ರಾಜಕೀಯ ವಿಶ್ಲೇಷಣೆ | ತಮಿಳುನಾಡು ರಾಜಕೀಯದಲ್ಲೂ ಸೂಪರ್​ಸ್ಟಾರ್ ಆಗ್ತಾರಾ ರಜನಿಕಾಂತ್

ದ್ರಾವಿಡ ರಾಜಕಾರಣವೇ ಸರ್ವಸ್ವವೂ ಆಗಿರುವ ತಮಿಳುನಾಡಿನಲ್ಲಿ ರಜನಿ ಪ್ರಸ್ತಾಪಿಸುತ್ತಿರುವ ಆಧ್ಯಾತ್ಮ ರಾಜಕಾರಣಕ್ಕೂ ಸ್ಥಾನ ಸಿಕ್ಕೀತೆ? ತಮಿಳುನಾಡು ರಾಜಕಾರಣವನ್ನು ಬಹುಕಾಲದಿಂದ ಗಮನಿಸುತ್ತಿರುವ ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಇಲ್ಲಿ ವಿಶ್ಲೇಷಿಸಿದ್ದಾರೆ.

ರಾಜಕೀಯ ವಿಶ್ಲೇಷಣೆ | ತಮಿಳುನಾಡು ರಾಜಕೀಯದಲ್ಲೂ ಸೂಪರ್​ಸ್ಟಾರ್ ಆಗ್ತಾರಾ ರಜನಿಕಾಂತ್
ರಜನಿಕಾಂತ್ ಭಾವಚಿತ್ರದೊಂದಿಗೆ ಅಭಿಮಾನಿಗಳ ಸಂಭ್ರಮ (ಸಂಗ್ರಹ ಚಿತ್ರ).
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 03, 2020 | 5:05 PM

ರಾಜಕೀಯ ಪ್ರವೇಶಿಸುವ ಬಗ್ಗೆ ರಜನಿಕಾಂತ್ ತೆಗೆದುಕೊಂಡಿದ್ದು ಅವಸರದ ನಿರ್ಧಾರ. ಯೋಚನೆ ಮಾಡಿ ತೆಗೆದುಕೊಂಡ ನಿರ್ಧಾರ ಅಲ್ಲ ಅದು. ಮೇ ತಿಂಗಳಲ್ಲಿ, ಅಂದ್ರೆ ಇನ್ನು ಆರೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಿದೆ. ಇನ್ನೂ ಇವರು ಪಕ್ಷದ ಹೆಸರನ್ನೂ ಘೋಷಿಸಿಲ್ಲ. ಇವರಿಗೆ ಯಾವ ಶಾಸಕ, ಯಾವ ಸಂಸದನ ಬೆಂಬಲ ಇದೆ ಅಂತ್ಲೂ ಗೊತ್ತಿಲ್ಲ. ರಾಜಕೀಯವಾಗಿ ಯಾವ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ತಾರೆ ಗೊತ್ತಾಗ್ತಿಲ್ಲ.

ಈ ಹಿಂದೆ ಎಂಜಿಆರ್​ ಪಕ್ಷ ಕಟ್ಟಲು ಮುಂದಾದಾಗ ಅವರು ಡಿಎಂಕೆಯಲ್ಲಿ ಖಜಾಂಚಿಯಾಗಿದ್ರು. ಅವರ ಜೊತೆಗೆ 15 ಜನ ತಕ್ಷಣ ರಾಜೀನಾಮೆ ಕೊಟ್ಟು ಜತೆಯಾದರು. ವಿಧಾನಸಭೆಯಲ್ಲಿದ್ದ ಅರ್ಧದಷ್ಟು ಶಾಸಕರು ಅವರ ಪರವಾಗಿದ್ರು. ಎಂಜಿಆರ್ ಪಾರ್ಟಿ ಕಟ್ಟಿದ್ರೆ ನಾವು ಬರ್ತೀವಿ ಅಂತ ಹೇಳೋ ಸಾಮಾನ್ಯ ಜನರು ದೊಡ್ಡ ಸಂಖ್ಯೆಯಲ್ಲಿ ಇದ್ದರು.

