ದೆಹಲಿಯ ಲೇಡಿ ಶ್ರೀರಾಮ್, ವೆಂಕಟೇಶ್ವರ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ
ಬುಧವಾರ ಕೇಂದ್ರ ಗೃಹ ಸಚಿವಾಲಯದ ಕಚೇರಿಗೆ ಹುಸಿ ಬೆದರಿಕೆ ಬಂದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಈ ಹಿಂದೆ, ದೆಹಲಿ-ಎನ್‌ಸಿಆರ್ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು. ಮೊನ್ನೆ ಗುರುವಾರ, ಕರ್ನಾಟಕದ ಬೆಂಗಳೂರಿನ ಪಂಚತಾರಾ ಹೋಟೆಲ್ ಸೇರಿದಂತೆ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿತ್ತು
ದೆಹಲಿ ಮೇ 23: ಕಳೆದ ಕೆಲವು ದಿನಗಳಿಂದ ಬಾಂಬ್ ಬೆದರಿಕೆ ಕರೆ (Bomb threat calls) ಪ್ರಕರಣಗಳು ವರದಿ ಆಗುತ್ತಿವೆ. ಇದೀಗ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜು (Lady Shri Ram College) ಮತ್ತು ದೆಹಲಿ ವಿಶ್ವವಿದ್ಯಾಲಯದ ಶ್ರೀ ವೆಂಕಟೇಶ್ವರ ಕಾಲೇಜ್‌ಗೆ(Sri Venkateswara College) ಗುರುವಾರ ಬಾಂಬ್ ಬೆದರಿಕೆಯ ಕುರಿತು ಕರೆಗಳು ಬಂದಿದ್ದು, ಅಗ್ನಿಶಾಮಕ ಟೆಂಡರ್‌ಗಳು ಮತ್ತು ದೆಹಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಬುಧವಾರ ಕೇಂದ್ರ ಗೃಹ ಸಚಿವಾಲಯದ ಕಚೇರಿಗೆ ಹುಸಿ ಬೆದರಿಕೆ ಬಂದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಈ ಹಿಂದೆ, ದೆಹಲಿ-ಎನ್‌ಸಿಆರ್ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು.
ಮೊನ್ನೆ ಗುರುವಾರ, ಕರ್ನಾಟಕದ ಬೆಂಗಳೂರಿನ ಪಂಚತಾರಾ ಹೋಟೆಲ್ ಸೇರಿದಂತೆ ಮೂರು ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿತ್ತು
ಎಪ್ರಿಲ್ 30 ರಂದು ದೆಹಲಿಯ ಚಾಚಾ ನೆಹರು ಆಸ್ಪತ್ರೆಗೆ ಬೆದರಿಕೆ ಬಂದ ನಂತರ ಮೇ 1 ರಂದು 150 ಶಾಲೆಗಳಿಗೆ ರಷ್ಯಾ ಮೂಲದ ಮೇಲಿಂಗ್ ಸೇವಾ ಕಂಪನಿಯಿಂದ ಶಾಲೆಗಳಿಗೆ ಬೆದರಿಕೆಗಳನ್ನು ನೀಡಲಾಯಿತು. ಇಪ್ಪತ್ತು ಆಸ್ಪತ್ರೆಗಳು, IGI ವಿಮಾನ ನಿಲ್ದಾಣ ಮತ್ತು ದೆಹಲಿಯ ಉತ್ತರ ರೈಲ್ವೆಯ CPRO ಕಚೇರಿಗೆ ಮೇ 12 ರಂದು ಸೈಪ್ರಸ್ ಮೂಲದ ಮೇಲಿಂಗ್ ಸೇವಾ ಕಂಪನಿಯಿಂದ ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದವು.
ಮೇ 14 ರಂದು ಅದೇ ಸೈಪ್ರಸ್ ಮೂಲದ ಮೇಲಿಂಗ್ ಸೇವಾ ಕಂಪನಿಯಿಂದ ದೆಹಲಿಯ ಏಳು ಆಸ್ಪತ್ರೆಗಳು ಮತ್ತು ತಿಹಾರ್ ಜೈಲಿಗೆ ಬಾಂಬ್ ಬೆದರಿಕೆಗಳು ಬಂದವು. ಗೃಹ ಸಚಿವಾಲಯದ ಕಚೇರಿಯ ಹಿರಿಯ ಅಧಿಕಾರಿಯೊಬ್ಬರಿಗೆ ಬೆದರಿಕೆ ಇಮೇಲ್ ಬಂದಿದ್ದು “ಬಾಂಬ್ ಹಾಕಿ ಕಟ್ಟಡವನ್ನು ಸ್ಫೋಟಿಸಲಾಗುವುದು ಎಂದು ಅದರಲ್ಲಿ ಬರೆದಿತ್ತು.
ಈ ತಿಂಗಳ ಆರಂಭದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 150 ಶಾಲೆಗಳಿಗೆ ಬಂದ ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಮೇ 21 ರಂದು ಹೇಳಿದ್ದರು.
ದೆಹಲಿ-ಎನ್‌ಸಿಆರ್‌ನಾದ್ಯಂತ ಭೀತಿಗೆ ಕಾರಣವಾದ ಬಾಂಬ್ ಬೆದರಿಕೆ ಕರೆಯ ಹಿಂದಿನ ಪಿತೂರಿ ಮತ್ತು ಉದ್ದೇಶವನ್ನು ಬಿಚ್ಚಿಡಲು ಪೊಲೀಸರು ಇಮೇಲ್‌ಗಳನ್ನು ಕಳುಹಿಸಲು ಬಳಸಿದ ಐಪಿ ವಿಳಾಸ, ಮೇಲ್ ಕಳುಹಿಸುವವರು ಮತ್ತು ಮೇಲ್‌ನ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.. ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಭಯೋತ್ಪಾದಕ ಗುಂಪು ರೂಪಿಸಿದ “ಪಿತೂರಿ” ಎಂಬ ಶಂಕೆಯನ್ನು ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳು ಹೇಳಿದ್ದು, ಬೆದರಿಕೆ ಮೇಲ್ ಅನ್ನು ಐಸಿಸ್ ಮಾಡ್ಯೂಲ್ ಕಳುಹಿಸಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾರ್ತ್ ಬ್ಲಾಕ್‌ನಲ್ಲಿರುವ ಗೃಹ ಸಚಿವಾಲಯದ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್
ಏಪ್ರಿಲ್‌ನಲ್ಲಿ, ಖಾಸಗಿ ಶಾಲೆಗಳಲ್ಲಿನ ಬಾಂಬ್ ಬೆದರಿಕೆ ಕರೆ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರದಿಂದ ವಿವರವಾದ ಸ್ಥಿತಿ ವರದಿಯನ್ನು ಹೈಕೋರ್ಟ್ ಕೋರಿತ್ತು.
ಮೇ 17 ರಂದು, ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್‌ಗೆ ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ನಕಲಿ ಬಾಂಬ್ ಬೆದರಿಕೆಗಳ ಬಗ್ಗೆ ಸ್ಥಿತಿ ವರದಿಯನ್ನು ಸಲ್ಲಿಸಿದರು. ಐದು ಬಾಂಬ್ ನಿಷ್ಕ್ರಿಯ ದಳಗಳನ್ನು ನಿಯೋಜಿಸಲು ಮತ್ತು ಪ್ರತಿ ಜಿಲ್ಲೆ, ಐಜಿಐ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಮತ್ತು ಮೆಟ್ರೋ ಪ್ರದೇಶಗಳಲ್ಲಿ 18 ಬಾಂಬ್ ಪತ್ತೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Thu, 23 May 24