ಮಸೀದಿಯಲ್ಲಿ ಆಜಾನ್ ಕೂಗುತ್ತಿದ್ದ ವೇಳೆಗೆ ಸರಿಯಾಗಿ ಮನೆಯಲ್ಲಿ ದೊಡ್ಡದಾಗಿ ಹಾಡು ಹಾಕುತ್ತಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು
ಮಸೀದಿಗಳಲ್ಲಿ ಆಜಾನ್ ವೇಳೆ ಅತ್ಯಂತ ಧ್ವನಿವರ್ಧಕದ ಮೂಲಕ ಅತ್ಯಂತ ದೊಡ್ಡದಾಗಿ ಕೇಳುವಂತೆ ಯಾಕೆ ಇಡಬೇಕು ಎಂಬುದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆಯುತ್ತಿದ್ದರೆ, ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸಾ, ಆಜಾನ್ ವಿವಾದ ನಡೆಯುತ್ತಿದೆ. ಅದರಲ್ಲೂ ಈ ಮಸೀದಿಗಳಲ್ಲಿ ಆಜಾನ್ ಕೂಗುವಾಗ ಧ್ವನಿವರ್ಧಕಗಳ ಬಳಕೆ ಮಾಡುವ ವಿಚಾರವಾಗಿ ಮಹಾ ವಿಕಾಸ ಅಘಾಡಿ ಸರ್ಕಾರ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS)ಯ ನಡುವೆ ಜಟಾಪಟಿ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ರೈಲ್ವೆ ರಕ್ಷಣಾ ದಳದಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿ (ಪಿಎಸ್ಐ) ಗಡಪ್ಪ ಮುಲ್ಕುನಾಯ್ಕ್ ಎಂಬುವರು, ಮಸೀದಿಯಲ್ಲಿ ಆಜಾನ್ ಕೂಗುತ್ತಿರುವ ವೇಳೆ, ಅದೇ ಸ್ಥಳದಲ್ಲಿ ಧ್ವನಿ ವರ್ಧಕದ ಮೂಲಕ ದೊಡ್ಡದಾಗಿ ಹಾಡೊಂದನ್ನು ಹಾಕಿ ವಿವಾದ ಸೃಷ್ಟಿಸಿದ್ದಾರೆ. ಪೊಲೀಸ್ ಅಧಿಕಾರಿ ವಿರುದ್ಧ, ಸಮಾಜದ ಎರಡು ಗುಂಪುಗಳ ನಡುವೆ ದ್ವೇಷ ಹರಡಿದ ಆರೋಪದಡಿ (ಮಹಾರಾಷ್ಟ್ರ ಪೊಲೀಸ್ ಆ್ಯಕ್ಟ್ 1951ರ ಸೆಕ್ಷನ್ 37 (1) ಮತ್ತು 3ರಡಿ) ಪ್ರಕರಣ ದಾಖಲಾಗಿದೆ.
ಗಡಪ್ಪ ಅವರ ಮನೆ ಔರಂಗಾಬಾದ್ನ ಸತಾರದಲ್ಲಿ ಮಸೀದಿಯೊಂದರ ಬಳಿಯೇ ಇದೆ. ಆ ಮಸೀದಿಯಲ್ಲಿ ಮುಸ್ಲಿಮರು ಆಜಾನ್ ಕೂಗುವ ವೇಳೆಗೆ ಸರಿಯಾಗಿ ಪೊಲೀಸ್ ಅಧಿಕಾರಿ ತನ್ನ ಮನೆಯಲ್ಲಿ ದೊಡ್ಡದಾಗಿ ಹಾಡು ಹಾಕುತ್ತಿದ್ದರು. ಇವರು ಹಾಕುತ್ತಿದ್ದ ಸಂಗೀತದ ಶಬ್ದದ ಮಟ್ಟ ಅತ್ಯಂತ ಉಚ್ಛವಾಗಿರುತ್ತಿತ್ತು. ಅದು ಸ್ಥಳದಲ್ಲಿ ವಾಸವಾಗಿದ್ದ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಹೀಗೆ ಅಲ್ಲಿನವರೇ ಕೆಲವರು ಪೊಲೀಸ್ ಕಂಟ್ರೊಲ್ ರೂಮಿಗೆ ಕರೆ ಮಾಡಿ, ಗಡಪ್ಪ ವಿರುದ್ಧ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ಗಡಪ್ಪ ಧ್ವನಿವರ್ಧಕವನ್ನು ಮಸೀದಿಯಿರುವ ದಿಕ್ಕಿಗೇ ಅಳವಡಿಸಿದ್ದಾರೆ. ಸರಿಯಾಗಿ ಮುಸ್ಲಿಮರು ಆಜಾನ್ ಕೂಗುವ ಹೊತ್ತಿಗೇ ಇವರೂ ದೊಡ್ಡದಾಗಿ ಸಂಗೀತ ಹಾಕುತ್ತಾರೆ ಎಂದು ಹೇಳಿದ್ದರು. ಈ ದೂರಿನ ಅನ್ವಯ ಸತಾರಾ ಪೊಲೀಸ್ ಸ್ಟೇಶನ್ನ ಪಿಎಸ್ಐ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೀಗೆ ಪೊಲೀಸರು ಬಂದ ಹೊತ್ತಲ್ಲೂ ಗಡಪ್ಪ ಮನೆಯಿಂದ ದೊಡ್ಡದಾಗಿ ಹಾಡು ಕೇಳುತ್ತಲೇ ಇತ್ತು.
ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ರೈಲ್ವೆ ರಕ್ಷಣಾ ದಳದ ಪೊಲೀಸ್ ಅಧಿಕಾರಿ ಮಾಡಿದ ಕೆಲಸ ಎಳ್ಳಷ್ಟೂ ಸರಿಯಲ್ಲ. ಇದು ಕೋಮು ಸಂಘರ್ಷಕ್ಕೆ ಕಾರಣವಾಗುತ್ತದೆ. ಈ ಪ್ರದೇಶದಲ್ಲಿನ ಕಾನೂನು-ಸುವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ. ಸತಾರಾದ ಪೊಲೀಸ್ ಆಯುಕ್ತರಾದ ಡಾ. ನಿಖಿಲ್ ಗುಪ್ತಾ ಈ ಕೇಸ್ನ್ನು ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಗಡಪ್ಪ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಆ್ಯಕ್ಟ್ 1951ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲು ಸೂಚಿಸಿದ್ದಾರೆ. ಯಾರೇ ಆದರೂ ಸರಿ, ಕೋಮು ಸೌಹಾರ್ದತೆ, ಸಾಮರಸ್ಯ ಕದಡುವ ಕೆಲಸ ಮಾಡಿದರೆ ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೆಲವು ವಾರಗಳ ಹಿಂದೆಯೇ ಆಯುಕ್ತರು ಎಚ್ಚರಿಕೆ ನೀಡಿದ್ದರು.
ಮಸೀದಿಗಳಲ್ಲಿ ಆಜಾನ್ ವೇಳೆ ಅತ್ಯಂತ ಧ್ವನಿವರ್ಧಕದ ಮೂಲಕ ಅತ್ಯಂತ ದೊಡ್ಡದಾಗಿ ಕೇಳುವಂತೆ ಯಾಕೆ ಇಡಬೇಕು ಎಂಬುದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನೆ. ಧ್ವನಿ ವರ್ಧಕ ತೆಗೆಸುವ ಬಗ್ಗೆ ಸರ್ಕಾರ ಮೇ 3ರೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಮೇ 3ರ ನಂತರ ಎಲ್ಲ ಮಸೀದಿಗಳ ಹೊರಭಾಗದಲ್ಲಿ ನಾವೂ ಧ್ವನಿವರ್ಧಕ ಹಾಕಿ ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಪ್ರಸಾರ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಉದ್ಧವ್ ಠಾಕ್ರೆ ಮನೆಯ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಜೈಲು ಸೇರಿದ್ದಾರೆ. ಬಿಜೆಪಿ ಕೂಡ ಮಹಾರಾಷ್ಟ್ರ ಸರ್ಕಾರದ ಕ್ರಮದ ಬಗ್ಗೆ ಕಿಡಿ ಕಾರುತ್ತಿದೆ.
ಇದನ್ನೂ ಓದಿ: Nokia G21: ಬಿಡುಗಡೆಯಾದ ದಿನವೇ ಭರ್ಜರಿ ಸದ್ದು ಮಾಡುತ್ತಿದೆ ನೋಕಿಯಾದ ಹೊಸ ಸ್ಮಾರ್ಟ್ಫೋನ್