಸಿತ್ತು. ಈಗ ಟ್ವಿಟರ್ ಈ ಆಯ್ಕೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದೆ. ಈ ಮೂಲಕ ಬಳಕೆದಾರರಿಗೆ ನಕಲಿ ಟ್ವೀಟ್ ಯಾವುದು ಅಸಲಿ ಟ್ವೀಟ್ ಯಾವುದು ಎಂಬುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ.

ವ್ಯಕ್ತಿ ಮಾಡಿರುವ ಟ್ವೀಟ್ ಸುಳ್ಳಾಗಿದ್ದರೆ, ಯಾವುದೇ ವ್ಯಕ್ತಿ ಬಗ್ಗೆ ಸುಳ್ಳು ಮಾಹಿತಿ ಹಂಚಿಕೊಂಡರೆ, ತಿರುಚಲಾದ ಫೋಟೋ, ಎಡಿಟ್ ಮಾಡಲಾದ ವಿಡಿಯೋಗಳು, ಮಾಧ್ಯಮಗಳು ಪ್ರಸಾರ ಮಾಡುವ ಗೊಂದಲ ಹುಟ್ಟಿಸುವ ಕ್ಲಿಪ್​ಗಳು ಪೋಸ್ಟ್ ಆಗಿದ್ದರೆ ಅವುಗಳಿಗೆ ಟ್ವಿಟರ್ ಲೇಬಲ್ ಅಂಟಿಸಲಿದೆ.

ಲಾಭಗಳೇನು?
ಸಾಮಾಜಿಕ ಜಾಲತಾಣ ಬಲಗೊಂಡಂತೆ ನಕಲಿ ಸಂದೇಶ ಹರಿದಾಡುವ ಸಂಖ್ಯೆ ಕೂಡ ಹೆಚ್ಚುತ್ತಿದೆ. ಟ್ವಿಟರ್​ನಲ್ಲಿ ಸಾಕಷ್ಟು ನಕಲಿ ಟ್ವೀಟ್​ಗಳು ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವುದು ಟ್ವಿಟರ್​ನ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ಒಂದೊಮ್ಮೆ ನಕಲಿ ಮಾಹಿತಿ ಹಾಗೂ ನಕಲಿ ಫೋಟೋ-ವಿಡಿಯೋಗಳನ್ನು ಒಳಗೊಂಡ ಟ್ವೀಟ್​ಗೆ ಲೇಬಲ್ ಅಂಟಿಸಿದರೆ ಬಳಕೆದಾರರಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂಬ ವಿಚಾರ ಗೊತ್ತಾಗಲಿದೆ.

ಡಿಲೀಟ್ ಕೂಡ ಆಗತ್ತೆ ಟ್ವೀಟ್
ನಕಲಿ ಟ್ವೀಟ್ ಎನ್ನುವ ಲೇಬಲ್ ಕಾಣಿಸುವುದು ಮಾತ್ರವಲ್ಲ ಕೆಲ ಟ್ವೀಟ್​ಗಳನ್ನು ಡಿಲೀಟ್ ಕೂಡ ಮಾಡಲು ಟ್ವಿಟರ್ ನಿರ್ಧರಿಸಿದೆ. ಕೋಮುವಾದಕ್ಕೆ ಪ್ರಚೋದನೆ ನೀಡುವ, ವ್ಯಕ್ತಿಯ ಘನತೆಗೆ ಧಕ್ಕೆ ತರುವ ಟ್ವೀಟ್​ಗಳು ಡಿಲೀಟ್ ಆಗಲಿದೆ.

ಕಾಣಿಸೋದು ಕೂಡ ಕಡಿಮೆ
ಒಂದು ಟ್ವೀಟ್ ಹೆಚ್ಚೆಚ್ಚು ರೀಟ್ವೀಟ್ ಆದರೆ, ಅದು ಹೆಚ್ಚೆಚ್ಚು ಜನರಿಗೆ ಕಾಣಿಸುತ್ತದೆ. ಆದರೆ, ನಕಲಿ ಟ್ವೀಟ್ ಎನ್ನುವ ಲೇಬಲ್ ಬಿದ್ದರೆ ಆ ಟ್ವೀಟ್ ಹೆಚ್ಚು ಜನರಿಗೆ ಕಾಣುವುದಿಲ್ಲ. ಈ ಮೂಲಕವೂ ನಕಲಿ ಸುದ್ದಿ ಹರಡುವುದನ್ನು ತಡೆಯಲು ಟ್ವಿಟರ್ ಮುಂದಾಗಿದೆ.

ತಪ್ಪು ಮಾಹಿತಿ ಟ್ವೀಟ್‌ ಮಾಡಿದರೆ ‘Manipulated media’ ಲೇಬಲ್ ಹಾಕಲಿದೆ ಟ್ವಿಟರ್

Published On - 6:04 pm, Thu, 3 December 20