Tamil Nadu Assembly Elections 2021: ಬಿಜೆಪಿ ಚುನಾವಣಾ ಪ್ರೊಮೊದಲ್ಲಿ ಕಾರ್ತಿ ಚಿದಂಬರಂ ಪತ್ನಿಯ ಭರತನಾಟ್ಯದ ವಿಡಿಯೊ

ತಮಿಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳ ನಡುವೆ ಶಾಸ್ತ್ರೀಯ ನೃತ್ಯದ ತುಣುಕೊಂದು ಕಾಣಿಸುತ್ತದೆ. ಅದರಲ್ಲಿರುವ ಕಲಾವಿದೆ ಬೇರೆ ಯಾರೂ ಅಲ್ಲ. ಖ್ಯಾತ ಭರತನಾಟ್ಯ ಕಲಾವಿದೆ ಮತ್ತು ಸಂಸದ ಕಾರ್ತಿ ಚಿದಂಬರಂ ಅವರ ಪತ್ನಿ ಡಾ.ಶ್ರೀನಿಧಿ ಚಿದಂಬರಂ.

Tamil Nadu Assembly Elections 2021: ಬಿಜೆಪಿ ಚುನಾವಣಾ ಪ್ರೊಮೊದಲ್ಲಿ ಕಾರ್ತಿ ಚಿದಂಬರಂ ಪತ್ನಿಯ ಭರತನಾಟ್ಯದ ವಿಡಿಯೊ
ಬಿಜೆಪಿ ಟ್ವೀಟ್ - ವಿಡಿಯೊ ಸ್ಕ್ರೀನ್​ಶಾಟ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 31, 2021 | 5:11 PM

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಚಾರ ವಿಡಿಯೊವೊಂದರಲ್ಲಿ ಶಿವಗಂಗಾ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಪತ್ನಿ ಡಾ.ಶ್ರೀನಿಧಿ ಚಿದಂಬರಂ ಅವರ ಭರತನಾಟ್ಯದ ವಿಡಿಯೊ ಬಳಸಲಾಗಿದೆ. ಮಾರ್ಚ್ 28ರಂದು ಬಿಜೆಪಿ ತಮ್ಮ ಪಕ್ದ ಪ್ರೊಮೊ ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿ ‘ಕಮಲ ಅರಳಲಿ, ತಮಿಳುನಾಡು ಬೆಳೆಯಲಿ’ ಎಂಬ ಶೀರ್ಷಿಕೆ ನೀಡಿತ್ತು. 5 ನಿಮಿಷ ಅವಧಿಯ ಈ ವಿಡಿಯೊದಲ್ಲಿ ತಮಿಳು ಭಾಷೆ, ಸಂಸ್ಕೃತಿಯ ವೈಶಿಷ್ಟ್ಯ ಮತ್ತು ತಮಿಳುನಾಡಿನ ಬೆಳವಣಿಗೆಗೆ ಬಿಜೆಪಿ ಯಾವ ರೀತಿ ಸಹಾಯ ಮಾಡುತ್ತಿದೆ ಎಂಬುದನ್ನು ತೋರಿಸಲಾಗಿದೆ. ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳ ನಡುವೆ ಶಾಸ್ತ್ರೀಯ ನೃತ್ಯದ ತುಣುಕೊಂದು ಕಾಣಿಸುತ್ತದೆ. ಅದರಲ್ಲಿರುವ ಕಲಾವಿದೆ ಬೇರೆ ಯಾರೂ ಅಲ್ಲ. ಖ್ಯಾತ ಭರತನಾಟ್ಯ ಕಲಾವಿದೆ ಮತ್ತು ಸಂಸದ ಕಾರ್ತಿ ಚಿದಂಬರಂ ಅವರ ಪತ್ನಿ ಡಾ.ಶ್ರೀನಿಧಿ ಚಿದಂಬರಂ.

