Mamata Banerjee Attacked: ಉನ್ನತ ಮಟ್ಟದ ತನಿಖೆ ಆಗ್ರಹಿಸಿ ಚುನಾವಣಾ ಆಯೋಗ ಭೇಟಿ ಮಾಡಿದ ಟಿಎಂಸಿ ನಿಯೋಗ
ಮಮತಾ ಬ್ಯಾನರ್ಜಿ ಹಲ್ಲೆ ಪ್ರಕರಣ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಗಾಯವಾದ ಘಟನೆ ಅಚಾತುರ್ಯದಿಂದ ಘಟಿಸಿದ್ದಲ್ಲ. ಬದಲಾಗಿ ಇದೊಂದು ಪಿತೂರಿಯ ಭಾಗವಾಗಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಲೋಕಸಭಾ ಸದಸ್ಯ ಸೌಗತಾ ರಾಯ್ ಹೇಳಿದ್ದಾರೆ.
ದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ನಾಯಕಿ ಮಮತಾ ಬ್ಯಾನರ್ಜಿ ಮೇಲೆ ನಡೆದ ಹಲ್ಲೆಯ ಕುರಿತಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೋರಿ ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗ ಇಂದು (ಮಾರ್ಚ್ 12) ಚುನಾವಣಾ ಆಯೋಗವನ್ನು (EC) ಭೇಟಿ ಮಾಡಿದೆ. ಮಮತಾ ಬ್ಯಾನರ್ಜಿ, ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿ ಹಿಂದಿರುಗುವ ವೇಳೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆರು ಮಂದಿ ಟಿಎಂಸಿ ಸದಸ್ಯರ ನಿಯೋಗವು ಚುನಾವಣಾ ಆಯೋಗವನ್ನು ಭೇಟಿ ಮಾಡಿದೆ. ಮುಖ್ಯ ಚುನಾವಣಾ ಅಧಿಕಾರಿ ಸುನಿಲ್ ಅರೋರಾ ಅವರನ್ನು ಕೂಡ ಭೇಟಿಯಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಚುನಾವಣಾ ಆಯೋಗದ ಸದಸ್ಯರ ಜತೆ ಮಾತುಕತೆ ನಡೆಸಿದ ಟಿಎಂಸಿ ನಿಯೋಗ ಜ್ಞಾಪಕ ಪತ್ರವನ್ನೂ ಸಲ್ಲಿಸಿದೆ. ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಟ್ವೀಟ್ ಮತ್ತು ಇತರ ಮಾರ್ಗಗಳ ಮೂಲಕ ಹೇಗೆ ಗುರಿಯಾಗಿಸಿದ್ದಾರೆ ಎಂದೂ ಹೇಳಿದೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಗಾಯವಾದ ಘಟನೆ ಅಚಾತುರ್ಯದಿಂದ ಘಟಿಸಿದ್ದಲ್ಲ. ಬದಲಾಗಿ ಇದೊಂದು ಪಿತೂರಿಯ ಭಾಗವಾಗಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಲೋಕಸಭಾ ಸದಸ್ಯ ಸೌಗತಾ ರಾಯ್ ಹೇಳಿದ್ದಾರೆ. ಜತೆಗೆ ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಚುನಾವಣಾ ಆಯೋಗಕ್ಕೆ ನೀಡಿದ ಜ್ಞಾಪಕ ಪತ್ರದಲ್ಲಿ, ಆರೋಪ ಮಾಡಲಾಗಿದೆ. ಮಮತಾಗೆ ಗಾಯವಾಗುವಲ್ಲಿ ಸುವೇಂದು ಅಧಿಕಾರಿ ಸಹಚರರು ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ.
ವಿಡಿಯೊದಲ್ಲೇನಿದೆ? ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುವಾಗ ಎಸ್ಯುವಿ ಫುಟ್ಬೋರ್ಡ್ನಲ್ಲಿ ನಿಂತಿದ್ದಾರೆ. ಸಾಮಾನ್ಯ ರಾಜಕಾರಣಿಗಳು ಜನರನ್ನು ಭೇಟಿ ಮಾಡಿ, ಜನರೊಂದಿಗೆ ಸಂವಹನ ಮಾಡುವಂತೆ ಮಮತಾ ಫುಟ್ಬೋರ್ಡ್ನಲ್ಲಿ ನಿಂತಾಗ ಎಸ್ಯುವಿ ನಿಧಾನವಾಗಿ ಚಲಿಸಿದೆ. ಕಾರಿನ ಬಾಗಿಲು ಸ್ವಲ್ಪವೇ ತೆರೆದಿದ್ದು, ಮಮತಾ ವಿಂಡೊ ಫ್ರೇಮ್ ಮೇಲೆ ತೋಳು ಬಳಸಿ ನಮಸ್ಕಾರ ಮಾಡಿದ್ದಾರೆ. ಥಟ್ಟನೆ ಅಲ್ಲಿ ನೆರೆದಿದ್ದ ಜನರ ಗುಂಪು ಮುಂದೆ ನುಗ್ಗಿದ್ದು ಮಮತಾ ಹಿಂದಕ್ಕೆ ಬಿದ್ದರು. ಆ ಹೊತ್ತಿಗೆ ಕಾರಿನ ಬಾಗಿಲು ತಾಗಿ ಅವರಿಗೆ ಗಾಯಗಳಾಗಿರಬಹುದು ಎಂದು ವಿಡಿಯೊ ದೃಶ್ಯ ನೋಡಿ ಊಹಿಸಬಹುದು.
Moments before receiving the injury, this was how West Bengal CM Mamata Banerjee was mobbed today at Nandigram. The EC should answer how the police official’s allowed so many people in front of her car’s window. pic.twitter.com/FKy2Ggwmdp
— Sourav Sengupta (সৌরভ সেনগুপ্ত) (@sourav_sngupta) March 10, 2021
ನಡೆದ ಘಟನೆ ಏನು? ಪಶ್ಚಿಮ ಬಂಗಾಳದಲ್ಲಿ ಬುಧವಾರ ಸಂಜೆ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಹಲ್ಲೆಯಲ್ಲಿ ಅವರ ಕಾಲು ಮತ್ತು ಪಾದಕ್ಕೆ ಗಾಯವಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಮತಾ ಬ್ಯಾನರ್ಜಿ ಮೇಲೆ ಯಾರೂ ಹಲ್ಲೆ ನಡೆಸಿಲ್ಲ. ಇದು ರಾಜಕೀಯ ನಾಟಕ ಎಂದು ಬಿಜೆಪಿ ಆರೋಪಿಸಿತ್ತು. ಅದೇ ವೇಳೆ ಬಿಜೆಪಿ ಇದನ್ನೆಲ್ಲ ಮಾಡಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಟಿಎಂಸಿ ಆರೋಪ ನಿರಾಕರಿಸಿದ ಬಿಜೆಪಿ, ಮಮತಾ ಬ್ಯಾನರ್ಜಿ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಹೇಳಿದೆ.
Published On - 4:04 pm, Fri, 12 March 21