AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ: ಪಶ್ಚಿಮ ಬಂಗಾಳದಲ್ಲಿ ಗುಡುಗಿದ ಅಮಿತ್ ಶಾ

ಮೂರು ದಶಕಗಳ ಕಾಲವನ್ನು ಕಾಂಗ್ರೆಸ್​ಗೆ, 27 ವರ್ಷಗಳನ್ನು ಕಮ್ಯುನಿಸ್ಟರಿ​ಗೆ, 10 ವರ್ಷಗಳನ್ನು ಮಮತಾ ದೀದಿಗೆ ನೀಡಿದ್ದೀರಿ. ಈಗ 5 ವರ್ಷಗಳನ್ನು ಭಾರತೀಯ ಜನತಾ ಪಾರ್ಟಿಗೆ ಕೊಡಿ. ನಾವು ಬಂಗಾಳವನ್ನು ಬಂಗಾರದ ಬಂಗಾಳವನ್ನಾಗಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ: ಪಶ್ಚಿಮ ಬಂಗಾಳದಲ್ಲಿ ಗುಡುಗಿದ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
TV9 Web
| Updated By: ganapathi bhat|

Updated on:Apr 06, 2022 | 11:31 PM

Share

ಕೋಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರಕ್ಕೇರಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಪಕ್ಷ ಸಂಘಟನೆಯ ಉದ್ದೇಶದಿಂದ ಅಮಿತ್ ಶಾ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ನಡೆಸುತ್ತಿದ್ದಾರೆ. ಪಕ್ಷದ ಪ್ರಚಾರ ಕೈಗೊಂಡಿದ್ದಾರೆ. ಪ್ರಚಾರಕ್ಕೂ ಮುನ್ನ ಕಾರ್ಯಕರ್ತರನ್ನು ಉದ್ದೇಶಿಸಿ, ಪಶ್ಚಿಮ ಮಿಡ್ನಾಪುರದ ಕಾಲೇಜು ಮೈದಾನದಲ್ಲಿ ಮಾತನಾಡಿದ್ದಾರೆ.

ಟಿಎಂಸಿ ಹಿರಿಯ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಇದು ಕೇವಲ ಆರಂಭವಷ್ಟೆ. ಚುನಾವಣೆಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಒಬ್ಬಂಟಿಯಾಗಿ ಉಳಿದಿರುತ್ತಾರೆ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಪಕ್ಷವನ್ನು ತೊರೆಯುವಂತೆ ಪಕ್ಷದ ನಾಯಕರಿಗೆ ಬಿಜೆಪಿ ಪ್ರೇರೇಪಿಸುತ್ತಿದೆ. ಬಿಜೆಪಿ ಟಿಎಂಸಿಯನ್ನು ಹಾಳುಗೆಡಹುತ್ತಿದೆ ಎಂಬ ಮಮತಾ ಬ್ಯಾನರ್ಜಿ ಆರೋಪಕ್ಕೆ ಅಮಿತ್ ಶಾ ಉತ್ತರಿಸಿದ್ದಾರೆ. ದೀದಿ (ಮಮತಾ ಬ್ಯಾನರ್ಜಿ) ಕಾಂಗ್ರೆಸ್ ತೊರೆದಾಗ, ಅದು ಪಕ್ಷದ್ರೋಹದ ಕೆಲಸ ಆಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾ, ನೀವು ಮೂರು ದಶಕಗಳ ಕಾಲವನ್ನು ಕಾಂಗ್ರೆಸ್​ಗೆ, 27 ವರ್ಷಗಳನ್ನು ಕಮ್ಯುನಿಸ್ಟ್​ಗೆ, 10 ವರ್ಷಗಳನ್ನು ಮಮತಾ ದೀದಿಗೆ ನೀಡಿದ್ದೀರಿ. ಈಗ 5 ವರ್ಷಗಳನ್ನು ಭಾರತೀಯ ಜನತಾ ಪಾರ್ಟಿಗೆ ಕೊಡಿ. ನಾವು ಬಂಗಾಳವನ್ನು ಬಂಗಾರದ ಬಂಗಾಳವಾಗಿಸುತ್ತೇವೆ ಎಂದು ಜನರಿಗೆ ಹೊಸ ಕನಸು ಬಿತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಸಹಿತ 12 ವಿಧಾನಸಭಾ ಸದಸ್ಯರು, ಒಬ್ಬರು ಎಂಪಿ ಮತ್ತು ಒಬ್ಬ ಮಾಜಿ ಎಂಪಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್ ಶಾ ಬೆಳಗ್ಗೆ ಸ್ವಾಮಿ ವಿವೇಕಾನಂದರ ವಂಶಸ್ಥರ ಮನೆ, ರಾಮಕೃಷ್ಣ ಆಶ್ರಮ, ಸಿದ್ಧೇಶ್ವರಿ ಕಾಳಿ ದೇವಾಲಯ, ಕ್ರಾಂತಿಕಾರಿ ಹೋರಾಟಗಾರ ಖುದಿರಾಮ್ ಬೋಸ್ ಮನೆಗೆ ಭೇಟಿ ನೀಡಿದ್ದರು. ಮಧ್ಯಾಹ್ನ ಬೆಲಿಜುರಿ ಗ್ರಾಮದ ರೈತನ ಮನೆಯಲ್ಲಿ ಊಟ ಮಾಡಿದ್ದರು. ಬಳಿಕ, ಬಿಜೆಪಿ ಪಕ್ಷದ ರಾಜ್ಯ ನಾಯಕರೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಮಿತ್ ಶಾ, ಇಂದು ರಾತ್ರಿ ಬಿಜೆಪಿಯ ಹಿರಿಯ ನಾಯಕರೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಪಶ್ಚಿಮ ಬಂಗಾಳ: ಅಮಿತ್ ಶಾ ಸಮ್ಮುಖದಲ್ಲಿ ಸುವೇಂದು ಅಧಿಕಾರಿ, 11 ಶಾಸಕರು, 1 ಎಂಪಿ ಬಿಜೆಪಿ ಸೇರ್ಪಡೆ

Published On - 6:27 pm, Sat, 19 December 20