ಈಗ ರಜನಿ ವಿಚಾರಕ್ಕೆ ಬರೋಣ. ಪಾರ್ಟಿ ಮಾಡ್ತೀನಿ, ಮಾಡ್ತೀನಿ ಅಂತ ಹತ್ತು ವರ್ಷಗಳಿಂದ ಹೇಳ್ತಾನೇ ಇದ್ದಾರೆ. ಆದರೆ ಈವರೆಗೆ ಒಬ್ಬನೇ ಒಬ್ಬ ಶಾಸಕನನ್ನೂ ಸೆಳೆಯೋಕೆ ಆಗಲಿಲ್ಲ. ಪಕ್ಷ ಕಟ್ಟುವ ಉದ್ದೇಶದಿಂದ ಈ ಹೊತ್ತಿಗೆ ಇಡೀ ತಮಿಳುನಾಡನ್ನು ಸುತ್ತಿ, ಅಭಿಮಾನಿಗಳನ್ನು ಒಗ್ಗೂಡಿಸಿಕೊಳ್ಳಬೇಕಿತ್ತು. ಆದರೆ ಇವರು, ಬರೀ ಮಂಡ್ರಂ (ಅಭಿಮಾನಿಗಳ ಒಕ್ಕೂಟ) ಪ್ರತಿನಿಧಿಗಳ ಮಾತು ಕೇಳ್ತಾ ಮುಂದಿನ ನಿರ್ಧಾರಗಳನ್ನು ಪ್ರಕಟಿಸ್ತಾ ಇದ್ದಾರೆ. ಮಂಡ್ರಂ ಪ್ರತಿನಿಧಿಗಳ ನಿಲುವುಗಳ ಮೇಲೆ ಇವರು ನಿರ್ಧಾರ ತೆಗೆದುಕೊಳ್ತಾ ಇರೋದು ನನ್ನ ಪ್ರಕಾರ ತಪ್ಪು ನಡೆ.

ಅವಕಾಶ ಕಳೆದುಕೊಂಡರು

ತಮಿಳುನಾಡಿನ ರಾಜಕೀಯ ಗಮನಿಸಿ ನೋಡಿ. ಈವರೆಗೆ ಅಲ್ಲಿ ದ್ರಾವಿಡ ಪಕ್ಷಗಳನ್ನು ಹೊರತುಪಡಿಸಿ ಬೇರೆ ಕಡೆಗೆ ಜನರು ಒಲವು ತೋರಿಸಿಲ್ಲ. ಒಂದೋ ಅಣ್ಣಾಡಿಎಂಕೆ ಇರಬೇಕು ಅಥವಾ ಡಿಎಂಕೆ ಇರಬೇಕು. ಈಗ ಎಐಎಡಿಎಂಕೆ ಒಡೆದ್ರೂ, ಅಮ್ಮಾ ಡಿಎಂಕೆ ಅಂತ್ಲೋ ಮತ್ತೊಂದು ಡಿಎಂಕೆಯೋ ಬರುತ್ತದೆಯೇ ವಿನಃ ಇನ್ನೊಂದು ಲಕ್ಷ ಬಂದು ಗೆಲ್ಲಲ್ಲ.

ಜಯಲಲಿತಾ ಮತ್ತು ಕರುಣಾನಿಧಿ ನಿಧನದ ನಂತರ ತಮಿಳುನಾಡು ರಾಜಕಾರಣದಲ್ಲಿ ನಿರ್ವಾತ ತುಂಬಿಕೊಂಡಿದೆ. ಡಿಎಂಕೆ ಪರ ಒಲವು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಾಸ್ತವವಾಗಿ ಹೊಸ ಪಕ್ಷದೊಂದಿಗೆ ಜನರ ಎದುರು ಬರಲು ರಜನಿಕಾಂತ್​ಗೆ ಇದು ಉತ್ತಮ ಅವಕಾಶವಾಗಿತ್ತು. ಆದರೆ ಅವರು ಘೋಷಣೆಗಳಲ್ಲಿಯೇ ದಿನದೂಡಿದರು. ಹೀಗಾಗಿ ಕ್ರಾಂತಿಯ ಭರವಸೆಯೊಂದಿಗೆ ಒಂದು ಪಕ್ಷವನ್ನು ತಮಿಳುನಾಡಿಗೆ ಪರಿಚಯಿಸುವ ಅವಕಾಶ ಕಳೆದುಕೊಂಡರು.

