ಲಖನ್ ಭಯ್ಯಾ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ
2006ರಲ್ಲಿ ಛೋಟಾ ರಾಜನ್ ಗ್ಯಾಂಗ್‌ನ ಆರೋಪಿ ರಾಮ್‌ನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾ ಎಂಬಾತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಕ್ಕಾಗಿ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ, ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾಗೆ ಜೀವಾವಧಿ ಶಿಕ್ಷೆ. ಶರ್ಮಾ ತಮ್ಮ ಅವಧಿಯಲ್ಲಿ 112 ಗ್ಯಾಂಗ್ಸ್ಟರ್ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ.
ಮುಂಬೈ ಮಾರ್ಚ್ 19: 2006ರಲ್ಲಿ ಛೋಟಾ ರಾಜನ್ ಗ್ಯಾಂಗ್‌ನ ಆರೋಪಿ ರಾಮ್‌ನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾ ಎಂಬಾತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದಕ್ಕಾಗಿ ಬಾಂಬೆ ಹೈಕೋರ್ಟ್ (Bombay High Court) ಮಂಗಳವಾರ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ, ಎನ್‌ಕೌಂಟರ್ ಸ್ಪೆಷಲಿಸ್ಟ್ (encounter specialist) ಪ್ರದೀಪ್ ಶರ್ಮಾಗೆ(Pradeep Sharma) ಜೀವಾವಧಿ ಶಿಕ್ಷೆ ವಿಧಿಸಿದೆ. ಶರ್ಮಾ ಅವರನ್ನು ಖುಲಾಸೆ ಮಾಡಿದ ಸೆಷನ್ಸ್ ನ್ಯಾಯಾಲಯ ತೀರ್ಪು ವಿರುದ್ಧ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಅನುಮತಿಸುವಾಗ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ-ದೇರೆ ಮತ್ತು ಗೌರಿ ವಿ ಗೋಡ್ಸೆ ಅವರ ಪೀಠವು ವಿಚಾರಣಾ ನ್ಯಾಯಾಲಯ ಕಲೆಹಾಕಿದ ಮಾಹಿತಿ ಸಮರ್ಥನೀಯವಲ್ಲ ಎಂದು ಹೇಳಿದ್ದು ಮೂರು ವಾರಗಳಲ್ಲಿ ಶರಣಾಗುವಂತೆ ಶರ್ಮಾಗೆ ಸೂಚಿಸಿದೆ.
ಈ ಪ್ರಕರಣದಲ್ಲಿ ಇತರ 12 ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಹಿತೇಶ್ ಸೋಲಂಕಿ ಅವರ ಶಿಕ್ಷೆಯನ್ನು ಪೀಠವು ಎತ್ತಿಹಿಡಿದಿದೆ. ಆದಾಗ್ಯೂ, ಇದು ಇತರ ನಾಗರಿಕರಾದ ಮನೋಜ್ ಮೋಹನ್ ರಾಜ್ ಅಲಿಯಾಸ್ ಮನ್ನು, ಶೈಲೇಂದ್ರ ಪಾಂಡೆ ಮತ್ತು ಸುರೇಶ್ ಶೆಟ್ಟಿ ಅವರನ್ನು ಖುಲಾಸೆಗೊಳಿಸಿತು.
ಶಿಕ್ಷೆಗೊಳಗಾದ ಪೊಲೀಸ್ ಅಧಿಕಾರಿಗಳೆಂದರೆ ದಿಲೀಪ್ ಪಲಾಂಡೆ, ನಿತಿನ್ ಸರ್ತಾಪೆ, ಗಣೇಶ್ ಹರ್ಪುಡೆ, ಆನಂದ್ ಪಟಾಡೆ, ಪ್ರಕಾಶ್ ಕದಂ, ದೇವಿದಾಸ್ ಸಕ್ಪಾಲ್, ಪಾಂಡುರಂಗ ಕೋಕಂ, ರತ್ನಾಕರ ಕಾಂಬಳೆ, ಸಂದೀಪ್ ಸರ್ದಾರ್, ತಾನಾಜಿ ದೇಸಾಯಿ, ಪ್ರದೀಪ್ ಸೂರ್ಯವಂಶಿ ಮತ್ತು ವಿನಾಯಕ್ ಶಿಂಧೆ.
