ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿಸಿ ವಾಪಸ್ ಬರುತ್ತಿದ್ದ ಸರ್ಪಂಚ್, ಬಸ್ ಚಾಲಕ ಸಾವು; ಐವರಿಗೆ ಗಂಭೀರ ಗಾಯ
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಬಾರಾಮುಲ್ಲಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸರ್ಪಂಚ್ ಫಯಾಜ್ ಅಹ್ಮದ್ ಭಟ್ ಮತ್ತು ಇತರರು ಮೃತಪಟ್ಟಿದ್ದು ತುಂಬ ನೋವು ಕೊಟ್ಟಿದೆ ಎಂದಿದ್ದಾರೆ.
ಶ್ರೀನಗರ: ಏಪ್ರಿಲ್ 24ರಂದು ಪಂಚಾಯತ್ ರಾಜ್ ದಿನಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಜಮ್ಮುವಿನ ಪಲ್ಲಿ ಗ್ರಾಮದಲ್ಲಿ ಭಾಷಣ ಮಾಡಿದ್ದ ಅವರು, ರ್ಯಾಲಿಯನ್ನೂ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಜಮ್ಮು ಭೇಟಿ ನಿಮಿತ್ತ, ಜಮ್ಮು-ಕಾಶ್ಮೀರ ಬಿಜೆಪಿ ನಾಯಕರು, ಬಹುತೇಕ ಎಲ್ಲ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸರ್ಪಂಚ್ಗಳು (ಗ್ರಾಮಗಳ ಮುಖ್ಯಸ್ಥರು) ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೀಗೆ ಪಲ್ಲಿ ಗ್ರಾಮದಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಬರುತ್ತಿದ್ದ ವೇಳೆ ಸರ್ಪಂಚ್ ಒಬ್ಬರು, ಬಸ್ ಚಾಲಕ ಮೃತಪಟ್ಟಿದ್ದಾರೆ. ಹಾಗೇ, ಪಂಚಾಯಿತಿಯೊಂದರ ಮೂವರು ಸದಸ್ಯರು ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಲ್ಲಿ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಪಂಚಾಯಿತಿ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಾಪಸ್ ತಮ್ಮ ಊರುಗಳಿಗೆ ಹೋಗಬೇಕಿದ್ದ ಪಂಚಾಯಿತಿ ಸದಸ್ಯರನ್ನು ಹೊತ್ತ ಜಮ್ಮು ಕಾಶ್ಮೀರ ರಸ್ತೆ ಸಾರಿಗೆ ಕಾರ್ಪೋರೇಶನ್ ಬಸ್ವೊಂದು ಅಪಘಾತಕ್ಕೀಡಾಗಿ ಈ ಸಾವು ಸಂಭವಿಸಿದೆ. ಬಾರಾಮುಲ್ಲಾ ಜಿಲ್ಲೆಯ ಪಟ್ಟಣ್ ಎಂಬಲ್ಲಿ ಈ ಬಸ್ಗೆ ಟಿಪ್ಪರ್ ಡಿಕ್ಕಿಯಾಗಿದೆ. ಕುಪ್ವಾರಾದ ಸರ್ಪಂಚ್ ಆಗಿದ್ದ ಫಯಾಜ್ ಭಟ್ ಮತ್ತು ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಐದು ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗೆ ಗಾಯಗೊಂಡವರಲ್ಲಿ, ಪಂಚಾಯಿತಿ ಸದಸ್ಯರ ರಕ್ಷಣೆಗಾಗಿ ಇದ್ದ ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ.
ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಬಾರಾಮುಲ್ಲಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸರ್ಪಂಚ್ ಫಯಾಜ್ ಅಹ್ಮದ್ ಭಟ್ ಮತ್ತು ಇತರರು ಮೃತಪಟ್ಟಿದ್ದು ತುಂಬ ನೋವು ಕೊಟ್ಟಿದೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ. ಹಾಗೇ ಮೃತರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ.
ಏಪ್ರಿಲ್ 24ರಂದು ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. 2019ರಲ್ಲಿ ಅಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಪ್ರಧಾನಿಯವರ ಮೊದಲ ಅಧಿಕೃತ ಭೇಟಿ ಇದಾಗಿತ್ತು. ಪಂಚಾಯಿತಿ ರಾಜ್ ದಿವಸ್ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಜಮ್ಮು-ಕಾಶ್ಮೀರದಲ್ಲಿ ಬನಿಹಾಲ್-ಖಾಜಿಗುಂಡ್ ಸುರಂಗ ಮತ್ತು ಎರಡು ಜಲವಿದ್ಯುತ್ ಯೋಜನೆ ಸೇರಿ ಒಟ್ಟು 20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಚಾಯಿತಿಯ ಸಾವಿರಾರು ಸದಸ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರ ಭೇಟಿಗೆ ಪಾಕ್ ನೂತನ ಪ್ರಧಾನಿ ಶೆಹ್ಬಾಝ್ ಷರೀಫ್ ಟೀಕೆ