ಕೊರೊನಾ ಸೋಂಕಿನಿಂದ ಬಿಜೆಪಿ ಶಾಸಕಿ ಸಾವು; ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಓಂ ಬಿರ್ಲಾ ಸಂತಾಪ
ಕಿರಣ್ ಮಹೇಶ್ವರಿ 2004ರಿಂದ 2009ರವರೆಗೆ ರಾಜಸ್ಥಾನದ ಉದಯ್ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದವರೂ ಹೌದು. ಅಕ್ಟೋಬರ್ನಲ್ಲಿ ನಡೆದ ಕೋಟಾ ಉತ್ತರ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಕಿರಣ್ ಮಹೇಶ್ವರಿ, ಅದಾದ ಬಳಿಕ ಕೊರೊನಾ ಸೋಂಕಿಗೆ ಒಳಗಾಗಿದ್ದರು.
ರಾಜಸಮಂದ್ (ರಾಜಸ್ಥಾನ): ಕೊರೊನಾ ಸೋಂಕಿನಿಂಧ ಅದೆಷ್ಟೋ ಪ್ರಮುಖ ರಾಜಕಾರಣಿಗಳು ಜೀವ ಕಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಸೋಂಕಿನಿಂದ ಮೃತಪಟ್ಟಿದ್ದರು. ಇದೀಗ ಬಿಜೆಪಿಯ ಶಾಸಕಿಯೋರ್ವರು ಇದೇ ಸೋಂಕಿಗೆ ಬಲಿಯಾಗಿದ್ದಾರೆ.
ರಾಜಸ್ಥಾನದ ರಾಜಸಮಂದ್ ಕ್ಷೇತ್ರದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿನ್ನೆ ಸಂಜೆ ಹರ್ಯಾಣದ ಗುರುಗ್ರಾಮದಲ್ಲಿರುವ ಮೇದಾಂತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಿರಣ್ ಮಹೇಶ್ವರಿ ನವೆಂಬರ್ ಪ್ರಾರಂಭದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಸ್ವಲ್ಪದಿನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೂ ಕ್ರಮೇಣ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕಿರಣ್ ಮಹೇಶ್ವರಿ 2004ರಿಂದ 2009ರವರೆಗೆ ರಾಜಸ್ಥಾನದ ಉದಯ್ಪುರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದವರೂ ಹೌದು. ಅಕ್ಟೋಬರ್ನಲ್ಲಿ ನಡೆದ ಕೋಟಾ ಉತ್ತರ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಕಿರಣ್ ಮಹೇಶ್ವರಿ, ಅದಾದ ಬಳಿಕ ಕೊರೊನಾ ಸೋಂಕಿಗೆ ಒಳಗಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಸಂತಾಪ ಕಿರಣ್ ಮಹೇಶ್ವರಿ ಅವರ ಅಕಾಲಿಕ ಮರಣ ನೋವು ತಂದಿದೆ. ಬಿಜೆಪಿ ಶಾಸಕಿ, ಸಂಸದೆ, ರಾಜಸ್ಥಾನದ ಸಚಿವೆಯಾಗಿ ಬಡವರ, ಹಿಂದುಳಿದವರ ಸಬಲೀಕರಣಕ್ಕಾಗಿ ಶ್ರಮಿಸಿದವರು. ರಾಜಸ್ಥಾನ ಅಭಿವೃದ್ಧಿಗಾಗಿ ಪ್ರಯತ್ನಿಸಿದವರು. ಓಂ ಶಾಂತಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
Published On - 10:12 am, Mon, 30 November 20