ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಮನೆಯೆದುರು ಬಿಜೆಪಿ ಬೆಂಬಲಿಗರ ಪ್ರತಿಭಟನೆ; ತೇಜಸ್ವಿ ಸೂರ್ಯ ಮುಂದಾಳತ್ವ, ಗೇಟ್ ಧ್ವಂಸ

| Updated By: Lakshmi Hegde

Updated on: Mar 30, 2022 | 4:17 PM

ಬಿಜೆಪಿಯನ್ನು ನೋಡಿದರೆ ನಗು ಬರುತ್ತದೆ. ಅವರು ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದನ್ನು ಬಿಟ್ಟು, ದಿ ಕಾಶ್ಮೀರ್ ಫೈಲ್ಸ್ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಆ ಸಿನಿಮಾದ ಪೋಸ್ಟರ್​ ಅಂಟಿಸುತ್ತಿದ್ದಾರೆ ಎಂದೂ ಅರವಿಂದ್ ಕೇಜ್ರಿವಾಲ್​ ಹೇಳಿದ್ದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಮನೆಯೆದುರು ಬಿಜೆಪಿ ಬೆಂಬಲಿಗರ ಪ್ರತಿಭಟನೆ; ತೇಜಸ್ವಿ ಸೂರ್ಯ ಮುಂದಾಳತ್ವ, ಗೇಟ್ ಧ್ವಂಸ
ಅರವಿಂದ ಕೇಜ್ರಿವಾಲ್
Follow us on

ದಿ ಕಾಶ್ಮೀರ್ ಫೈಲ್ಸ್​ ಸಿನಿಮಾದ ಬಗ್ಗೆ ಮಾತನಾಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮನೆಯ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ಮನೆಯ ಎದುರಿನ ಗೇಟ್​ನ್ನು ಧ್ವಂಸಗೊಳಿಸಿದ್ದಾರೆ. ಭದ್ರತೆಗಾಗಿ ಹಾಕಿದ್ದ ಬ್ಯಾರಿಕೇಡ್​ಗಳು, ಕೇಜ್ರಿವಾಲ್​ ಮನೆಯ ಬಳಿಯಿದ್ದ ಸಿಸಿಟಿವಿ ಕ್ಯಾಮರಾಗಳೆಲ್ಲ ನಾಶಗೊಂಡಿವೆ. ಇಷ್ಟೆಲ್ಲ ಆದರೂ  ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಂಡಿಲ್ಲ, ಅವರು ಅಷ್ಟೆಲ್ಲ ದಾಂಧಲೆ ಎಬ್ಬಿಸುತ್ತಿದ್ದರೂ, ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಇಂದು ಆರೋಪಿಸಿದ್ದಾರೆ. ಈ ಬಗ್ಗೆ ಆಮ್​ ಆದ್ಮಿ ಪಕ್ಷ ಕೂಡ ಟ್ವೀಟ್ ಮಾಡಿದೆ.

ಪ್ರತಿಭಟನೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಡೆದಿದೆ ಎಂದು ಆಮ್​ ಆದ್ಮಿ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಇದನ್ನೆಲ್ಲ ನೋಡಿಕೊಂಡು ದೆಹಲಿ ಪೊಲೀಸರು ಸುಮ್ಮನಿದ್ದಾರಲ್ಲ ಎಂಬ ಟೀಕೆಯೂ ಕೇಳಿಬರುತ್ತಿದೆ.  ಆಪ್​ ನಾಯಕಿ ಅತಿಶಿ ಟ್ವೀಟ್ ಮಾಡಿ, ಬಿಜೆಪಿ ಬೆಂಬಲಿಗರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಮನೆಯ ಎದುರು ಈ ಪರಿಯ ರಂಪಾಟ ಮಾಡುತ್ತಿದ್ದರೂ ದೆಹಲಿ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ. ಇವರಿಗೆಲ್ಲ ಬೆಂಬಲ ಕೊಡುವಂತೆ ಪೊಲೀಸರಿಗೆ ಅಮಿತ್​ ಶಾ ಕಚೇರಿಯಿಂದ ಸೂಚನೆಯಿತ್ತಾ ಎಂದು ಪ್ರಶ್ನಿಸಿದ್ದಾರೆ.

