ಕಾನ್ಪುರ ಮೂಲದ ಉದ್ಯಮಿ ಪಿಯುಷ್ ಜೈನ್ ಎಂಬುವರನ್ನು ತೆರಿಗೆ ವಂಚನೆ ಆರೋಪದಡಿ ನಿನ್ನೆ ರಾತ್ರಿ ಬಂಧಿಸಲಾಯಿತು. ಈ ಉದ್ಯಮಿಯ ಮನೆ ಮೇಲೆ ಕೇಂದ್ರೀಯ ತನಿಖಾ ದಳಗಳು ದಾಳಿ ನಡೆಸಿದ ಸುಮಾರು 40 ತಾಸುಗಳ ಬಳಿಕ ಆತನನ್ನು ಬಂಧಿಸಲಾಗಿದೆ. ಉದ್ಯಮಿಯ ಮನೆಯಿಂದ ಭರ್ಜರಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದ್ದು, ಇತ್ತೀಚಿನ ದಿನಗಳಲ್ಲೇ ಅತ್ಯಂತ ದೊಡ್ಡ ಮೊತ್ತದ ಹಣ ವಶಪಡಿಸಿಕೊಂಡ ದಾಳಿ ಇದು ಎನ್ನಲಾಗಿದೆ.
ಅಂದಹಾಗೆ ಈ ಉದ್ಯಮಿಯ ಮನೆ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು ದಾಳಿ ನಡೆಸಿದ್ದರು. ಜೈನ್ಗೆ ಸಂಬಂಧಪಟ್ಟ ಸ್ಥಳಗಳಿಂದ ಇದುವರೆಗೆ ಒಟ್ಟಾರೆ 257 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ನಕಲಿ ಬೆಲೆಪಟ್ಟಿಯ ಮೂಲಕ ಸರಕು ರವಾನೆ ಮಾಡಿ ಮತ್ತು ಜಿಎಸ್ಟಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಾದ ಇ ವೇ ಬಿಲ್ (ಎಲೆಕ್ಟ್ರಾನಿಕ್ ವೇ ಬಿಲ್-ಸರಕು ಸಾಗಣೆ ಬಗ್ಗೆ ಮಾಹಿತಿ ನೀಡುವುದು) ವಂಚನೆ ಮಾಡುವ ಮೂಲಕ ಸಂಪಾದಿಸಿದ್ದು ಎನ್ನಲಾಗಿದೆ. ಹಾಗೇ, ಸದ್ಯಕ್ಕೆ 257 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ಕನೇ ದಿನವೂ ದಾಳಿ ಮುಂದುವರಿದಿದೆ. ಈ ದಾಳಿಯೆಲ್ಲ ಮುಗಿಯುವ ಹೊತ್ತಿಗೆ ಇನ್ನಷ್ಟು ಹೆಚ್ಚಿನ ನಗದು ಪತ್ತೆಯಾಗುವ ಸಾಧ್ಯತೆ ಇದೆ. ಜಿಎಸ್ಟಿಯ ಉತ್ತರ ಪ್ರದೇಶ, ಗುಜರಾತ್ ಘಟಕಗಳ ಅಧಿಕಾರಿಗಳು ಸೇರಿ ಪಿಯುಷ್ ಜೈನ್ ಮನೆ ಮತ್ತು ಆತನಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇಂದು ಅಹ್ಮದಾಬಾದ್ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ.
257 ಕೋಟಿ ರೂ.ಮತ್ತು ಮುಂದುವರಿದ ಎಣಿಕೆ
ಆಗಲೇ ಹೇಳಿದಂತೆ ಸದ್ಯ ಪಿಯುಷ್ ಜೈನ್ರಿಂದ ಒಟ್ಟು 257 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಜೈನ್ಗೆ ಸೇರಿದ ಕಾರ್ಖಾನೆ ಮತ್ತು ಮನೆಯಿಂದ 10 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಕಾನ್ಪುರದ ಆನಂದನಗರದಲ್ಲಿರುವ ಮನೆಯಿಂದ 177 ಕೋಟಿ ರೂ. ಕನೌಜ್ ಮನೆಯಿಂದ ಸುಮಾರು 107 ಕೋಟಿ ರೂ.ವಶವಾಗಿದೆ. ಆದರೆ ಅದನ್ನು ಪೂರ್ತಿಯಾಗಿ ಇನ್ನೂ ಎಣಿಸಿಯೇ ಮುಗಿದಿಲ್ಲ. ಹಾಗೇ, ಇನ್ನಷ್ಟು ಹಣ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಜಿಎಸ್ಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
40 ತಾಸುಗಳಿಂದಲೂ ಪಿಯುಷ್ಗೆ ಸಂಬಂಧಪಟ್ಟ ಮನೆಗಳು, ಕಚೇರಿಗಳ ಮೇಲೆ ದಾಳಿ, ಹಣ ಎಣಿಕೆ ಕಾರ್ಯ ನಡೆಯುತ್ತಲೇ ಇದೆ. ನಗದು ಲೆಕ್ಕ ಮಾಡುವ ಒಟ್ಟು 19 ಮಷಿನ್ಗಳ ಮೂಲಕ ಎಣಿಕೆ ಕಾರ್ಯ ನಡೆಯುತ್ತಿದೆ. ಬರೀ ನಗದು ಮಾತ್ರವಲ್ಲದೆ, ಪಿಯುಷ್ ಜೈನ್ ಕನೌಜ್ ಮನೆಯಿಂದ 250 ಕೆಜಿ ಬೆಳ್ಳಿ, 25 ಕೆಜಿ ಚಿನ್ನವನ್ನು ಕೂಡ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲ, 40 ಕಂಪನಿಗಳ ಮಾಲೀಕ ಈತ. ಅದರಲ್ಲಿ ಎರಡು ಕಂಪನಿಗಳು ಮಧ್ಯಪ್ರಾಚ್ಯ ದೇಶಗಳಲ್ಲಿವೆ ಎಂದೂ ಹೇಳಲಾಗಿದೆ.