ಇದನ್ನೂ ಓದಿ:  ಡಿ.31ಕ್ಕೆ ರಜನಿಕಾಂತ್ ಹೊಸ ಪಕ್ಷ ಘೋಷಣೆ: ಜನವರಿಗೆ ಚಾಲನೆ

ರಜನೀಕಾಂತ್

ತಂತ್ರಗಾರಿಕೆ

ತಮಿಳುನಾಡಿನಲ್ಲಿ ಡಿಎಂಕೆ ಜೊತೆಗೆ ಕಾಂಗ್ರೆಸ್​, ಎಐಎಡಿಎಂಕೆ ಜೊತೆಗೆ ಬಿಜೆಪಿ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಶಶಿಕಲಾ ಜೈಲಿನಿಂದ ಹೊರಗೆ ಬಂದ ಮೇಲೆ ದಿನಕರನ್ ಜೊತೆಗೆ ಸೇರಿ ಮತ್ತೊಂದು ಪಕ್ಷ ಮಾಡುವುದಾಗಿ ಹೇಳ್ತಿದ್ದಾರೆ. ಸಾಕಷ್ಟು ಮತ ಗಳಿಸುವ ಸಾಮರ್ಥ್ಯವೂ ಅವರಿಗಿದೆ. ಚುನಾವಣೆಯಲ್ಲಿ ಮುಖ್ಯ ಹೋರಾಟ ಡಿಎಂಕೆ-ಎಐಎಡಿಎಂಕೆ ನಡುವೆ ನಡೆದರೂ ಮತ ವಿಭಜನೆ ಮಾಡೋಕೆ ಅಲ್ಲಿ ನಾಲ್ಕೈದು ಪಕ್ಷಗಳಿವೆ. ಇದರಲ್ಲಿ ರಜನಿ ಪಕ್ಷದ ಸ್ಥಾನವೇನು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಹೀಗಾಗಿಯೇ ನಾನು ಸರಿಯಾದ ಪ್ಲಾನ್​ನೊಂದಿಗೆ ರಜನಿ ರಾಜಕೀಯಕ್ಕೆ ಬರ್ತಿಲ್ಲ ಅಂತ ಹೇಳಿದ್ದು. ಜಾಣನಾಗಿದ್ದರೆ ಇಷ್ಟೊತ್ತಿಗಾಗಲೇ ತನ್ನ ಪರವಾಗಿ ಒಂದು ಅಲೆ ಇರುವಂತೆ ರಜನಿ ಮುಂಜಾಗರೂಕತೆ ವಹಿಸಬೇಕಿತ್ತು. ರಜನಿ​ ಒಬ್ಬ ಸೂಪರ್​ಸ್ಟಾರ್. ಅವರು ಹೋದ ಕಡೆ ಜನರು ಸೇರ್ತಾರೆ, ಆದರೆ ರಾಜಕೀಯದಲ್ಲಿ ಯಶಸ್ವಿಯಾಗಲು ತಂತ್ರವೂ ಬೇಕಲ್ವಾ?

ರಜನಿಕಾಂತ್ ಪ್ರಸ್ತಾಪಿಸುತ್ತಿರುವ ಆಧ್ಯಾತ್ಮ ರಾಜಕಾರಣಕ್ಕೂ ತಮಿಳುನಾಡಿನಲ್ಲಿ ಮನ್ನಣೆ ಸಿಗುವ ಸಾಧ್ಯತೆ ಕಡಿಮೆ. ಸದ್ಗುರು ಜಗ್ಗಿ ವಾಸುದೇವ್ ಮೇಲೆಯೇ ತಮಿಳುನಾಡಿನಲ್ಲಿ ನಾಲ್ಕೈದು ಪ್ರಕರಣಗಳಿವೆ. ಬಾಬಾ ರಾಮದೇವ್ ಅಥವಾ ಯಾರೋ ಹಿಮಾಲಯದಲ್ಲಿ ತಪಸ್ಸು ಮಾಡಿದ ಸ್ವಾಮಿಗಳ ಹೆಸರು ಹೇಳಿದರೆ ತಮಿಳರು ಮತ ಹಾಕುವುದಿಲ್ಲ.

