ಮುಂಬರುವ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡಲು ಚುನಾವಣಾ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ (Prashant Kishor) ರಾಹುಲ್ ಗಾಂಧಿಯವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ. ಕಳೆದ ವರ್ಷ ಎರಡೂ ಪಕ್ಷಗಳ ನಡುವಿನ (ಕಾಂಗ್ರೆಸ್- ಪ್ರಶಾಂತ್ ಕಿಶೋರ್) ಮಾತುಕತೆ ವಿಫಲವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಎರಡು ಮೂಲಗಳನ್ನು ಉಲ್ಲೇಖಿಸಿ ಈ ಮಾಹಿತಿ ನೀಡಲಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕುರಿತು ಪಕ್ಷದ ನಾಯಕರು ಪ್ರಶಾಂತ್ ಕಿಶೋರ್ರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ನಂತರ ಕಾಂಗ್ರೆಸ್ ಕಿಶೋರ್ರ ಮಾಜಿ ಸಹವರ್ತಿಯೊಂದಿಗೆ ಚುನಾವಣಾ ತಂತ್ರಗಾರಿಕೆಗೆ ಸಹಿ ಹಾಕಿತು. ಪ್ರಶಾಂತ್ ಕಿಶೋರ್ ತೃಣಮೂಲ ಕಾಂಗ್ರೆಸ್ ಪಾಳಯ ಸೇರಿದರು. ಇದೀಗ ಗುಜರಾತ್ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಪಾತ್ರದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಯಾವುದೇ ಷರತ್ತುಗಳಿಲ್ಲದೇ ಗುಜರಾತ್ ಚುನಾವಣೆಯಲ್ಲಿ ಮಾತ್ರ ಕೆಲಸ ಮಾಡಲು ಪ್ರಶಾಂತ್ ಕಿಶೋರ್ ಆಸಕ್ತಿ ತೋರಿಸಿರುವುದಾಗಿ ಮೂಲಗಳು ಹೇಳಿವೆ. ಪ್ರಶಾಂತ್ ಕಿಶೋರ್ ನೀಡಿರುವ ಆಹ್ವಾನಕ್ಕೆ ಕಾಂಗ್ರೆಸ್ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ. ಗುಜರಾತ್ನ ಕೆಲವು ನಾಯಕರಿಗೆ ಪ್ರಶಾಂತ್ ಕಿಶೋರ್ರೊಂದಿಗೆ ಚುನಾವಣೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ರಾಹುಲ್ ಗಾಂಧಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.
ಪ್ರಶಾಂತ್ ಕಿಶೋರ್ ಆಪ್ತರು ಹೇಳುತ್ತಿರುವುದೇನು?
ಆದರೆ ಪ್ರಶಾಂತ್ ಕಿಶೋರ್ ಆಪ್ತರು ಈ ವರದಿಯನ್ನು ನಿರಾಕರಿಸಿದ್ದಾರೆ. ಆಪ್ತರ ಪ್ರಕಾರ, ಪ್ರಶಾಂತ್ ಕಿಶೋರ್ಗೆ ಕಳೆದ ವರ್ಷ ಕಾಂಗ್ರೆಸ್ನೊಂದಿಗೆ ಕೆಲಸ ಮಾಡಲು ತೀವ್ರ ಆಸಕ್ತಿ ಇತ್ತು. ಆದರೆ ‘ಪಾಲುದಾರಿಕೆಯ ಸಮಸ್ಯೆಯಿಂದ ಪ್ರಶಾಂತ್ ಕಿಶೋರ್ ಜತೆ ಕೆಲಸ ಮಾಡಲು ಸಾಧ್ಯವಾಗಿಲ್ಲ’. ಈ ಬಗ್ಗೆ ಪ್ರಿಯಾಂಕಾ ಗಾಂಧಿ ಕೂಡ ಮಾತನಾಡಿದ್ದರು.
ಕಳೆದ ವರ್ಷ ಪ್ರಶಾಂತ್ ಕಿಶೋರ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಪ್ರಸ್ತುತ ಪ್ರಶಾಂತ್ ಕಿಶೋರ್ ಕಾಂಗ್ರೆಸ್ನೊಂದಿಗೆ ಕೆಲಸ ಮಾಡುವ ಎಲ್ಲಾ ಅವಕಾಶಗಳು ಮುಗಿದಿವೆ ಎಂದೂ ಕೆಲವು ಮೂಲಗಳು ಹೇಳಿವೆ.
ಕಳೆದ ಬಾರಿ ಮಾತುಕತೆ ಮುಗಿಸಿದ ಪ್ರಶಾಂತ್ ಕಿಶೋರ್, ‘ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವುದು ಯಾವುದೇ ವ್ಯಕ್ತಿಯ ದೈವಿಕ ಹಕ್ಕಲ್ಲ’ ಎಂದು ವ್ಯಂಗ್ಯವಾಡಿದ್ದರು. ಅಲ್ಲಿಗೆ ಕಾಂಗ್ರೆಸ್ ಜತೆಗಿನ ಚುನಾವಣಾ ಸಮನ್ವಯ ಈಡೇರಿಲ್ಲ ಎಂಬುದು ಸ್ಪಷ್ಟವಾಗಿತ್ತು. ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಶೇ.90ಕ್ಕಿಂತ ಹೆಚ್ಚು ಚುನಾವಣೆಗಳಲ್ಲಿ ಸೋತಿರುವಾಗ ಚುನಾವಣಾ ತಂತ್ರಗಾರಿಕೆಯಲ್ಲಿ ಪಳಗಿದ ಪ್ರಶಾಂತ್ ಕಿಶೋರ್ ಜತೆ ಕೈಜೋಡಿಸದೇ ಇದ್ದುದು ಅಚ್ಚರಿಗೆ ಕಾರಣವಾಗಿತ್ತು.
ಪ್ರಸ್ತುತ ಕಾಂಗ್ರೆಸ್ ನಾಯಕತ್ವದ ಬಗ್ಗೆ ಮಾತನಾಡಿದ್ದ ಕಿಶೋರ್, ‘‘2024ರಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನು ಹೊಂದಬಹುದು. ಆದರೆ, ಈಗಿನ ನಾಯಕತ್ವದಲ್ಲಿ ಅಲ್ಲ’’ ಎಂದು ಅಭಿಪ್ರಾಯ ಹಂಚಿಕೊಂಡಿದ್ದರು. ಕಾಂಗ್ರೆಸ್ ಜತೆಗಿನ ಅಭಿಪ್ರಾಯ ಭೇದದ ನಡುವೆಯೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಜತೆ ಕೆಲಸ ಮಾಡುತ್ತಾರಾ ಎನ್ನುವುದು ಹಲವರ ಪ್ರಶ್ನೆ. ಆದ್ದರಿಂದಲೇ ಕಾಂಗ್ರೆಸ್ ಹಾಗೂ ಪ್ರಶಾಂತ್ ಕಿಶೋರ್ ಗುಜರಾತ್ ಚುನಾವಣೆಯ ಪಾಲುದಾರಿಕೆಯ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ.
ಇದನ್ನೂ ಓದಿ:
ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಘರ್ ವಾಪಸಿ ಸಾಧ್ಯತೆ ಹೆಚ್ಚು! ಹೇಗೆ?