ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್ ಫಂಗಸ್) ಸೋಂಕು ಪ್ರತಿದಿನ ಹೊಸಹೊಸ ಸ್ವರೂಪದಲ್ಲಿ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ. ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳಿಗೆ ಸಣ್ಣಕರುಳಿನಲ್ಲಿ ಬ್ಲ್ಯಾಕ್ ಫಂಗಸ್ (ಕಪ್ಪುಶಿಲೀಂದ್ರ) ಪತ್ತೆಯಾಗಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ. ಹಾಗೇ ಇದು ಅತಿವಿರಳ ಪ್ರಕರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಬ್ಲ್ಯಾಕ್ ಫಂಗಸ್ ದಿನೇದಿನೆ ಮಾರಕವಾಗಿ ಪರಿಣಮಿಸುತ್ತಿದೆ. ದೇಶಾದ್ಯಂತ ಇಲ್ಲಿಯವರೆಗೆ ಈ ಕಾಯಿಲೆಯಿಂದ 219 ಮಂದಿ ಮೃತಪಟ್ಟಿದ್ದಾಗಿ ಆರೋಗ್ಯ ಇಲಾಖೆಯ ಡಾಟಾದಲ್ಲಿ ಉಲ್ಲೇಖವಾಗಿದೆ. ಇಂದು ಹೇಳಿಕೆ ಬಿಡುಗಡೆ ಮಾಡಿರುವ ಸರ್ ಗಂಗಾರಾಮ್ ಆಸ್ಪತ್ರೆ, ನಮ್ಮಲ್ಲಿ ದಾಖಲಾಗಿರುವ ಇಬ್ಬರು ಕೊವಿಡ್ 19 ಸೋಂಕಿತರ ಸಣ್ಣ ಕರುಳಲ್ಲಿ ಕಪ್ಪು ಶಿಲೀಂದ್ರ ಪತ್ತೆಯಾಗಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಬ್ಲ್ಯಾಕ್ ಫಂಗಸ್ ಸೋಂಕು ಸಾಮಾನ್ಯವಾಗಿ ಕೊವಿಡ್ 19 ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳ ಶ್ವಾಸಕೋಶದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸಣ್ಣಕರುಳಲ್ಲಿ ಪತ್ತೆಯಾಗುವ ಮೂಲಕ ಅಪರೂಪದ ಪ್ರಕರಣ ಎನಿಸಿಕೊಂಡಿದೆ.
ಈ ಇಬ್ಬರೂ ಮಧುಮೇಹಿಗಳಾಗಿದ್ದು ಕೊವಿಡ್ 19ನಿಂದ ಚೇತರಿಸಿಕೊಳ್ಳುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ಲ್ಯಾಕ್ ಫಂಗಸ್ ಇರುವುದು ಗೊತ್ತಾಯಿತು. ಸಣ್ಣ ಕರುಳಲ್ಲಿ ಕಪ್ಪು ಶಿಲೀಂದ್ರ ಇರುವುದನ್ನು ನೋಡಿ ಅನುಮಾನಗೊಂಡು ಬಯಾಪ್ಸಿ ಮಾಡಲಾಯಿತು. ಬಯಾಪ್ಸಿ ವರದಿಯಿಂದ ಬ್ಲ್ಯಾಕ್ ಫಂಗಸ್ ಇರುವುದು ದೃಢಪಟ್ಟಿದೆ ಎಂದು ಆಸ್ಪತ್ರೆ ತಿಳಿಸಿದೆ. ಹಾಗೇ, ಇವರಿಬ್ಬರಲ್ಲಿ ಒಬ್ಬರಿಗೆ ಮಾತ್ರ ಚಿಕಿತ್ಸೆಯ ವೇಳೆ ಸ್ಟೀರಾಯ್ಡ್ ಕೊಡಲಾಗಿತ್ತು. ಮತ್ತೊಬ್ಬರಿಗೆ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಕೆ ಮಾಡಲಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಸಣ್ಣಕರುಳಿನಲ್ಲಿ ಮ್ಯೂಕೋರ್ಮೈಕೋಸಿಸ್ ಪತ್ತೆಯಾದ ಇಬ್ಬರು ರೋಗಿಗಳಲ್ಲಿ ಒಬ್ಬರಿಗೆ 56 ವರ್ಷವಾಗಿದೆ. ಇವರ ಕುಟುಂಬದ ಮೂವರು ಕೊವಿಡ್ 19 ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ಇವರಿಗೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆದರೆ ಆ್ಯಸಿಡಿಟಿ ಎಂದು ಮನೆಯಲ್ಲೇ ಔಷಧಿ ತೆಗೆದುಕೊಳ್ಳುತ್ತಿದ್ದರು. ಆದರೆ ಕಡಿಮೆಯಾಗದೆ ಇದ್ದಾಗ ಮತ್ತೆ ಬಂದು ದಾಖಲಾದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹಾಗೇ ಇವರಿಗೆ ತತ್ಕ್ಷಣವೇ ಆ್ಯಂಟಿ-ಫಂಗಲ್ ಚಿಕಿತ್ಸೆ ಶುರು ಮಾಡಿದ್ದೇವೆ ಎಂದೂ ಹೇಳಿದ್ದಾರೆ.
ಹಾಗೇ ಇನ್ನೊಬ್ಬ ರೋಗಿಯ ವಯಸ್ಸು 68 ವರ್ಷ. ಇವರಿಗೆ ಕೊವಿಡ್ 19 ಸೋಂಕಿಗೆ ಚಿಕಿತ್ಸೆ ನೀಡುವಾಗ ಸ್ಟೀರಾಯ್ಡ್ ಬಳಕೆ ಮಾಡಲಾಗಿತ್ತು. ಇವರೂ ಸಹ ಸೋಂಕಿನಿಂದ ಮುಕ್ತರಾದ ಬಳಿಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸಿಟಿ ಸ್ಕ್ಯಾನ್ ಮಾಡಿದಾಗ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Ashden Award: ಅಂತಿಮ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್
Black Fungus in two Covid-19 patients intestine revealed by Delhi Sir Ganga Ram Hospital