ಭಾರತೀಯರನ್ನು ಉಕ್ರೇನ್‌ನಿಂದ ಮೊದಲೇ ಯಾಕೆ ಕರೆತರಲಿಲ್ಲ?; ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
ವಾರಾಣಸಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ, ಅಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಆದರೆ, ನರೇಂದ್ರ ಮೋದಿ ಮೋದಿ ಇಲ್ಲಿ ಚುನಾವಣಾ ಸಭೆ, ರ್ಯಾಲಿಗಳನ್ನು ಮಾಡುತ್ತಿದ್ದಾರೆ. ಅವರಿಗೆ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುವುದು ಮುಖ್ಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಾರಾಣಸಿ: ಉಕ್ರೇನ್‌ನಿಂದ (Ukraine) ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರತೀಯರು ಸಿಲುಕಿರುವಾಗ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ಪ್ರಚಾರ ಮಾಡುವಾಗ, ಕೇಂದ್ರ ಸರ್ಕಾರವು ಉಕ್ರೇನ್‌ನಲ್ಲಿರುವ ಭಾರತೀಯರನ್ನು ಯುದ್ಧದ ಮಧ್ಯೆ ತಮ್ಮಷ್ಟಕ್ಕೆ ಬಿಡುತ್ತಿದೆ ಎಂದು ಆರೋಪಿಸಿದ್ದಾರೆ.
“ಇದೀಗ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ, ಅಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದಾರೆ. ಆದರೆ, ನರೇಂದ್ರ ಮೋದಿ ಮೋದಿ ಇಲ್ಲಿ ಚುನಾವಣಾ ಸಭೆ, ರ್ಯಾಲಿಗಳನ್ನು ಮಾಡುತ್ತಿದ್ದಾರೆ. ಅವರಿಗೆ ನಿಜಕ್ಕೂ ಯಾವುದು ಮುಖ್ಯ? ನಮ್ಮ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುವುದು ಮುಖ್ಯವಲ್ಲವೇ?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
“ನೀವು (ನರೇಂದ್ರ ಮೋದಿ) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ, ಉಕ್ರೇನ್‌ನಲ್ಲಿ ರಷ್ಯಾ ಯುದ್ಧ ಸಾರಲಿದೆ ಎಂದು ಮೂರು ತಿಂಗಳ ಮೊದಲೇ ನಿಮಗೆ ತಿಳಿದಿದ್ದರೆ, ನೀವು ಭಾರತೀಯರನ್ನು ಉಕ್ರೇನ್‌ನಿಂದ ಏಕೆ ಮುಂಚಿತವಾಗಿಯೇ ಮರಳಿ ಕರೆತರಲಿಲ್ಲ?” ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
“ಯಾರೋ ಬಂಕರ್‌ಗಳಲ್ಲಿ ಮಲಗಿದ್ದಾರೆ, ಇನ್ಯಾರೋ ಆಹಾರ ಮತ್ತು ನೀರಿಲ್ಲದೆ ಬದುಕುತ್ತಿದ್ದಾರೆ. ಆದರೆ, ಮೋದಿ ಜೀ ನಿಮ್ಮ ಸರ್ಕಾರವು ತಾವಾಗಿಯೇ ಅವರಿಗೆ ಹಿಂತಿರುಗಲು ಸೂಚಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅದು ಹೇಗೆ ಸಾಧ್ಯ?” ಎಂದು ಬ್ಯಾನರ್ಜಿ ಹೇಳಿದರು.
ವಾರಾಣಸಿಯಲ್ಲಿ ವಿರೋಧ ಪಕ್ಷಗಳ ಜಂಟಿ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿದ್ದರೆ, ಮಾರ್ಚ್ 7ರಂದು ಮತದಾನ ನಡೆಯಲಿರುವ ಉತ್ತರ ಪ್ರದೇಶದ ಪೂರ್ವ ಭಾಗದ ಜೌನ್‌ಪುರ ಮತ್ತು ಚಂದುವಾಲಿಯಲ್ಲಿ ಮೋದಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. 2020ರಲ್ಲಿ ಸರ್ಕಾರವು ವಿಧಿಸಿದ ಲಾಕ್‌ಡೌನ್‌ನಿಂದಾಗಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ದೊಡ್ಡ ಪಟ್ಟಣಗಳಿಂದ ವಲಸೆ ಕಾರ್ಮಿಕರ ನಿರ್ಗಮನದ ಬಗ್ಗೆ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಆಂತರಿಕ ಕಲಹದ ನಡುವೆಯೂ ಸೋದರಳಿಯನಿಗೆ ಮತ್ತೆ ಟಿಎಂಸಿಯ ಉನ್ನತ ಹುದ್ದೆ ನೀಡಿದ ಮಮತಾ ಬ್ಯಾನರ್ಜಿ