ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ, ಭತ್ತ ಕಟಾವು ಮಾಡುತ್ತಿದ್ದ 40ಕ್ಕೂ ಹೆಚ್ಚು ರೈತರ ಹತ್ಯೆ
ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸಕ್ಕೆ ಭತ್ತ ಕಟಾವು ಮಾಡುತ್ತಿದ್ದ 40ಕ್ಕೂ ಹೆಚ್ಚು ರೈತರ ಹತ್ಯೆಯಾಗಿರುವ ಘಟನೆ ನೈಜೀರಿಯಾದ ಉತ್ತರ ಬೊರ್ನೊ ರಾಜ್ಯದ ಗರಿನ್ ಕ್ವಾಶೆಬೆಯಲ್ಲಿ ನಡೆದಿದೆ.
ಮೈದ್ಗುರಿ: ನೈಜೀರಿಯಾದ ಉತ್ತರ ಬೊರ್ನೊದ ಗದ್ದೆಗಳಲ್ಲಿ ಭಕ್ತ ಕಟಾವು ಮಾಡುತ್ತಿದ್ದ 40 ರೈತರು ಮತ್ತು ಮೀನುಗಾರರನ್ನು ಶಂಕಿತ ಇಸ್ಲಾಮಿಕ್ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಹಂತಕರು ಇಸ್ಲಾಮಿಕ್ ಉಗ್ರಗಾಮಿ ತಂಡದ ಬೊಕೊ ಹರಮ್ ಗುಂಪಿಗೆ ಸೇರಿದವರಾಗಿದ್ದಾರೆ.
ಉತ್ತರ ಬೊರ್ನೊ ರಾಜ್ಯದ ಗರಿನ್-ಕ್ವಾಶೆಬೆಯ ಗದ್ದೆಯಲ್ಲಿ ರೈತರು ಭಕ್ತ ಕಟಾವು ಮಾಡುತ್ತಿದ್ದರು. ಈ ವೇಳೆ ಅವರನ್ನು ಸುತ್ತುವರಿದ ಶಸ್ತ್ರಸಜ್ಜಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. 60ಕ್ಕೂ ಹೆಚ್ಚು ರೈತರ ಮೇಲೆ ದಾಳಿ ನಡೆದಿದೆ. ಹಾಗೂ ಘಟನೆಯಲ್ಲಿ 40 ರೈತರು ಮೃತಪಟ್ಟಿದ್ದಾರೆ. ಈ ಬಗ್ಗೆ ಬೊರ್ನೊ ರಾಜ್ಯದ ಭತ್ತ ಬೆಳೆಗಾರರ ಸಂಘದ ಮುಖಂಡ ಮಲಮ್ ಝಬಾರ್ಮರಿ ಅವರು ಖಚಿತ ಪಡಿಸಿದ್ದಾರೆ.
ಇನ್ನು ಇಲ್ಲಿಯವರೆಗೆ 44 ಮೃತದೇಹಗಳು ಪತ್ತೆಯಾಗಿದ್ದು, ಮೃತದ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಮೆಂಬರ್ ಆಫ್ ದಿ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅಹಮದ್ ಸತೋಮಿ ತಿಳಿಸಿದ್ದಾರೆ.