ಜನಾರ್ದನ್ ಭಾಂಗೆ ಎಂಬ ನಾಗರಿಕ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಅರವಿಂದ್ ಸರ್ವಾಂಕರ್ ಅವರು ಮೇಲ್ಮನವಿಗಳ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಂಗ ಬಂಧನದಲ್ಲಿ ಸಾವನ್ನಪ್ಪಿದ್ದರಿಂದ ಅವರ ಮೇಲ್ಮನವಿಗಳು ಕ್ಷೀಣಿಸಲ್ಪಟ್ಟಿವೆ ಎಂದು ಪೀಠ ಹೇಳಿದೆ. ವರ್ಸೋವಾದ ನಾನಾ ನಾನಿ ಪಾರ್ಕ್ ಬಳಿ ಲಖನ್ ಭಯ್ಯಾ ಹತ್ಯೆಗೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದ 11 ವರ್ಷಗಳ ನಂತರ 62ರ ಹರೆಯದ ಶರ್ಮಾಗೆ ಶಿಕ್ಷೆ ವಿಧಿಸಲಾಗಿದೆ
ಮುಂಬೈ ಪೋಲೀಸ್ ಪಡೆಯಲ್ಲಿದ್ದ ಪ್ರದೀಪ್ ಶರ್ಮಾ ಗ್ಯಾಂಗ್ಸ್ಟರ್ಗಳಿಗೆ ಸಿಂಹಸ್ವಪ್ನವಾಗಿದ್ದರು. ಶರ್ಮಾ ತಮ್ಮ ಅವಧಿಯಲ್ಲಿ 112 ಗ್ಯಾಂಗ್ಸ್ಟರ್ಗಳನ್ನು ಹತ್ಯೆ ಮಾಡಿರುವುದಾಗಿ ಹೇಳಿದ್ದಾರೆ.
ಯಾರು ಈ ಪ್ರದೀಪ್ ಶರ್ಮಾ?
- ಪ್ರದೀಪ್ ಶರ್ಮಾ ವಿಜಯ್ ಸಲಸ್ಕರ್, ಪ್ರಫುಲ್ ಭೋಸ್ಲೆ, ರವೀಂದ್ರ ಆಂಗ್ರೆ ಮತ್ತು ವಿನಾಯಕ ಸೌದೆ ಸೇರಿದಂತೆ 1983 ರ ಪ್ರಸಿದ್ಧ ಪೊಲೀಸ್ ಅಧಿಕಾರಿಗಳ ಬ್ಯಾಚ್‌ನಿಂದ ಬಂದವರು. ದಾವೂದ್ ಇಬ್ರಾಹಿಂ ಕಸ್ಕರ್, ಛೋಟಾ ರಾಜನ್, ಅರುಣ್ ಗಾವ್ಲಿ, ಅಮರ್ ನಾಯಕ್ ಮತ್ತು ಇತರರ ನೇತೃತ್ವದ ಮುಂಬೈ ಭೂಗತ ಜಗತ್ತಿನ ವಿರುದ್ಧದ ಕಾರ್ಯಾಚರಣೆಗೆ ಈ ಪೊಲೀಸರು ಹೆಸರುವಾಸಿಯಾಗಿದ್ದರು.
