ಸಂಸತ್ತಿನ ಬಜೆಟ್ ಅಧಿವೇಶನ (Budget Session of Parliament )ಇಂದಿನಿಂದ (ಜ.31)ರಿಂದ ಪ್ರಾರಂಭವಾಗಲಿದ್ದು, ಬೆಳಗ್ಗೆ 11ಗಂಟೆಗೆ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind) ಅವರು ಎರಡೂ ಸದನಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿ ಭಾಷಣದ ಅರ್ಧಗಂಟೆ ಬಳಿಕ, ಲೋಕಸಭೆಯಲ್ಲಿ ಅಧಿವೇಶನ ಶುರುವಾಗಲಿದೆ. ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಸ್ತುತಪಡಿಸಲಿದ್ದಾರೆ. ನಾಳೆ (ಫೆ.1) 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.
ಲೋಕಸಭೆ ಬಜೆಟ್ ಅಧಿವೇಶನಕ್ಕೆ ಸಂಬಂಧಪಟ್ಟ ಕೆಲ ಪ್ರಮುಖ ಮಾಹಿತಿಗಳು ಇಲ್ಲಿವೆ
1. ಬಜೆಟ್ ಅಧಿವೇಶನ ಎರಡು ಅವಧಿಗೆ ನಡೆಯಲಿದ್ದು, ಮೊದಲ ಅವಧಿ ಫೆ.11ರವರೆಗೆ ಇರಲಿದೆ. ನಂತರ ಫೆ.12ರಿಂದ ಮಾರ್ಚ್ 13ರವರೆಗೆ ಬಿಡುವು ಇರಲಿದೆ. ಈ ವೇಳೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಂಚಿಕೆಯಾದ ಬಜೆಟ್ ಹಂಚಿಕೆಯನ್ನು ಸ್ಥಾಯಿ ಸಮಿತಿಗಳು ಪರಿಶೀಲನೆ ನಡೆಸಿ, ಆ ಸಂಬಂಧ ವರದಿ ಸಿದ್ಧಪಡಿಸಲಿವೆ. ಎರಡನೇ ಅವಧಿ ಅಧಿವೇಶನ ಮಾರ್ಚ್ 14ರಿಂದ ಶುರುವಾಗಿ, ಏಪ್ರಿಲ್ 8ಕ್ಕೆ ಮುಕ್ತಾಯವಾಗುತ್ತದೆ.
2. ಬಜೆಟ್ ಅಧಿವೇಶನ ಪ್ರಾರಂಭವಾದ ಇಂದು (ಜ.31) ಮತ್ತು ಬಜೆಟ್ ಮಂಡನೆಯಾಗಲಿರುವ ದಿನ (ನಾಳೆ-ಫೆ.1) ಸಂಸತ್ತಿನಲ್ಲಿ ಯಾವುದೇ ರೀತಿಯ ಶೂನ್ಯ ವೇಳೆಯಾಗಲಿ, ಪ್ರಶ್ನೋತ್ತರ ಸಮಯವಾಗಲೀ ಇರುವುದಿಲ್ಲ. ಇದು ರಾಜ್ಯ ಮತ್ತು ಲೋಕಸಭೆ ಎರಡಕ್ಕೂ ಅನ್ವಯ.
3. ಇಷ್ಟು ವರ್ಷ ಶೂನ್ಯ ವೇಳೆ ಅವಧಿ 1 ಗಂಟೆ ಇರುತ್ತಿತ್ತು. ಅದನ್ನು 30 ನಿಮಿಷಗಳಿಗೆ ಕಡಿತಗೊಳಿಸಲು ರಾಜ್ಯ ಸಭೆ ನಿರ್ಧರಿಸಿದೆ ಎಂದು ಹೇಳಲಾಗಿದೆ. ಲೋಕಸಭೆ ಇನ್ನೂ ನಿರ್ಣಯ ತೆಗೆದುಕೊಂಡಿಲ್ಲ.
4. ಈ ಬಾರಿ ಬಜೆಟ್ ಅಧಿವೇಶನದಲ್ಲಿ ಒಟ್ಟು 29 ಬೈಠಕ್ಗಳು ನಡೆಯಲಿದ್ದು, ಮೊದಲ ಅವಧಿಯಲ್ಲಿ 10 ಮತ್ತು ಎರಡನೇ ಅವಧಿಯಲ್ಲಿ 19 ಬೈಠಕ್ಗಳು ನಡೆಯಲಿವೆ. ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗೆಗಿನ ಚರ್ಚೆಗೆ ಕೇಂದ್ರ ಸರ್ಕಾರ ನಾಲ್ಕು ದಿನ ನಿಗದಿಪಡಿಸಿದೆ. ಅಂದರೆ ಫೆ.2, 3, 4,7ರಂದು ವಂದನಾ ನಿರ್ಣಯದ ಚರ್ಚೆ ನಡೆಯಲಿದೆ.
5. ಕೊವಿಡ್ 19 ಇರುವುದರಿಂದ ಲೋಕಸಭೆಯಲ್ಲಿ ಫೆ.2ರಿಂದ 11ರವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ಕಲಾಪ ನಡೆಯಲಿದ್ದು, ರಾಜ್ಯಸಭೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3ಗಂಟೆವರೆಗೆ ನಡೆಯಲಿದೆ. ಅಂದಹಾಗೆ, ಫೆ.1ರಂದು ಬಜೆಟ್ ಮಂಡನೆಯಾಗುವುದಕ್ಕೂ ಮೊದಲು ಬೆಳಗ್ಗೆ 10.10ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ.
ಇದನ್ನೂ ಓದಿ: ಧಾರವಾಡದಲ್ಲಿ 8 ಮನೆಗಳ ಬಾಗಿಲಿಗೆ ಹೊರಗಡೆಯಿಂದ ಬೀಗ ಹಾಕಿದ ದುಷ್ಕರ್ಮಿಗಳು! ವಿಚಿತ್ರ ಘಟನೆಗೆ ಬೆಚ್ಚಿಬಿದ್ದ ಸ್ಥಳೀಯರು