ಪಶ್ಚಿಮ ಬಂಗಾಳ ವಿಧಾನಸಭೆ (West Bengal Assembly) ಬುಧವಾರ ಸಿಕ್ಕಾಪಟೆ ಗದ್ದಲದಿಂದ ಕೂಡಿತ್ತು. ಅಲ್ಲಿನ ವ್ಯವಸ್ಥೆ ಪೂರ್ತಿ ಹಾಳಾಗಿತ್ತು. ಇದಕ್ಕೆ ಕಾರಣ, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಮಾಡಿದ ಭಾಷಣ. ಬಿಜೆಪಿ ಇಡೀ ದೇಶವನ್ನು ನಾಶ ಮಾಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳುತ್ತಿದ್ದಂತೆ ಬಿಜೆಪಿ ನಾಯಕರು ದೀದಿ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಮೋದಿ, ಮೋದಿ ಎಂದೂ ಕೂಗಿದ್ದಾರೆ. ಅದಕ್ಕೆ ಪ್ರತಿಯಾಗಿ ಮಮತಾ ಬ್ಯಾನರ್ಜಿ ಜೈ ಬಂಗಾಳ್ ಎಂದು ಹೇಳಿದರೆ, ಬಿಜೆಪಿಗರು ಮತ್ತೆ ಜೈ ಶ್ರೀರಾಮ್ ಘೋಷಣೆ ಮೂಲಕ ಪ್ರತಿಕ್ರಿಯೆ ನಡೆಸಿದ್ದಾರೆ.
ನಿನ್ನೆ ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಕೇಂದ್ರ ಬಿಜೆಪಿ ಸರ್ಕಾರ ನಮ್ಮ ರಾಜ್ಯಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಅಂಫಾನ್ ಚಂಡಮಾರುತದಿಂದ ಹಾನಿ ಪರಿಹಾರಕ್ಕೂ ಯಾವುದೇ ನೆರವು ನೀಡಲಿಲ್ಲ ಎಂದು ಹೇಳಿದ್ದಾರೆ. ಹೀಗೆ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಂತೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಗಲಾಟೆ ಶುರು ಮಾಡಿದ್ದಾರೆ. ಇದಕ್ಕೂ ಮೊದಲು ಸೋಮವಾರ ಬಿಜೆಪಿ ಶಾಸಕರಾದ ಮಿಹಿರ್ ಗೋಸ್ವಾಮಿ ಮತ್ತು ಸುದೀಪ್ ಮುಖೋಪಾಧ್ಯಾಯ ಎಂಬುವರನ್ನು ಸ್ಪೀಕರ್ ವಿಮನ್ ಬ್ಯಾನರ್ಜಿ ವಜಾಗೊಳಿಸಿದ್ದರು. ಇವರಿಬ್ಬರೂ ರಾಜ್ಯಪಾಲರ ಭಾಷಣದ ವೇಳೆ ಗದ್ದಲ ಸೃಷ್ಟಿಸಿದ್ದಾರೆ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿತ್ತು. ಈ ಇಬ್ಬರು ಶಾಸಕರ ಅಮಾನತು ವಿರೋಧಿಸಿ ಉಳಿದ ಶಾಸಕರು, ನಂದಿಗ್ರಾಮ ಶಾಸಕ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವಿಧಾನಸಭೆಯಿಂದ ಹೊರ ನಡೆದರು.
ಸೋಮವಾರ ಬಜೆಟ್ ಅಧಿವೇಶನದ ಪ್ರಾರಂಭದಲ್ಲಿ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ಭಾಷಣ ಮಾಡುವಾಗ ಬಿಜೆಪಿಯ ಶಾಸಕರು ಗಲಾಟೆ ಸೃಷ್ಟಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂಸಾಚಾರ ನಡೆದಿದೆ. ಇದಕ್ಕೆ ಕಾರಣ ಟಿಎಂಸಿ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ಗಲಾಟೆಯಿಂದ ಬೇಸತ್ತ ರಾಜ್ಯಪಾಲರು ಅರ್ಧಕ್ಕೆ ಭಾಷಣ ನಿಲ್ಲಿಸಿದರು. ಈ ವೇಳೆ ತೃಣಮೂಲ ಕಾಂಗ್ರೆಸ್ನ ಮಹಿಳಾ ಶಾಸಕಿಯರು ರಾಜ್ಯಪಾಲರ ಬಳಿ ಮಾತು ಮುಂದುವರಿಸುವಂತೆ ಬೇಡಿಕೊಂಡರೂ, ಅವರು ಭಾಷಣ ಮಾಡಿರಲಿಲ್ಲ. ಈ ಬಗ್ಗೆ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಸೋತರೂ, ಗೂಂಡಾಗಿರಿ ಮಾಡುವುದನ್ನು ಬಿಟ್ಟಿಲ್ಲ. ನಾಚಿಕೆ ಇಲ್ಲದವರು ಎಂದು ಹೇಳಿದ್ದರು.
ಇದನ್ನೂ ಓದಿ: Akshay Kumar: ‘ನಾನು ಕೆಲಸ ಮಾಡುತ್ತಿರೋದು ಹಣಕ್ಕಾಗಿ ಅಲ್ಲ’; ಅಚ್ಚರಿಯ ವಿಚಾರ ಹೇಳಿಕೊಂಡ ಅಕ್ಷಯ್ ಕುಮಾರ್!