ಶ್ರೀಗಂಧದ ಎಣ್ಣೆಯೂ ಪತ್ತೆ
ಇದು ಅಂತಿಂಥ ಉದ್ಯಮಿಯ ಕಥೆಯಲ್ಲ. ಪಿಯುಷ್ ಜೈನ್ ಮನೆ, ಮತ್ತಿತರ ಪ್ರದೇಶಗಳ ಒಟ್ಟು 40 ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರಿಗೆ ಸೇರಿದ ನಾಲ್ಕು ಮನೆಗಳಿಂದ ಒಟ್ಟು 300 ಕೀಗಳನ್ನು ಜಪ್ತಿ ಮಾಡಲಾಗಿದೆ. ಮನೆಗಳಲ್ಲಿರುವ ಕೆಲವು ಕೋಣೆಗಳ ಬಾಗಿಲನ್ನು ತೆಗೆಯಲು ಬಾರದ ಕಾರಣ ಬೀಗ ತೆಗೆಯುವವರನ್ನೂ ಕರೆಸಲಾಗಿದೆ. ಬರೀ ಇಷ್ಟೇ ಅಲ್ಲ, ಈ ಉದ್ಯಮಿಯ ಬಳಿ ಡ್ರಮ್ಗಟ್ಟಲೆ ಶ್ರೀಗಂಧದ ಎಣ್ಣೆಯೂ ಸಿಕ್ಕಿದೆ. ರಟ್ಟಿನ ಬಾಕ್ಸ್ಗಳಲ್ಲೂ 2000 ರೂಪಾಯಿ ನೋಟಿ ಬಂಡಲ್ಗಳು ಪತ್ತೆಯಾಗಿವೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯ ಇತಿಹಾಸದಲ್ಲೇ ಇದು ಅತಿದೊಡ್ಡ ನಗದು ಜಪ್ತಿಯಾಗಿದೆ ಎಂದು ಮಂಡಳಿ ಅಧ್ಯಕ್ಷ ವಿವೇಕ್ ಜೋಹ್ರಿ ಹೇಳಿದ್ದಾರೆ. ಅದೇ ಇಷ್ಟು ಹಣ ಎಲ್ಲಿಂದ ಬಂತು ಎಂದು ಕೇಳಿದ್ದಕ್ಕೆ ಉದ್ಯಮಿ ಪಿಯುಷ್ ಜೈನ್, ನನ್ನ ಪೂರ್ವಜರ ಕಾಲದಿಂದಲೂ ಸುಮಾರು 400 ಕೆಜಿಯಷ್ಟು ಚಿನ್ನ ಇತ್ತು. ಅದನ್ನೆಲ್ಲ ಮಾರಿ ಗಳಿಸಿದ ಹಣ ಇದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ರಾಜಕೀಯ ಸ್ಪರ್ಶ ಪಡೆದುಕೊಂಡ ದಾಳಿ
ಉತ್ತರಪ್ರದೇಶದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇದೇ ಹೊತ್ತಲ್ಲಿ ನಡೆದ ಈ ದಾಳಿ ಮತ್ತು ಬಹುದೊಡ್ಡ ಮೊತ್ತದ ನಗದು ವಶ ರಾಜಕೀಯ ಸ್ಪರ್ಶ ಪಡೆದುಕೊಂಡಿದೆ. ಈ ಉದ್ಯಮಿ ಪಿಯುಷ್ ಜೈನ್ ಸಮಾಜವಾದಿ ಪಕ್ಷದ ಜತೆ ಗುರುತಿಸಿಕೊಂಡವನು ಎಂದು ಹೇಳಿದ್ದಾರೆ. ಇದೀಗ ದಾಳಿಗೆ ಒಳಗಾದ ವ್ಯಕ್ತಿ, ನವೆಂಬರ್ನಲ್ಲಿ ಸಮಾಜವಾದಿ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ ವ್ಯಕ್ತಿ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪನ್ನು ಸಮಾಜವಾದಿ ಪಕ್ಷ ಅಲ್ಲಗಳೆದಿದೆ. ನಮಗೂ, ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ಎಸ್ಪಿ ವಕ್ತಾರ ವಿಜಯ್ ದ್ವಿವೇದಿ ತಿಳಿಸಿದ್ದಾರೆ.
समाजवादियों का नारा है
जनता का पैसा हमारा है!समाजवादी पार्टी के कार्यालय में समाजवादी इत्र लॉन्च करने वाले पीयूष जैन के यहाँ GST के छापे में बरामद 100+ करोड़ कौन से समाजवाद की काली कमाई है? pic.twitter.com/EEp7H5IHmt
— Sambit Patra (@sambitswaraj) December 24, 2021
ಇದನ್ನೂ ಓದಿ: Narendra Modi: ಹಿಮಾಚಲ ಪ್ರದೇಶದಲ್ಲಿ 28,000 ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