- 1999 ರಲ್ಲಿ, ಶರ್ಮಾ ತನ್ನ ತಂಡದ ಸದಸ್ಯರೊಂದಿಗೆ ಪಾಕಿಸ್ತಾನದಲ್ಲಿ ಇಬ್ರಾಹಿಂನನ್ನು ಹತ್ಯೆ ಮಾಡಲು ಡಾನ್ ಆಯ್ಕೆ ಮಾಡಿದ ಛೋಟಾ ರಾಜನ್‌ನ ಸಹಾಯಕ ವಿನೋದ್ ಮಟ್ಕರ್‌ನನ್ನು ಹತ್ಯೆ ಮಾಡಿದ್ದರು. ಅದೇ ವರ್ಷ ಮುಂಬೈನ ದಾದರ್‌ನಲ್ಲಿ ಡಿ-ಕಂಪನಿ ಗ್ಯಾಂಗ್ಸ್ಟರ್ ಸಾದಿಕ್ ಕಾಲಿಯಾನನ್ನು ಪೊಲೀಸರು ಹತ್ಯೆ ಮಾಡಿದ್ದರು.
- 2003 ರಲ್ಲಿ, ಶರ್ಮಾ ಮತ್ತು ಅವರ ತಂಡವು ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಮೂವರು ಶಂಕಿತ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರನ್ನು ಹೊಡೆದುರುಳಿಸಿತ್ತು. ಅವರಲ್ಲಿ ಇಬ್ಬರು ಅಬು ಸುಲ್ತಾನ್ ಮತ್ತು ಅಬು ಅನ್ವರ್ ಪಾಕಿಸ್ತಾನಿ ಪ್ರಜೆಗಳು.
- ಶರ್ಮಾ ಅವರಿಗೆ ವಿವಾದಗಳೂ ಸುತ್ತಿಕೊಂಡಿದ್ದವು. ಆಗಸ್ಟ್ 2008 ರಲ್ಲಿ ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಸೇವೆಯಿಂದ ಅವರನ್ನು ವಜಾಗೊಳಿಸಲಾಗಿತ್ತು. ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶದ ನಂತರ ಅವರನ್ನು ಮೇ 2009 ರಲ್ಲಿ ಪುನಃ ಸೇರಿಸಲಾಯಿತು.
- ನವೆಂಬರ್ 2006 ರಲ್ಲಿ ರಾಜನ್ ಗ್ಯಾಂಗ್ ಸದಸ್ಯ ರಾಮನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾ ನಕಲಿ ಎನ್‌ಕೌಂಟರ್‌ಗಾಗಿ ಪ್ರದೀಪ್ ಶರ್ಮಾ ಅವರನ್ನು 2010ರಲ್ಲಿ ಬಂಧಿಸಲಾಯಿತು. ನಾಲ್ಕು ವರ್ಷಗಳ ಜೈಲು ಶಿಕ್ಷೆಯ ನಂತರ 2013 ರಲ್ಲಿ ಅವರನ್ನು ಖುಲಾಸೆಗೊಳಿಸಲಾಯಿತು.
- 2017 ರಲ್ಲಿ, ಅವರನ್ನು ಪಡೆಗೆ ಸೇರಿಸಿದ್ದು ಥಾಣೆ ಪೊಲೀಸ್‌ನ ಸುಲಿಗೆ ವಿರೋಧಿ ಸೆಲ್‌ನ ಮುಖ್ಯಸ್ಥರಾಗಿ ನೇಮಿಸಲಾಯಿತು. ಅವರು ಜುಲೈ 2019 ರಲ್ಲಿ ಅವಿಭಜಿತ ಶಿವಸೇನಾಗೆ ಸೇರಲು ರಾಜೀನಾಮೆ ನೀಡಿದರು ಮುಂಬೈನ ನಲಸೋಪಾರಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು.
- ಆಂಟಿಲಿಯಾ ಸ್ಫೋಟಕಗಳ ಬೆದರಿಕೆ ಮತ್ತು ಮನ್ಸುಖ್ ಹಿರಾನ್ ಕೊಲೆ ಪ್ರಕರಣದಲ್ಲಿ ಶರ್ಮಾ ಅವರ ಹೆಸರು ಕಾಣಿಸಿಕೊಂಡಾಗ 2021 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎರಡನೇ ಬಾರಿಗೆ ಬಂಧಿಸಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