ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಬಿಜೆಪಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ಬಹು ಕುತೂಹಲಕಾರಿ ತಿರುವು ಪಡೆಯುತ್ತಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಅಣ್ಣಾಮಲೈ ಅವರ ಜತೆಗೆ ನಟಿ ಖುಷ್ಬೂ ಅವರಿಗೂ ಟಿಕೆಟ್ ನೀಡಿದೆ. ಅರವಕುರಿಚಿ ಕ್ಷೇತ್ರದಿಂದ ಅಣ್ಣಾಮಲೈ ಸ್ಪರ್ಧಿಸಲಿದ್ದಾರೆ. ಎನ್ಡಿಎ ಮೈತ್ರಿಕೂಟದ ಭಾಗವಾಗಿ ತಮಿಳುನಾಡಿನ ವಿವಿಧ ಪ್ರಾಂತ್ಯಗಳಿಂದ 20 ಸ್ಥಾನಗಳಲ್ಲಿ ಸ್ಪರ್ಧೆ ನಡೆಸುವುದಾಗಿ ಬಿಜೆಪಿ ತಿಳಿಸಿದ್ದು, ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್.ಮುರುಗನ್ ಧಾರಾಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಿರಿಯ ಬಿಜೆಪಿ ನಾಯಕ, ಆರ್ಎಸ್ಎಸ್ ಮೂಲದ ನಾಯಕ ಎಚ್.ರಾಜಾ ಕರೈಕುಡಿ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ.
ಎನ್ಡಿಎ ಮೈತ್ರಿಕೂಟದ ಸಹವರ್ತಿ ಪಕ್ಷ ಎಐಎಡಿಎಂಕೆ ಜತೆ ಬಿಜೆಪಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಳೆತನ ಹೊಂದಿದೆ. ಹೀಗಾಗಿ ಕೇವಲ 29 ಸ್ಥಾನಗಳಲ್ಲಿ ಸ್ಪರ್ಧೆ ನಡೆಸುವುದಾಗಿ ಹಿರಿಯ ಬಿಜೆಪಿ ನಾಯಕ ಅರುಣ್ ಸಿಂಗ್ ತಿಳಿಸಿದ್ದಾರೆ.
ಅಣ್ಣಾಮಲೈ ಕೆಲ ತಿಂಗಳಿನಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು 2019 ಮೇ 18ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸುದೀರ್ಘ 6 ತಿಂಗಳ ಕಾಲ ಚಿಂತನೆ ನಡೆಸಿಯೇ ಹುದ್ದೆ ತ್ಯಜಿಸುತ್ತಿರುವುದಾಗಿ ಅವರು ತಿಳಿಸಿದ್ದರು. ರಾಜೀನಾಮೆ ನೀಡಿ 15 ತಿಂಗಳ ನಂತರ ದೆಹಲಿಯಲ್ಲಿ ಅಧಿಕೃತವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕದ ಸಿಂಗಂ ಎಂದೇ ಅವರು ಜನಪ್ರಿಯತೆ ಗಳಿಸಿದ್ದರು.
ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ.
ಐಎಡಿಎಂಕೆ ಜತೆ ಬಿಜೆಪಿ ದೋಸ್ತಿ
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಾವು ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಈಗಾಗಲೇ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ನಾಡಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ರಕ್ಷಣಾ ಕಾರಿಡಾರ್ ಸೇರಿ ಸಾಕಷ್ಟು ಯೋಜನೆಗಳು ಎನ್ಡಿಎ ಅಧಿಕಾರಾವಧಿಯಲ್ಲೇ ಬಂದಿದೆ. ಯುಪಿಎ ಅಧಿಕಾರಾವಧಿಯಲ್ಲಿ ರಾಜ್ಯವನ್ನು ಕಡೆಗಣಿಸಲಾಗಿತ್ತು ಎಂದು ನಡ್ಡಾ ಆರೋಪಿಸಿದ್ದಾರೆ.
ಸಸಿಕಾಂತ್ ಸೆಂಥಿಲ್ಗೆ ಟಿಕೆಟ್ ನೀಡುತ್ತಾ ಕಾಂಗ್ರೆಸ್?
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ತನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್ಗೆ 25 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಮಿಳುನಾಡು ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ ಸೇರಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆಯೇ ಎಂಬ ಕುತೂಹಲ ಹುಟ್ಟಿಕೊಂಡಿದೆ.
25 ವಿಧಾನಸಭೆ ಸೀಟು ಮತ್ತು ಕನ್ಯಾಕುಮಾರಿಯಲ್ಲಿ ಒಂದು ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧೆಗಿಳಿಯಲಿದೆ. ಕಳೆದ ವರ್ಷ ಕಾಂಗ್ರೆಸ್ ಸಂಸದ ಹೆಚ್. ವಸಂತಕುಮಾರ್ ಕೊವಿಡ್ ನಿಂದ ನಿಧನರಾದ ಹಿನ್ನೆಲೆಯಲ್ಲಿ ಕನ್ಯಾಕುಮಾರಿ ಲೋಕಸಭಾ ಸ್ಥಾನ ಖಾಲಿಯಾಗಿ ಉಳಿದಿತ್ತು. ಭಾನುವಾರ ಬೆಳಗ್ಗೆ ನಡೆದ ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮುಖ್ಯಸ್ಥ ಕೆ.ಎಸ್.ಅಳಗಿರಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಳಗಿರಿ, ಡಿಎಂಕೆ ಜತೆಗಿನ ಸೀಟು ಹಂಚಿಕೆ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ. 25 ವಿಧಾನಸಭಾ ಸ್ಥಾನಗಳಲ್ಲಿ ಹಾಗೂ ಕನ್ಯಾಕುಮಾರಿ ಲೋಕಸಭಾ ಸ್ಥಾನಕ್ಕಾಗಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಸಿಕಾಂಥ್ ಸೆಂಥಿಲ್ ಮತ್ತು ಅಣ್ಣಾಮಲೈ ಮೇಲೆ ನಿಂತಿದೆ ಎರಡು ರಾಷ್ಟ್ರೀಯ ಪಕ್ಷಗಳ ಭವಿಷ್ಯ!?
ಇದನ್ನೂ ಓದಿ: ಅವರು ಹೇಳಿದ್ದಕ್ಕೆ ರಾಜೀನಾಮೆ ಕೊಟ್ಟೆ -ಕೊನೆಗೂ ರಹಸ್ಯ ಬಿಚ್ಚಿಟ್ಟ ಕರುನಾಡ ‘ಸಿಂಗಂ’ ಅಣ್ಣಾಮಲೈ!
Published On - 4:00 pm, Sun, 14 March 21