AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ; ದೂರು ದಾಖಲು

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬಿಜೆಪಿ ನಾಯಕರು ನಾಸಿಕ್​ನಲ್ಲಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಠಾಕ್ರೆ ಮಾತನಾಡಿದ್ದ ವಿಡಿಯೊ ವೈರಲ್ ಆಗಿತ್ತು. ಅದನ್ನು ಆಧರಿಸಿ ದೂರು ದಾಖಲಿಸಲಾಗಿದೆ.

ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ; ದೂರು ದಾಖಲು
ಉದ್ಧವ್ ಠಾಕ್ರೆ
TV9 Web
| Edited By: |

Updated on: Aug 26, 2021 | 11:59 AM

Share

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಅವರ ಪತ್ನಿ, ‘ಸಾಮ್ನಾ’ ಸಂಪಾದಕಿ ರಶ್ಮಿ ಠಾಕ್ರೆ ಮತ್ತು ಯುವ ಸೇನೆ ಅಧ್ಯಕ್ಷ ವರುಣ್ ಸರ್ದೇಸಾಯಿ ವಿರುದ್ಧ ಭಾರತೀಯ ಜನತಾ ಪಕ್ಷದ ನಾಯಕರು ಬುಧವಾರ ದೂರು ದಾಖಲಿಸಿದ್ದಾರೆ. ಠಾಕ್ರೆ ವಿರುದ್ಧ ವಿವಾದಾತ್ಮಕ ಟೀಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಾರಾಯಣ್ ರಾಣೆ ಅವರನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ಬಂಧಿಸಿದ ಪ್ರಕರಣದ ಬೆನ್ನಲ್ಲೇ ಈ ದೂರುಗಳು ದಾಖಲಾಗಿದೆ. ಒಟ್ಟು ಮೂರು ದೂರುಗಳು ದಾಖಲಾಗಿದ್ದು, ಬಿಜೆಪಿ ನಾಯಕರು ನಾಸಿಕ್‌ನಲ್ಲಿ ದೂರು ಸಲ್ಲಿಸಿದ್ದಾರೆ. ಇದನ್ನು ಪೊಲೀಸರು ದೃಢಪಡಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ.

