ನವದೆಹಲಿ: ಕೇರಳದಲ್ಲಿ 35 ಸೀಟುಗಳು ಲಭಿಸಿದರೆ ಸರ್ಕಾರ ರಚಿಸುತ್ತೇವೆ ಎಂದು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಕೇರಳದಲ್ಲಿ ಸರ್ಕಾರ ರಚಿಸಲು 71 ಸೀಟುಗಳು ಬೇಡ. ಧರ್ಮಡಂ, ಪುದುಪ್ಪಳ್ಳಿ, ಹರಿಪ್ಪಾಡ್ ಮೊದಲಾದ ಚುನಾವಣೆ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ನೇಮಂನಲ್ಲಿ ಬಿಜೆಪಿ ಮತ್ತು ಸಿಪಿಎಂ ನಡುವೆ ಸ್ಪರ್ಧೆ ನಡೆಯಲಿದೆ. ಅಲ್ಲಿ ಉಮ್ಮನ್ ಚಾಂಡಿಯವರಂತ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸಬೇಕು. ಕೇರಳದೆಲ್ಲೆಡೆ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಸುರೇಂದ್ರನ್ ಹೇಳಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ದೆಹಲಿಯಲ್ಲಿರುವ ಪಕ್ಷದ ಚುನಾವಣಾ ಸಮಿತಿ ಜತೆ ಚರ್ಚಿಸುವುದಕ್ಕಾಗಿ ಸುರೇಂದ್ರನ್ ದೆಹಲಿಯಲ್ಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಪಕ್ಷದ ನಾಯರ ಜತೆ ಸಂಜೆ ಸಭೆ ನಡೆಯಲಿದೆ. ಇದಾದ ನಂತರ ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿನ ಮೂರನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಗ್ಗೆಯೂ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.
ಬಿಜೆಪಿಯ ಫಿಕ್ಸ್ಡ್ ಡೆಪಾಸಿಟ್ ಕಾಂಗ್ರೆಸ್ನಲ್ಲಿದೆ: ಪಿಣರಾಯಿ ವಿಜಯನ್
ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ನಂಬಿಕೊಂಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳದಲ್ಲಿ ಸರ್ಕಾರ ರಚಿಸಲು 35 ಸೀಟುಗಳು ಸಾಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಹೇಳಿಕೆಗೆ ಪಿಣರಾಯಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಕಣ್ಣೂರು ಜಿಲ್ಲೆಯ ಧರ್ಮಡಂನಲ್ಲಿ ಚುನಾವಣಾ ಪ್ರಚಾರದ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು , ಬಿಜೆಪಿಯ ಒಬ್ಬ ನಾಯಕ ನಮಗೆ 35 ಸೀಟುಗಳು ಸಿಕ್ಕಿದರೆ ಸಾಕು, ಬಾಕಿ ಸೀಟು ನಾವು ಗಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅವರು ಅಧಿಕಾರಕ್ಕೇರಲು ಅದು ಸಾಕಂತೆ. ಕೇರಳದಲ್ಲಿ ಅಧಿಕಾರಕ್ಕೇರಲು 71 ಸೀಟುಗಳು ಬೇಕಿರುವಾಗ 35 ಸೀಟುಗಳಿಸಿ ಹೇಗೆ ಅಧಿಕಾರಕ್ಕೇರಲಾಗುತ್ತದೆ?. ಅದು ಬಿಜೆಪಿಗೆ ಕಾಂಗ್ರೆಸ್ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಫಿಕ್ಸ್ಡ್ ಡೆಪಾಸಿಟ್ (ಸ್ಥಿರ ಠೇವಣಿ) ಕಾಂಗ್ರೆಸ್ನಲ್ಲಿದೆ ಎಂದು ಬಿಜೆಪಿ ಭಾವಿಸುತ್ತಿದೆ. ಈ ಸ್ಥಿರ ಠೇವಣಿಗಳನ್ನು ಗೆಲ್ಲಿಸಬೇಕೋ ಎಂದು ಕೇರಳದಲ್ಲಿ ಯುಡಿಎಫ್ಗೆ ಬೆಂಬಲ ನೀಡುವ ಜನರು ಯೋಚಿಸುತ್ತಿದ್ದಾರೆ. ನಾವು ಮೋಸ ಹೋಗಬಾರದು ಎಂದು ಅವರು ಚಿಂತಿಸುತ್ತಿದ್ದಾರೆ ಎಂದು ಪಿಣರಾಯಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಶಬರಿಮಲೆ ವಿಷಯದಲ್ಲಿ ಪಿಣರಾಯಿ ನಿಲುವು ಏನು? : ರಮೇಶ್ ಚೆನ್ನಿತ್ತಲ
ಶಬರಿಮಲೆ ವಿಷಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಪಕ್ಷದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ವಿಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಮತ್ತು ಅವರ ಪಕ್ಷ ಕಣ್ಣುಮುಚ್ಚಾಲೆ ಆಟ ಆಡುವುದನ್ನು ನಿಲ್ಲಿಸಬೇಕು. ಪಿಣರಾಯಿ ಭಕ್ತರ ಪರವಾಗಿ ನಿಲ್ಲುತ್ತಾರೆಯೋ ಇಲ್ಲವೋ ಎಂಬುದನ್ನು ಹೇಳಬೇಕು. ಶಬರಿಮಲೆಗೆ ಮಹಿಳೆಯರಿಗೂ ಪ್ರವೇಶ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದಾಗ, ಅದಕ್ಕೆ ಸಂಬಂಧಿಸಿದವರೊಂದಿಗೆ ಚರ್ಚೆ ಮಾಡಬೇಕು ಎಂದು ವಿಪಕ್ಷ ಹೇಳಿತ್ತು. ಆದರೆ ಅವತ್ತು ಅದನ್ನು ಮಾಡದೆ ಪುನರ್ ಪರಿಶೀಲನೆ ಅರ್ಜಿ ಬಂದರೆ ಚರ್ಚೆ ನಡೆಸುತ್ತೇವೆ ಎಂದು ಪಿಣರಾಯಿ ಹೇಳುತ್ತಿರುವುದು ಸಮಾಜಕ್ಕೆ ಮಾಡಿದ ವಂಚನೆ ಎಂದು ಚೆನ್ನಿತ್ತಲ ಕಿಡಿ ಕಾರಿದ್ದಾರೆ. ಶಬರಿಮಲೆ ವಿಷಯದಲ್ಲಿ ಸರ್ಕಾರದ ನಿರ್ಧಾರ ತಪ್ಪಾಗಿತ್ತು ಎಂದು ಹೇಳಿ ಸಿಪಿಎಂ ರಾಜ್ಯ ಕಾರ್ಯದರ್ಶಿ ವಿಜಯರಾಘವನ್ ಸಾರ್ವಜನಿಕವಾಗಿ ಕ್ಷಮಯಾಚಿಸಬೇಕು ಎಂದು ಚೆನ್ನಿತ್ತಲ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೇರಳ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಎಂ, ಯುವ ನಾಯಕರಿಗೆ ಮಣೆ
ಕೇರಳ ಕಾಂಗ್ರೆಸ್-ಎಂ ಅಭ್ಯರ್ಥಿಯಾಗಿ ಪಿರವಂನಿಂದ ಸ್ಪರ್ಧಿಸಲಿರುವ ಸಿಂಧುಮೋಳ್ನ್ನು ಪಕ್ಷದಿಂದ ಉಚ್ಚಾಟಿಸಿದ ಸಿಪಿಎಂ