ಪರಮ್ವೀರ್ ಸಿಂಗ್ ಅರ್ಜಿ ಸುಪ್ರೀಂನಲ್ಲಿ ತಿರಸ್ಕಾರ; ಬಾಂಬೆ ಹೈಕೋರ್ಟ್ಗೆ ಹೋಗಲು ಆದೇಶ
ಪರಮ್ವೀರ್ ಸಿಂಗ್ ಹಾಕಿದ ಅರ್ಜಿ ತಿರಸ್ಕರಿಸಿದ ಸರ್ವೋಚ್ಛ ನ್ಯಾಯಾಲಯ ಬಾಂಬೆ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲು ಸೂಚಿಸಿದೆ. ಬಾಂಬೆ ಹೈಕೋರ್ಟ್ ನಾಳೆಯೇ ಈ ಪ್ರಕರಣದ ವಿಚಾರಣೆ ಆರಂಭಿಸಲು ಸೂಚಿಸಿದೆ.
ದೆಹಲಿ: ಮುಂಬೈನ ಹಿಂದಿನ ಪೊಲೀಸ್ ಕಮೀಷನರ್ ಪರಮ್ವೀರ್ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬಾಂಬೆ ಹೈಕೋರ್ಟ್ನಲ್ಲಿಯೇ ಅರ್ಜಿ ಹಾಕಿಕೊಳ್ಳಿ ಎಂದು ಸೂಚಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪರಮ್ವೀರ್ಸಿಂಗ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಹಾಕಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ತಮ್ಮ ಅರ್ಜಿಯಲ್ಲಿ ಮಹಾರಾಷ್ಟ್ರದ ಹಾಲಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಪರಮ್ವೀರ್ಸಿಂಗ್, ಗೃಹ ಸಚಿವರಾಗಿ ದೇಶ್ಮುಖ್ ಅವರು ಲಂಚ ಸ್ವೀಕರಿಸಿ ಪ್ರತಿ ತಿಂಗಳು ರೂ 100 ಕೋಟಿ ಕಪ್ಪ ತಂದು ಕೊಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಅಣತಿ ನೀಡಿದ್ದಾರೆ. ಇದನ್ನು ತನಿಖೆಗಾಗಿ ಕೂಡಲೇ ಸಿಬಿಐಗೆ ಒಪ್ಪಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ಕೇಳಿದ್ದರು.
ಅರ್ಜಿಯಲ್ಲಿ ಏನು ಹೇಳಿದ್ದರು? ಪರಮ್ವೀರ್ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಸರ್ವೋಚ್ಛ ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಅರ್ಜಿದಾರ, ಪರಮ್ವೀರ್ಸಿಂಗ್ ಅವರ ಪರವಾಗಿ ವಾದಿಸಿದ ಮಾಜಿ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ತಮ್ಮ ಕಕ್ಷಿದಾರ ಕೇಳಿದಂತೆ ನ್ಯಾಯಾಲಯ ಇದನ್ನು ಸಿಬಿಐಗೆ ಒಪ್ಪಿಸಬೇಕು. ಏಕೆಂದರೆ, ಇದು ಬಹಳ ಗಂಭೀರ ವಿಚಾರ. ಒಂದು ರಾಜ್ಯ ಸರಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವ ಮೂಲಭೂತ ಪ್ರಶ್ನೆ ಇದಾಗಿದೆ. ಮುಕೇಶ್ ಅಂಬಾನಿ ಮನೆ ಬಳಿ ಬಾಂಬ್ ಪತ್ತೆಯಾದ ಪ್ರಕರಣವನ್ನು ಈಗಾಗಲೇ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರದಲ್ಲಿ ಆಡಳಿತ ಕೂಡ ಸರಿಯಾಗಿ ನಡೆಯುತ್ತಿಲ್ಲ. ಪರಮ್ವೀರ್ಸಿಂಗ್ ಅವರು ಅಧಿಕಾರವಹಿಸಿಕೊಂಡು ಎರಡು ವರ್ಷ ಆಗಿಲ್ಲ. ಈ ನಡುವೆ ಅವರನ್ನು ವರ್ಗ ಮಾಡಿದ್ದಾರೆ. ಇದು ಸರ್ವೋಚ್ಛ ನ್ಯಾಯಲಯವು ಪ್ರಕಾಶ್ ಸಿಂಗ್ ಕೇಸಿನಲ್ಲಿ ಕೊಟ್ಟ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ ನ್ಯಾಯಾಲಯ ಈ ಹಂತದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ರೋಹಟಗಿ ವಾದಿಸಿದರು.
ಸುಪ್ರೀಂಕೋರ್ಟ್ ಏನು ಹೇಳಿತು? ಈ ಹಂತದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಯಾವ ರಾಜ್ಯಗಳಿಗೂ ಪೊಲೀಸ್ ಸುಧಾರಣೆ ತರಲು ಇಷ್ಟ ಇಲ್ಲ. ಯಾಕೆಂದರೆ, ಒಂದೊಮ್ಮೆ ಈ ರೀತಿ ಸುಧಾರಣೆ ತಂದರೆ, ಅವರ ಕೈಲಿ ಅಧಿಕಾರ ಇರುವುದೇ ಇಲ್ಲ ಎಂದು ಹೇಳಿದರು. ಮೊದಲು ಒಳ್ಳೆ ಸಂಬಂಧ ಹೊಂದಿದ್ದವರು ಈಗ ಜಗಳಕ್ಕಿಳಿದಿದ್ದಾರೆ. ಇದರಿಂದ ಎಲ್ಲ ಹೊರಬರುತ್ತಿದೆ. ಈ ಹಂತದಲ್ಲಿ ನಾವು ಈ ಪ್ರಕರಣದ ವಿಚಾರಣೆ ಆರಂಭಿಸಲು ಸಾಧ್ಯವಿಲ್ಲ ಎಂದರು.
ಯಾವಾಗ ನ್ಯಾಯಾಲಯ ತಾನು ಈ ಹಂತದಲ್ಲಿ ಇದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತೋ ಆಗ ರೋಹಟಗಿ, ತಮ್ಮ ಕೋರಿಕೆಯನ್ನು ಮುಂದಿಟ್ಟರು. ದೇಶ್ಮುಖ್ ಈಗಲೂ ಮಂತ್ರಿಯಾಗಿ ಇದ್ದಾರೆ. ಹಾಗಾಗಿ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ. ಆದ್ದರಿಂದ ಬಾಂಬೆ ಹೈಕೋರ್ಟ್ ನಾಳೆಯೇ ಇದನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರ್ದೇಶನ ನೀಡಿ ಎಂದು ಕೋರಿಕೊಂಡರು. ಅದನ್ನು ಒಪ್ಪಿದ ನ್ಯಾಯಪೀಠ ನಾಳೆಯೇ ಇದನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್ಗೆ ನಿರ್ದೇಶನ ನೀಡಿತು.
ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..
ಇದನ್ನೂ ಓದಿ: ಮುಂಬೈ ಪೊಲೀಸ್ ಆಯುಕ್ತ ಎತ್ತಂಗಡಿ.. ಮುಕೇಶ್ ಅಂಬಾನಿಯ ಮುಟ್ಟಲು ಹೋಗಿ ಕೈಸುಟ್ಟುಕೊಂಡ ಮುಂಬೈ ಪೊಲೀಸ್!