ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬಂದಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ನಿಧನ
ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಕೇರಳದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಯುರ್ವೇದ ಚಿಕಿತ್ಸೆಗಾಗಿ ಕೂತಟ್ಟುಕುಲಂಗೆ ಬಂದಿದ್ದ ಅವರು, ವಾಕಿಂಗ್ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದೀಗ ಅವರ ಮೃತದೇಹವನ್ನು ಅವರ ದೇಶಕ್ಕೆ ಸಾಗಿಸಲು ಸಿದ್ಧತೆ ನಡೆಯುತ್ತಿದೆ.

ಕೇರಳ, ಅ.15: ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬಂದಿದ್ದ ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ (Raila Odinga) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಕೇರಳದ ಕೂತ್ತಟ್ಟುಕುಲಂನಲ್ಲಿ ವಾಕಿಂಗ್ ಹೋಗುವ ವೇಳೆ ರೈಲಾ ಒಡಿಂಗಾ ಕುಸಿದು ಬಿದ್ದಿದ್ದಾರೆ. 80 ವರ್ಷದ ರೈಲಾ ಒಡಿಂಗಾ ಆರು ದಿನಗಳ ಹಿಂದೆ ಆಯುರ್ವೇದ ಚಿಕಿತ್ಸೆಗಾಗಿ ಕೇರಳದ ಕೂತಟ್ಟುಕುಲಂಗೆ ಬಂದಿದ್ದರು. ಇವರ ಜತೆಗೆ ಅವರ ಮಗಳು ಮತ್ತು ಆಪ್ತ ಕುಟುಂಬ ಸದಸ್ಯ ಕೂಡ ಬಂದಿದ್ದಾರೆ.
ರೈಲಾ ಒಡಿಂಗಾ ಪ್ರತಿದಿನ ವಾಕಿಂಗ್ ಹೋಗುವಂತೆ ಇಂದು ಬೆಳಿಗ್ಗೆ ಕೂಡ ವಾಕಿಂಗ್ ಹೋಗಿದ್ದಾರೆ. ಈ ವೇಳೆ ಅವರಿಗೆ ಎದೆ ನೋವು ಬಂದು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಶ್ರೀಧರೀಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈಲಾ ಒಡಿಂಗಾ ಸಾವನ್ನಪ್ಪಿದ್ದಾರೆ.
ಅವರ ಮೃತದೇಹವನ್ನು ಕೂತಟ್ಟುಕುಲಂನ ದೇವ ಮಾತಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲು ಸೇರಿದಂತೆ ಹಲವು ಪ್ರಕ್ರಿಯೆಗಳು ನಡೆಯುತ್ತಿದ್ದು, ಅವರ ದೇಶಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಬೇಕಾದ ಎಲ್ಲ ತಯಾರಿಯನ್ನು ಮಾಡಲಾಗುತ್ತಿದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕೀನ್ಯಾದ ರಾಜಕೀಯದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದ ಒಡಿಂಗಾ, ರಾಷ್ಟ್ರೀಯ ಸಾಮರಸ್ಯ ಮತ್ತು ಸಾಂವಿಧಾನಿಕ ಸುಧಾರಣೆಯನ್ನು ತಂದವರು. ಹಾಗೂ 2008 ರಿಂದ 2013 ರವರೆಗೆ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ತಮ್ಮ ಭಾಷಣಗಳು ಹಾಗೂ ಜನರ ಜತೆಗೆ ಉತ್ತಮ ಸಂಬಂಧವನ್ನು ಹೊಂದಿರುವ ಪ್ರಧಾನಿ ಎಂಬ ಖ್ಯಾತಿಯನ್ನು ಪಡೆದಿದ್ದರು. ಆಧುನಿಕ ಕೀನ್ಯಾದ ಪ್ರಜಾಪ್ರಭುತ್ವವನ್ನು ರೂಪಿಸಿದ ಮಹಾನ್ ವ್ಯಕ್ತಿ ಎಂದು ಅಲ್ಲಿನ ದೇಶ ಅವರನ್ನು ಇಂದಿಗೂ ಗೌರವದಿಂದ ಕಾಣುತ್ತದೆ.
ಇದನ್ನೂ ಓದಿ: ಉತ್ತರಾಖಂಡದ ಹಳ್ಳಿಗಳಲ್ಲಿ ನಿಗೂಢ ಸೋಂಕು ಪತ್ತೆ? 30 ಗಂಟೆಗಳಲ್ಲಿ ಒಂಬತ್ತು ಜನ ಸಾವು
ಓಡಿಂಗಾ ಅವರು ದೀರ್ಘಕಾಲದವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು ಮತ್ತು ಆರೆಂಜ್ ಡೆಮಾಕ್ರಟಿಕ್ ಮೂವ್‌ಮೆಂಟ್‌ನ ಮುಖ್ಯಸ್ಥರಾಗಿದ್ದರು. ಅನೇಕ ಹೋರಾಟಗಳನ್ನು, ಸುಧಾರಣೆಗಳನ್ನು ತಂದ ಕೀರ್ತಿ ಇವರಿಗಿದೆ. ಇನ್ನು ಕೇರಳದಿಂದ ಅವರ ಮೃತದೇಹವನ್ನು ಸಾಗಿಸಲು ನವದೆಹಲಿಯಲ್ಲಿರುವ ಕೀನ್ಯಾ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೇರಳ ಸರ್ಕಾರ ಮತ್ತು ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




