ದೆಹಲಿ ಜೂನ್ 27 : ನೀಟ್ ಪ್ರಶ್ನೆ ಪತ್ರಿಕೆ (NEET-UG 2024) ಸೋರಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (CBI) ಗುರುವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ ಇದು. ಸಿಬಿಐ ಅಧಿಕಾರಿಗಳ ತಂಡ ಇಂದು ಪಾಟ್ನಾದಲ್ಲಿ ಆರೋಪಿಗಳಾದ ಮನೀಶ್ ಕುಮಾರ್ ಮತ್ತು ಅಶುತೋಷ್ ಕುಮಾರ್ ಅವರನ್ನು ಬಂಧಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಮನೀಷ್ ಕುಮಾರ್ ಮತ್ತು ಅಶುತೋಷ್ ಕುಮಾರ್ ಅವರು ಪರೀಕ್ಷೆಗೆ ಮುನ್ನ ಆಕಾಂಕ್ಷಿಗಳಿಗೆ ಸುರಕ್ಷಿತ ಆವರಣವನ್ನು ಒದಗಿಸಿದ್ದರು. ಅಲ್ಲಿ ಅವರಿಗೆ ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ನೀಡಲಾಗಿದೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸಿಬಿಐ ಕನಿಷ್ಠ ಆರು ಎಫ್‌ಐಆರ್‌ಗಳನ್ನು ದಾಖಲಿಸಿದೆ.
ಶಿಕ್ಷಣ ಸಚಿವಾಲಯವು ಪ್ರಕರಣವನ್ನು ಏಜೆನ್ಸಿಗೆ ಹಸ್ತಾಂತರಿಸಿದ ಒಂದು ದಿನದ ನಂತರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೊದಲ ಸಿಬಿಐ ಎಫ್‌ಐಆರ್ ಭಾನುವಾರ ದಾಖಲಾಗಿದೆ. ಈ ವರ್ಷ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ದೇಶಾದ್ಯಂತ ವಿದ್ಯಾರ್ಥಿಗಳು ಒತ್ತಾಯಿಸಿದ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.
ಈ ವರ್ಷದ ಪರೀಕ್ಷೆಯನ್ನು ಮೇ 5 ರಂದು 14 ವಿದೇಶ ಸೇರಿದಂತೆ 571 ನಗರಗಳ 4,750 ಕೇಂದ್ರಗಳಲ್ಲಿ ನಡೆಸಲಾಯಿತು. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4 ರಂದು ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಅನೇಕ ವಿದ್ಯಾರ್ಥಿಗಳು ಕೆಲವು ಪ್ರದೇಶಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಈ ವರ್ಷ, NEET-UG ಪರೀಕ್ಷೆಯಲ್ಲಿ 67 ಮಂದಿ ಟಾಪರ್ ಗಳಾಗಿದ್ದು ಅವರೆಲ್ಲರೂ 720/720 ಅಂಕಗಳನ್ನು ಗಳಿಸಿದ್ದಾರೆ. NEET 2023 ರಲ್ಲಿ ಇಬ್ಬರು ಟಾಪರ್ ಮತ್ತು 2022 ರಲ್ಲಿ ಒಬ್ಬ ಟಾಪರ್ ಆಗಿದ್ದರು.
ಬುಧವಾರ, ಸಿಬಿಐ ತಂಡವು ತನ್ನ ತನಿಖೆಯನ್ನು ಜಾರ್ಖಂಡ್‌ಗೆ ವಿಸ್ತರಿಸಿದ್ದು, ಹಜಾರಿಬಾಗ್ ಪ್ರದೇಶದ ಶಾಲೆಗೆ ಭೇಟಿ ನೀಡಿ ಪ್ರಾಂಶುಪಾಲರು ಸೇರಿದಂತೆ ಅದರ ಸಿಬ್ಬಂದಿಯನ್ನು ವಿಚಾರಣೆ ನಡೆಸಿತು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಸಿಬಿಐ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ವ್ಯಕ್ತಿಗಳನ್ನು ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಚಾರ್ಹಿ ಎಂಬ ಪಟ್ಟಣದಲ್ಲಿರುವ ಸಿಸಿಎಲ್ ಅತಿಥಿಗೃಹದಲ್ಲಿ ವಿಚಾರಣೆಗೊಳಪಡಿಸಲಾಗಿತ್ತು. ಈ ವ್ಯಕ್ತಿಗಳನ್ನು ಹಜಾರಿಬಾಗ್ ಮೂಲದ ಓಯಸಿಸ್ ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Arundhati Roy: ಲೇಖಕಿ ಅರುಂಧತಿ ರಾಯ್ಗೆ 2024ರ PEN ಪಿಂಟರ್ ಪ್ರಶಸ್ತಿ
NEET-UG ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ವಿವಾದದ ನಂತರ, ಕೇಂದ್ರವು NEET-PG 2024 ಪರೀಕ್ಷೆಯನ್ನು ನಡೆಸಬೇಕಾದ ಗಂಟೆಗಳ ಮೊದಲು ಮುಂದೂಡಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ 2024 ಪರೀಕ್ಷೆಯನ್ನು ಡಾರ್ಕ್ ನೆಟ್‌ನಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಸಿಕ್ಕನಂತರ ರದ್ದುಗೊಳಿಸಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Thu, 27 June 24