
ನವದೆಹಲಿ, ಅಕ್ಟೋಬರ್ 15: ಭಾರತೀಯ ಜನತಾ ಪಕ್ಷ (ಬಿಜೆಪಿ) ಇಂದು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Elections) ತನ್ನ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಸೇರಿದಂತೆ 12 ಇತರ ಅಭ್ಯರ್ಥಿಗಳನ್ನು ಈ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಮೈಥಿಲಿ ದರ್ಭಂಗಾ ಜಿಲ್ಲೆಯ ಅಲಿನಗರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಮೈಥಿಲಿ ಠಾಕೂರ್ ಅವರು ಪಾಟ್ನಾದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಜೈಸ್ವಾಲ್ ಸಮ್ಮುಖದಲ್ಲಿ ನಿನ್ನೆ (ಮಂಗಳವಾರ) ಔಪಚಾರಿಕವಾಗಿ ಬಿಜೆಪಿಗೆ ಸೇರಿದ್ದರು. ಅದಾದ ಒಂದು ದಿನದ ನಂತರ ಅವರ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಮೈಥಿಲಿ ಠಾಕೂರ್ ಜೊತೆಗೆ, ಬಿಜೆಪಿ ಬಕ್ಸಾರ್‌ನಿಂದ ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರನ್ನು ಕಣಕ್ಕಿಳಿಸಿದೆ. ಪ್ರಶಾಂತ್ ಕಿಶೋರ್ ಅವರ ಜಾನ್ ಸೂರಜ್‌ನಿಂದ ಹೊರಬಂದ ನಂತರ ಮಿಶ್ರಾ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯುಗೆ ಸಮಾನ ಸೀಟು ಹಂಚಿಕೆ ಸಾಧ್ಯತೆ
ಇದರೊಂದಿಗೆ, ಬಿಜೆಪಿ ಇಲ್ಲಿಯವರೆಗೆ ಒಟ್ಟು 83 ಅಭ್ಯರ್ಥಿಗಳನ್ನು ಘೋಷಿಸಿದೆ. 71 ಹೆಸರುಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದ್ದು, ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ, ಜೊತೆಗೆ ರಾಮ್ ಕೃಪಾಲ್ ಯಾದವ್, ತಾರ್ಕಿಶೋರ್ ಪ್ರಸಾದ್ ಮತ್ತು ಮಂಗಲ್ ಪಾಂಡೆ ಅವರಂತಹ ಹಿರಿಯ ನಾಯಕರ ಹೆಸರನ್ನು ಘೋಷಿಸಲಾಗಿತ್ತು.
ಇದನ್ನೂ ಓದಿ: Bihar Elections: ಬಿಹಾರ ವಿಧಾನಸಭಾ ಚುನಾವಣೆ; ಬಿಜೆಪಿಯ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಈ ಹಿಂದೆ, ಮುಂಬರುವ ಎರಡು ಹಂತದ ಚುನಾವಣೆಗಳಿಗೆ ಎನ್‌ಡಿಎ ತನ್ನ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿತ್ತು. ಬಿಜೆಪಿ ಮತ್ತು ಜನತಾದಳ (ಯುನೈಟೆಡ್) 243 ಸದಸ್ಯರ ವಿಧಾನಸಭೆಯಲ್ಲಿ ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಗೆ 29 ಸ್ಥಾನಗಳನ್ನು ನೀಡಲಾಗಿದ್ದರೆ, ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಗೆ ತಲಾ 6 ಸ್ಥಾನಗಳನ್ನು ನೀಡಲಾಗಿತ್ತು.
243 ಸದಸ್ಯರ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