ರಜನಿಕಾಂತ್​ಗೆ ಮೋದಿ ಬಗ್ಗೆ ಅಪಾರವಾದ ಗೌರವವಿದೆ. ಮೋದಿ ಮೊದಲ ಸಲ ಚೆನ್ನೈಗೆ ಬಂದಾಗ ರಜನಿ ಮನೆಗೂ ಹೋಗಿದ್ದರು. ಹೀಗಾಗಿ ಬಿಜೆಪಿ-ಮೋದಿ ಮಾತು ಮೀರಿ ರಜನಿ ಮುಂದೆ ಹೆಜ್ಜೆ ಇಡಲಾರರು. ಮುಂದೆ ರಜನಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲು ಆಗಲ್ಲ.

ಇದೆಲ್ಲದರ ಜೊತೆಗೆ ರಜನಿ ನೀಡಿದ ಒಂದು ತಪ್ಪು ಹೇಳಿಕೆಯನ್ನು ನಾನಿಲ್ಲಿ ಪ್ರಸ್ತಾಪಿಸಲೇಬೇಕು. ‘ನಾನು ಮುಖ್ಯಮಂತ್ರಿ ಆಗಲ್ಲ, ನಾನು ಹೇಳಿದವರು ಮುಖ್ಯಮಂತ್ರಿ ಆಗ್ತಾರೆ’ ಎಂದು ರಜನಿ ಹೇಳಿದ್ದಾರೆ. ಬೇರೆ ಯಾರನ್ನೋ ಮುಖ್ಯಮಂತ್ರಿ ಗಾದಿಯಲ್ಲಿ ನೋಡಲು ನಿಮಗೇಕೆ ಮತ ಹಾಕಬೇಕು ಅಂತ ಅವರ ಅಭಿಮಾನಿಗಳು ಕೇಳ್ತಿದ್ದಾರೆ. ಇಂಥ ವಿಚಾರಗಳನ್ನು ರಜನಿ ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ರಜನಿ ಅಲೆ… ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳ ಪ್ರವಾಹ

ವಿಜಯ್​ಕಾಂತ್ ಮತ್ತು ರಜನಿಕಾಂತ್

ರಜನಿಕಾಂತ್​ಗೆ ಹೋಲಿಸಿದರೆ ವಿಜಯಕಾಂತ್​ ರಾಜಕೀಯವಾಗಿ ಒಳ್ಳೇ ಪ್ಲಾನ್​ನೊಂದಿಗೆ ಹೆಜ್ಜೆಯಿಟ್ಟರು. ರಜನಿಗೆ ಇರುವಷ್ಟು ಅಲ್ಲದಿದ್ದರೂ ವಿಜಯ್​ಕಾಂತ್​ಗೆ ಬೇರುಮಟ್ಟದಲ್ಲಿ ಒಂದಿಷ್ಟು ಅಭಿಮಾನಿಗಳಿದ್ದರು. ಪಕ್ಷ ಘೋಷಿಸುವ ಮೊದಲು ಅವರು ತಮ್ಮ ಬೆಂಬಲಿಗರನ್ನು ಒಗ್ಗೂಡಿಸಿಕೊಂಡರು. ಜಯಲಲಿತಾ, ಕರುಣಾನಿಧಿಯಿಂದ ಬೇಸರವಾಗಿದ್ದ ಜನರ ಬೆಂಬಲ ವಿಜಯಕಾಂತ್​ ಸಿಕ್ಕಿತು. ಒಂದು ಹಂತದಲ್ಲಿ ವಿರೋಧಪಕ್ಷದ ನಾಯಕನಾಗುವಷ್ಟು ಎತ್ತರಕ್ಕೆ ಆತ ಬೆಳೆದಿದ್ದ. ಆದರೆ ತಪ್ಪು ನಡೆಗಳಿಂದಾಗಿ ಎರಡೂ ಡಿಎಂಕೆಗಳಿಗೆ ಪರ್ಯಾಯ ಪಕ್ಷವೊಂದನ್ನು ಹುಟ್ಟುಹಾಕುವ ಅವಕಾಶ ಕಳೆದುಕೊಂಡರು.