ಆದರೆ ಕೆಲವೇ ಹೊತ್ತಲ್ಲಿ ದೆಹಲಿ ಪೊಲೀಸರು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯಾಹ್ನ 1ಗಂಟೆ ಹೊತ್ತಿಗೆ ಒಂದಷ್ಟು ಮಂದಿ ಪ್ರತಿಭಟನಾಕಾರರು ಮುಖ್ಯಮಂತ್ರಿ ಮನೆಯತ್ತ ನುಗ್ಗಿದರು. ಅಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನೆಲ್ಲ ಧ್ವಂಸಗೊಳಿಸಿದ್ದಾರೆ. ದೊಡ್ಡದಾಗಿ ಘೋಷಣೆ ಕೂಗುತ್ತ, ದಾಂಧಲೆ ಮಾಡುತ್ತಿದ್ದರು. ಅವರು ಪೇಂಟ್​ ಬಾಕ್ಸ್​ಗಳನ್ನು ತಂದು, ಸಿಎಂ ಮನೆಯ ಬಾಗಿಲಿನ ಕಡೆಗೆ ಎಸೆದಿದ್ದಾರೆ.  ನಾವು ಕೂಡಲೇ ಕಾರ್ಯಪ್ರವೃತ್ತರಾಗಿ ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಿದ್ದೇವೆ. ಘಟನೆಗೆ ಸಂಬಂಧಪಟ್ಟಂತೆ ಒಟ್ಟು 70 ಮಂದಿಯನ್ನು ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ದೆಹಲಿ ಉತ್ತರ ವಲಯದ ಡಿಸಿಪಿ ಸಾಗರ್ ಸಿಂಗ್​ ಕಲ್ಸಿ ತಿಳಿಸಿದ್ದಾರೆ.

ಸಿಎಂ ಕೇಜ್ರಿವಾಲ್​ ಏನು ಹೇಳಿದ್ದರು?

ಸದ್ಯ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಸುದ್ದಿಯಲ್ಲಿರುವ ದಿ ಕಾಶ್ಮೀರ್ ಫೈಲ್ಸ್​ ಬಗ್ಗೆ ಹಲವು ಪ್ರತಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೇ ಅರವಿಂದ್ ಕೇಜ್ರಿವಾಲ್ ಕಳೆದ ವಾರ ದೆಹಲಿ ವಿಧಾನಸಭೆಯಲ್ಲಿ ಮಾತನಾಡಿ, ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾಕ್ಕೆ ಬಿಜೆಪಿ ಸರ್ಕಾರವಿರುವ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಮಾಡಲಾಗಿದೆ. ಈ ಮೂಲಕ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ದೆಹಲಿಯಲ್ಲೂ ಸಿನಿಮಾವನ್ನು ಟ್ಯಾಕ್ಸ್ ಫ್ರೀ ಮಾಡುವಂತೆ ಬಿಜೆಪಿಗರು ಆಗ್ರಹಿಸುತ್ತಿದ್ದಾರೆ. ಅಷ್ಟಿದ್ದರೆ ಯೂಟ್ಯೂಬ್​​ನಲ್ಲಿ ಅಪ್ಲೋಡ್ ಮಾಡಿಕೊಳ್ಳಲಿ. ಎಲ್ಲರೂ ಉಚಿತವಾಗಿಯೇ ನೋಡುತ್ತಾರೆ ಎಂದು ಹೇಳಿದ್ದರು.

ಅಷ್ಟೇ ಅಲ್ಲ, ಬಿಜೆಪಿಯನ್ನು ನೋಡಿದರೆ ನಗು ಬರುತ್ತದೆ. ಅವರು ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವುದನ್ನು ಬಿಟ್ಟು, ದಿ ಕಾಶ್ಮೀರ್ ಫೈಲ್ಸ್ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಆ ಸಿನಿಮಾದ ಪೋಸ್ಟರ್​ ಅಂಟಿಸುತ್ತಿದ್ದಾರೆ. ಅವರೇನು ರಾಜಕೀಯಕ್ಕೆ ಬಂದಿದ್ದು ಸಿನಿಮಾ ಪೋಸ್ಟರ್ ಅಂಟಿಸಲಾ ಎಂದು ವ್ಯಂಗ್ಯವಾಡಿದ್ದರು. ಅರವಿಂದ್​ ಕೇಜ್ರಿವಾಲ್​ ಆಡಿದ ಈ ಮಾತುಗಳಿಂದ  ಕೆರಳಿದ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: IPL: ಮುಂದಿನ 5 ವರ್ಷಗಳ ಐಪಿಎಲ್ ಮಾಧ್ಯಮ ಹಕ್ಕು ಹರಾಜಿಗೆ ಟೆಂಡರ್ ಕರೆದ ಬಿಸಿಸಿಐ; ಮೇ 10 ಕೊನೆಯ ದಿನಾಂಕ

Published On - 3:33 pm, Wed, 30 March 22