ಮೊದಲ ದೂರನ್ನು ರಿಷಿಕೇಶ್ ಜಯಂತ್ ಅಹೇರ್ ನೀಡಿದ್ದು, ಅವರು ಉದ್ಧವ್ ಠಾಕ್ರೆ ಹಾಗೂ ವರುಣ್ ಸರ್ದೇಸಾಯಿ ವಿರುದ್ಧ ದೂರು ದಾಖಲಿಸಿದ್ದಾರೆ. ರಾಣೆ ಅವರ ಮುಂಬೈ ನಿವಾಸದ ಹೊರಗೆ ಸರ್ದೇಸಾಯಿ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದಾರೆ. ನಂತರ ಸಿಎಂ ಠಾಕ್ರೆ, ಸರ್ದೇಸಾಯಿ ಅವರನ್ನು ಅಭಿನಂದಿಸಿರುವುದು ತಪ್ಪು ಸಂದೇಶ ರವಾನಿಸಿದಂತಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಸರ್ದೇಸಾಯಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 (ಎ), 107, 212 ಮತ್ತು ಸೈಬರ್ ಅಪರಾಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎರಡನೇ ದೂರನ್ನು ಸುನೀಲ್ ರಘುನಾಥ ಕೇದಾರ್ ಅವರು ಉದ್ಧವ್ ಠಾಕ್ರೆ ವಿರುದ್ಧ ದಾಖಲಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಠಾಕ್ರೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಠಾಕ್ರೆ ಮುಖ್ಯಮಂತ್ರಿಯಾಗುವುದಕ್ಕೂ ಮೊದಲು, 2018ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಶಿವಾಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಪಾದರಕ್ಷೆ ಧರಿಸಿದ್ದ ಯೋಗಿ ಆದಿತ್ಯನಾಥ್​ಗೆ ಅದೇ ಚಪ್ಪಲಿಯಿಂದ ಹೊಡೆಯಬೇಕು ಎಂದು ಠಾಕ್ರೆ ಹೇಳಿದ್ದರು. ಇದನ್ನು ಉಲ್ಲೇಖಿಸಿರುವ ದೂರುದಾರರು, ಆದಿತ್ಯನಾಥ್ ಯುಪಿಯ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಮಾತ್ರವಲ್ಲ, ಗೋರಖ್‌ಪುರ ಮಠದ ಪ್ರಧಾನ ಅರ್ಚಕ ಕೂಡ ಆಗಿದ್ದಾರೆ. ಆದ್ದರಿಂದ ಅನೇಕ ಹಿಂದೂಗಳ ಭಾವನೆಗಳಿಗೆ ಠಾಕ್ರೆ ನಡೆಯಿಂದ ನೋವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಿವಾಜಿ ನಿವೃತ್ತಿ ಎಂಬುವವರು ರಶ್ಮಿ ಠಾಕ್ರೆ ವಿರುದ್ಧ ಮೂರನೇ ದೂರು ದಾಖಲಿಸಿದ್ದಾರೆ. ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಬುಧವಾರ ಪ್ರಕಟವಾದ ಸಂಪಾದಕೀಯದಲ್ಲಿ, ರಾಣೆ ವಿರುದ್ಧ ಅನೇಕ ನಿಂದನೀಯ ಪದಗಳನ್ನು ಬಳಸಲಾಗಿದೆ, ಇದು ಅವರು ಹೊಂದಿರುವ ಕೇಂದ್ರ ಸಚಿವರ ಸಾಂವಿಧಾನಿಕ ಹುದ್ದೆಗೆ ‘ಅವಮಾನ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾರಾಯಣ್ ರಾಣೆ ಹೇಳಿದ್ದೇನು? ಉದ್ಧವ್​ ಠಾಕ್ರೆ ಸ್ವಾತಂತ್ರ್ಯೋತ್ಸವದ ದಿನ ಭಾಷಣ ಮಾಡುವಾಗ, ಇದು ಎಷ್ಟನೇ ಸ್ವಾತಂತ್ರ್ಯೋತ್ಸವ ಎಂದು ಕೇಳಲು ಹಿಂದೆ ಬಾಗಿದ್ದರು. ಅದನ್ನು ತೀವ್ರವಾಗಿ ವ್ಯಂಗ್ಯ ಮಾಡಿದ್ದ ಸಚಿವ ನಾರಾಯಣ್ ರಾಣೆ, ನಾನು ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿದ್ದರು. ಅದು ವಿವಾದ ಸೃಷ್ಟಿಸಿತ್ತು. ಹಾಗೇ, ಮೂರು ಕಡೆಗಳಲ್ಲಿ ಎಫ್​ಐಆರ್​ ದಾಖಲಾಗಿತ್ತು. ನಂತರ ನಾಸಿಕ್​ ಪೊಲೀಸರು ಅವರನ್ನು ಬಂಧಿಸಿ, ಮಹದ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಹಾಜರು ಪಡಿಸಿದ್ದರು. ನಿನ್ನೆ ರಾತ್ರಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ನಿಮ್ಮ ಬಂಧನವಾಗಿದ್ದರಲ್ಲಿ ತಪ್ಪಿಲ್ಲ. ಆದರೆ ನಿಮ್ಮನ್ನು ನ್ಯಾಯಾಂಗ ಬಂಧನಕ್ಕೆ ನೀಡುವುದಿಲ್ಲ ಎಂದು ಹೇಳಿ, ಷರತ್ತು ಬದ್ಧ ಜಾಮೀನು ನೀಡಿದ್ದರು. ಮತ್ತೆ ಇಂಥ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ್ದರು.

ಇದನ್ನೂ ಓದಿ:

ನಾರಾಯಣ್​ ರಾಣೆ ಬಂಧನದ ಬೆನ್ನಲ್ಲೇ ವೈರಲ್ ಆಯ್ತು ಉದ್ಧವ್​ ಠಾಕ್ರೆ ಹಳೇ ವಿಡಿಯೋ; ಮಹಾ ಸಿಎಂ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿರುವ ನೆಟ್ಟಿಗರು

ಇಂದಿನಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಉತ್ತರ ಪ್ರದೇಶ ಪ್ರವಾಸ; ರಾಮ ಮಂದಿರಕ್ಕೆ ಭೇಟಿ ನೀಡಲಿರುವ ಮೊದಲ ರಾಷ್ಟ್ರಪತಿ

(BJP Leaders complaint against Maharashtra CM Uddhav Thackrey seeking for FIR)