ವಿಜಯಕಾಂತ್​ ಸಾರ್ವಜನಿಕ ವೇದಿಕೆಗಳಲ್ಲಿ ಸರಿಯಾಗಿ ನಡೆದುಕೊಳ್ಳಲಿಲ್ಲ. ಹತ್ತಿರ ಬಂದ ಅಭಿಮಾನಿಗಳಿಗೆ ಸಿಟ್ಟು ಬಂದಾಗ ಎಲ್ಲರ ಎದುರು ಹೊಡೆಯುತ್ತಿದ್ದರು. ವೇದಿಕೆಗಳಲ್ಲಿಯೂ ತೊದಲಿ ಮಾತನಾಡ್ತಿದ್ದರು. ಇಂಥ ತಪ್ಪುಗಳಿಂದಲೇ ಈಗ ತಮಿಳುನಾಡು ರಾಜಕಾರಣದಲ್ಲಿ ಅಪ್ರಸ್ತುತವಾದರು. ತಮಿಳುನಾಡು ಜನರು ಭಾವುಕರು. ಬೇಗ ಮೇಲೆ ಹತ್ತಿಸ್ತಾರೆ, ಅಷ್ಟೇ ಬೇಗ ಕೆಳಕ್ಕೂ ನೂಕಿಬಿಡ್ತಾರೆ. ರಾಜಕೀಯವಾಗಿಯೂ ಅವರು ಜಾಣರು.

ರಜನಿಕಾಂತ್​ ಸಹ ಮುಂಗೋಪಿ. ಸಿನಿಮಾದಲ್ಲಿ ಡೈಲಾಗ್ ಹೊಡೆಯಲು ಅದು ಉಪಯೋಗಕ್ಕೆ ಬರಬಹುದು. ಆದರೆ ಹತ್ತಿರಕ್ಕೆ ಬಂದ ಜನರ ಮುಂದೆ ಕೋಪ ಪ್ರದರ್ಶಿಸಿದರೆ ಎಷ್ಟು ದಿನ ಅಂತ ಸಹಿಸ್ತಾರೆ. ಸುದ್ದಿಗೋಷ್ಠಿಗಳಲ್ಲಿ ಅಡ್ಡಪ್ರಶ್ನೆ ಕೇಳಿದರೂ ರಜನಿ ಇರಿಸುಮುರಿಸಾದಂತೆ ವರ್ತಿಸ್ತಾರೆ. ರಾಜಕೀಯ ನಾಯಕನಿಗೆ ಇಂದು ನೆಗೆಟಿವ್ ಅಂಶವಾಗುತ್ತೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ, ಸರಿದೂಗಿಸಿಕೊಂಡು ಹೋಗುವ ಸ್ವಭಾವವನ್ನು ಇನ್ನಾದರೂ ರಜನಿ ರೂಢಿಸಿಕೊಳ್ಳಬೇಕು.

ಈವರೆಗಿನ ರಾಜಕೀಯ ಗಮನಿಸಿದಾಗ ನನಗೆ ಅನ್ನಿಸುವುದು ಇಷ್ಟು. ತಮಿಳುನಾಡು ರಾಜಕಾರಣದಲ್ಲಿ ರಜನಿ ಸದ್ಯದ ಮಟ್ಟಿಗೆ ದುರ್ಬಲ ಚಂಡಮಾರುತ. ದಡಕ್ಕೆ ಅಪ್ಪಳಿಸುವ ಹೊತ್ತಿಗೆ ಇದು ಪ್ರಬಲಗೊಳ್ಳಬಹುದು ಅಥವಾ ಇನ್ನಷ್ಟು ದುರ್ಬಲವಾಗಬಹುದು.

(ನಿರೂಪಣೆ: ಡಿ.ಎಂ.ಘನಶ್ಯಾಮ)