ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳ ಬಗ್ಗೆ ಅರಿವು ಇರುವಾಗಲೂ ಅವರ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂಬ ಬಗ್ಗೆ ಮುಂಬೈನ ಹಿಂದಿನ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ಅವರನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ಎಫ್ಐಆರ್ ಇಲ್ಲದ ಕಾರಣ ಪ್ರಕರಣದ ತನಿಖೆ ನಡೆಸಲಾಗದಿದ್ದರೂ ವಿಚಾರಣೆ ನಡೆಸಬಹುದು ಎಂದು ಪರಮ್ವೀರ್ ಸಿಂಗ್ ಪರ ವಕೀಲರು ವಾದ ಮಂಡಿಸಿದ್ದಾರೆ.
ನೀವೊಬ್ಬ ಪೊಲೀಸ್ ಅಧಿಕಾರಿ. ನೀವು ಅಧಿಕಾರದಲ್ಲಿದ್ದಾಗ ತಪ್ಪು ನಡೆಯುತ್ತಿರುವುದು ಕಂಡರೆ ಎಫ್ಐಆರ್ ದಾಖಲಿಸಬಹುದಿತ್ತು. ಯಾಕೆ ಆ ಕ್ರಮ ಕೈಗೊಳ್ಳಲಿಲ್ಲ? ಅಪರಾಧ ತಿಳಿದೂ ಎಫ್ಐಆರ್ ದಾಖಲಿಸಿಲ್ಲ ಎಂದಾದರೆ ನೀವು ನಿಮ್ಮ ಕರ್ತವ್ಯದಲ್ಲಿ ಸೋತಂತೆ. ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ ಸಾಲುವುದಿಲ್ಲ. ಯಾವುದೇ ನಾಗರಿಕನಿಗೆ ಅಪರಾಧ ಕಂಡುಬಂದರೆ ಎಫ್ಐಆರ್ ದಾಖಲಿಸುವುದು ಆತನ ಕರ್ತವ್ಯ ಎಂದು ನ್ಯಾಯಪೀಠ ಹೇಳಿರುವ ಬಗ್ಗೆ ಲೈವ್ ಲಾ ವರದಿ ಮಾಡಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮಾಜಿ ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ವೀರ್ ಸಿಂಗ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಇಂದು ವಿಚಾರಣೆ ನಡೆಸಿದೆ. ಅನಿಲ್ ದೇಶ್ಮುಖ್, ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಿ ಪ್ರತಿ ತಿಂಗಳು ಬಾರ್ ಹಾಗೂ ರೆಸ್ಟೋರೆಂಟ್ಗಳಿಂದ ₹ 100 ಕೋಟಿ ದಂಡ ಸಂಗ್ರಹಿಸಲು ತಿಳಿಸಿದ್ದರು. ಈ ಕಾರಣಕ್ಕಾಗಿ ಅನಿಲ್ ದೇಶ್ಮುಖ್ ವಿರುದ್ಧ ಪರಮ್ವೀರ್ ಸಿಂಗ್ ಪಿಐಎಲ್ ದಾಖಲಿಸಿದ್ದರು.
ಪರಮ್ವೀರ್ ಸಿಂಗ್ ಬಾಂಬೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾರ್ಚ್ 25ರಂದು ದಾಖಲಿಸಿದ್ದರು. ಪೊಲೀಸ್ ಇಲಾಖೆಯ ಪೊಲೀಸರ ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾಗಿಯೂ ಅವರು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಮುಂಬೈನ ಹಿಂದಿನ ಪೊಲೀಸ್ ಕಮಿಷನರ್ ಪರಮ್ವೀರ್ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಾಂಬೆ ಹೈಕೋರ್ಟ್ನಲ್ಲಿಯೇ ಅರ್ಜಿ ಹಾಕಿಕೊಳ್ಳಿ ಎಂದು ಸೂಚಿಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪರಮ್ವೀರ್ ಸಿಂಗ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಹಾಕಿದ್ದರು. ತಮ್ಮ ಅರ್ಜಿಯಲ್ಲಿ ಮಹಾರಾಷ್ಟ್ರದ ಹಾಲಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪರಮ್ವೀರ್ಸಿಂಗ್, ಗೃಹ ಸಚಿವರಾಗಿ ದೇಶ್ಮುಖ್ ಅವರು ಲಂಚ ಸ್ವೀಕರಿಸಿ ಪ್ರತಿ ತಿಂಗಳು ರೂ 100 ಕೋಟಿ ಕಪ್ಪ ತಂದು ಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಆಣತಿ ನೀಡಿದ್ದಾರೆ. ಇದನ್ನು ತನಿಖೆಗಾಗಿ ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ತಮ್ಮ ಕೇಳಿದ್ದರು.
ಇದನ್ನೂ ಓದಿ: ಪರಮ್ವೀರ್ ಸಿಂಗ್ ಅರ್ಜಿ ಸುಪ್ರೀಂನಲ್ಲಿ ತಿರಸ್ಕಾರ; ಬಾಂಬೆ ಹೈಕೋರ್ಟ್ಗೆ ಹೋಗಲು ಆದೇಶ
ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..
Published On - 6:17 pm, Wed, 31 March 21