ತಮಿಳುನಾಡಿನಲ್ಲಿ ಖ್ಯಾತವಾಗಿರುವ ‘ಸೆಮ್ಮೊಳಿ’ ಎಂಬ ಹಾಡಿನ ವಿಡಿಯೊ ತುಣುಕನ್ನು ಬಿಜೆಪಿ ಬಳಸಿಕೊಂಡಿದೆ. ಸೆಮ್ಮೊಳಿ ಹಾಡನ್ನು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷರಾಗಿದ್ದ ದಿವಂಗತ ಎಂ. ಕರುಣಾನಿಧಿ ಅವರು ವಿಶ್ವ ತಮಿಳು ಸಮ್ಮೇಳನಕ್ಕಾಗಿ 2010ರಲ್ಲಿ ಬರೆದಿದ್ದರು. ಈ ಹಾಡನ್ನು ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದರು.

ಕಾರ್ತಿ ಪತ್ನಿಯ ನೃತ್ಯದ ವಿಡಿಯೊವನ್ನು ಬಿಜೆಪಿ ಬಳಸಿರುವುದರ ಬಗ್ಗೆ ಪತ್ರಕರ್ತೆಯೊಬ್ಬರು ಸ್ಕ್ರೀನ್ ಶಾಟ್ ತೆಗೆದು ಟ್ವಿಟರ್ ನಲ್ಲಿ ಶೇರ್ ಮಾಡಿದ ನಂತರ ಈ ಎಡವಟ್ಟು ಬೆಳಕಿಗೆ ಬಂದಿತ್ತು.

ತಮ್ಮ ನೃತ್ಯದ ವಿಡಿಯೊ ತುಣುಕನ್ನು ಬಿಜೆಪಿ ಬಳಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿಧಿ ಚಿದಂಬರಂ ತಮಿಳುನಾಡಿನಲ್ಲಿ ಯಾವತ್ತೂ ಕಮಲ ಅರಳುವುದಿಲ್ಲ ಎಂದಿದ್ದಾರೆ. ತಮಿಳುನಾಡಿನ ಬಿಜೆಪಿಯ ಪ್ರಚಾರವೂ ಸುಳ್ಳಿನಿಂದ ಕೂಡಿದ್ದು ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಪ್ರತಿಕ್ರಿಯಿಸಿದೆ.

ಎಡವಟ್ಟು ಬಹಿರಂಗವಾಗುತ್ತಿದ್ದಂತೆ ಬಿಜೆಪಿ ವಿಡಿಯೊ ಡಿಲೀಟ್ ಮಾಡಿದೆ. ಆದರೆ ವಿಡಿಯೊದ ಸ್ಕ್ರೀನ್​ಶಾಟ್ ಗಳನ್ನಿಟ್ಟುಕೊಂಡು ನೆಟ್ಟಿಗರು ಬಿಜೆಪಿಯನ್ನು ಟ್ರೋಲ್ ಮಾಡಿದ್ದಾರೆ.

ವಿಡಿಯೊ, ಆಡಿಯೊ ಎಡಿಟ್ ಮಾಡಲು ಬಿಜೆಪಿ  ಯಾವ ಸಾಫ್ಟ್ ವೇರ್ ಬಳಸುತ್ತಿದೆ ಎಂದು  ಶ್ರೀರಾಮ್ ಎಂಬ ಟ್ವಟರ್ ಬಳಕೆದಾರರು ಕೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ  ಪ್ರಧಾನಮಂತ್ರಿ ಆವಾಸ್ ಯೋಜನೆಯ ನಕಲಿ ಜಾಹೀರಾತು ಬಳಿಕ ಬಿಜೆಪಿ, ತಮಿಳುನಾಡಿನಲ್ಲಿ ಸುಳ್ಳು ಪ್ರಚಾರಕ್ಕಾಗಿ ಮಹಿಳೆಯೊಬ್ಬರ ಫೋಟೊವನ್ನು ಆಕೆಯ ಅನುಮತಿ ಇಲ್ಲದೆ  ಬಳಸಿದೆ ಎಂದು ರುಚಿರಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

234 ಸೀಟುಗಳಿರುವ ತಮಿಳುನಾಡಿನ ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: PM Modi in Tamil Nadu: ವಿಧಾನಸಭೆಯಲ್ಲಿ ಡಿಎಂಕೆ ನಾಯಕರು ಜಯಲಲಿತಾ ಜತೆ ವರ್ತಿಸಿದ್ದನ್ನು ಮರೆಯಬಾರದು: ನರೇಂದ್ರ ಮೋದಿ