ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ ಆಡಳಿತಕ್ಕೆ ಬಂದು ಮೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಾರ್ಷಿಕೋತ್ಸವವನ್ನು (3ನೇ ವರ್ಷದ ವಾರ್ಷಿಕೋತ್ಸವ)ಅದ್ದೂರಿಯಾಗಿ ನಡೆಸಲು ಬಿಜೆಪಿ ಯೋಜನೆ ರೂಪಿಸುತ್ತಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರು. ಹಾಗೇ, 2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಗಳಿಸಿತು. ಆ ವರ್ಷ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23ರಂದು ಪ್ರಕಟವಾಗಿ, ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಮೇ 30ರಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ಹಾಗೇ ಎರಡನೇ ಅವಧಿಯ ಬಿಜೆಪಿ ಸರ್ಕಾರಕ್ಕೆ ಮುಂದಿನ ತಿಂಗಳು (ಮೇ ತಿಂಗಳು) ಮೂರು ವರ್ಷ ತುಂಬಲಿದ್ದು, ವಾರ್ಷಿಕೋತ್ಸವಕ್ಕೆ ಭರ್ಜರಿ ಪ್ಲ್ಯಾನ್ ನಡೆದಿದೆ ಎಂದು ವರದಿಯಾಗಿದೆ.
2019ರಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದಾಗಿನಿಂದಲೂ ಕೊವಿಡ್ 19 ಸಾಂಕ್ರಾಮಿಕದ ಹಾವಳಿಯೇ ಆಗಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಸರ್ಕಾರ ತೊಡಗಿಕೊಂಡಿತ್ತು. ಹಾಗೇ, ಸಾರ್ವಜನಿಕ ಸಭೆ, ಸಮಾರಂಭಗಳು, ಗುಂಪುಗೂಡುವಿಕೆಗಳಿಗೆಲ್ಲ ನಿರ್ಬಂಧವಿತ್ತು. ಹಾಗಾಗಿ ಕಳೆದ ಎರಡು ವರ್ಷಗಳ ವಾರ್ಷಿಕೋತ್ಸವವನ್ನು ಸರಿಯಾಗಿ ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಸಲ ಆಚರಣೆಯನ್ನು ಬೃಹತ್ ಪ್ರಮಾಣದಲ್ಲಿ ಮಾಡಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಸಂಭ್ರಮಾಚರಣೆ, ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ರಾಜೀವ್ ಚಂದ್ರಶೇಖರ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸಿ.ಟಿ.ರವಿ, ಡಿ.ಪುರಂದರೇಶ್ವರಿ, ರಾಜ್ಯಸಭಾ ಸದಸ್ಯರಾದ ಅನಿಲ್ ಬಲುನಿ, ವಿನಯ್ ಸಹಸ್ರಬುದ್ಧೆ ಮತ್ತು ಇತರರ ಪ್ರಮುಖ ನಾಯಕರು ಇದ್ದಾರೆ ಎಂದೂ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಂದಾಹಾಗೇ, ಬಿಜೆಪಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವ ಜತೆಗೆ ವಿಧಾನಸಭೆ ಚುನಾವಣೆಗಳಲ್ಲೂ ಭರ್ಜರಿ ಗೆಲುವು ಸಾಧಿಸುತ್ತಿದೆ. ಈ ಬಾರಿ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ನಾಲ್ಕು ರಾಜ್ಯಗಳಲ್ಲಿ ಗೆದ್ದಿದೆ. ಹಾಗಾಗಿ ವಾರ್ಷಿಕೋತ್ಸವ ವಿಶೇಷವಾಗಿ ನಡೆಸಲು ಸಮಿತಿ ಮುಂದಾಗಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಸರ್ಕಾರದ ವಿರುದ್ಧವೇ ನಾಲಗೆ ಹರಿಬಿಟ್ಟ ಪಿಎಸ್ಐ; ಗ್ರಾ.ಪಂ ಸದಸ್ಯರೆಲ್ಲರೂ ಲೋಫರ್ಗಳೆಂದ ಪಿಎಸ್ಐ ವಿಡಿಯೋ ವೈರಲ್