ಗೂಗಲ್ ಅನ್ಯಾಯ ಮಾಡುತ್ತಿದೆಯೆಂದು ದೂರು ಕೊಟ್ಟ ಡಿಜಿಟಲ್ ನ್ಯೂಸ್ ಪ್ರಕಾಶಕರ ಸಂಘ; ಸಿಸಿಐನಿಂದ ತನಿಖೆಗೆ ಆದೇಶ
ಗೂಗಲ್ ವಿರುದ್ಧ ದೂರು ಕೊಟ್ಟ ಡಿಜಿಟಲ್ ನ್ಯೂಸ್ ಪಬ್ಲಿಶರ್ಸ್ ಅಸೋಸಿಯೇಶನ್, ಡಿಜಿಟಲ್ ಸುದ್ದಿ ಪ್ರಕಾಶಕರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಒಂದು ಖಾಸಗಿ ಕಂಪನಿ.
ಇಂಟರ್ನೆಟ್ ದೈತ್ಯ ಗೂಗಲ್ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗ (CCI-Competition Commission of India) ತನಿಖೆಗೆ ಆದೇಶಿಸಿದೆ. ಕೆಲವು ಆನ್ಲೈನ್ ಸರ್ಚಿಂಗ್ ಸೇವೆಗಳಲ್ಲಿ ಪ್ರಾಬಲ್ಯ ಹೊಂದಿರುವ ಗೂಗಲ್, ಸುದ್ದಿ ಸಂಗ್ರಹಣೆ ವಿಚಾರದಲ್ಲಿ ತನ್ನ ಪ್ರಬಲ ಸ್ಥಾನದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಡಿಜಿಟಲ್ ನ್ಯೂಸ್ ಪ್ರಕಾಶಕರ ಸಂಘ (DNPA) ನೀಡಿದ ದೂರಿನ ಮೇರೆಗೆ ಈ ತನಿಖೆ ನಡೆಸಲು ನಿರ್ಧರಿಸಿದ್ದಾಗಿ ಸಿಸಿಐ ತಿಳಿಸಿದೆ. ಡಿಜಿಟಲ್ ಮಾಧ್ಯಮಗಳು ಟ್ರಾಫಿಕ್ (ಅಂದರೆ ಹೆಚ್ಚಿನ ಜನರು ಓದಲು ಬರುವುದು)ಗಾಗಿ ಗೂಗಲ್ ಮೇಲೆ ಅವಲಂಬಿತರಾಗಿರುತ್ತಾರೆ. ಹೀಗಾಗಿ ಗೂಗಲ್ ಎಂಬುದು ಅವರ ವ್ಯವಹಾರದಲ್ಲಿ ಅನಿವಾರ್ಯವಾಗಿ ಪಾಲುದಾರ ಆಗಿರುತ್ತದೆ. ಆದರೆ ಗೂಗಲ್ ಈ ಸುದ್ದಿ ಕ್ರೋಢಿಕರಣದ ವಿಚಾರದಲ್ಲಿ ತನ್ನ ಪ್ರಾಬಲ್ಯವನ್ನು ಬಳಸಿಕೊಂಡು ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಸಿಸಿಐ ಮಾಹಿತಿ ನೀಡಿದೆ.
ಹೀಗೆ ಗೂಗಲ್ ವಿರುದ್ಧ 21 ಪುಟಗಳ ತನಿಖಾ ಆದೇಶ ನೀಡಿರುವ ಸಿಸಿಐ, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಜಾಪ್ರಭುತ್ವದಲ್ಲಿ, ಸುದ್ದಿ ಮಾದ್ಯಮಗಳನ್ನು ದುರ್ಬಲಗೊಳಿಸುವಂತಿಲ್ಲ. ಡಿಜಿಟಲ್ ಮಾಧ್ಯಮಗಳಿಗೆ ಓದುಗರು ಬರುವ ಪ್ರವೇಶದಂತೆ ಇರುವ ಸಂಸ್ಥೆಗಳು (ಉದಾ-ಗೂಗಲ್ ಮತ್ತು ಅಂಥ ಇತರ ಸರ್ಚ್ ಇಂಜಿನ್ ಸಂಸ್ಥೆಗಳು) ತಾರತಮ್ಯ ಮಾಡಿ ಅಥವಾ ತಮ್ಮ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪ್ರಕ್ರಿಯೆಗೆ ಹಾನಿ ಮಾಡಬಾರದು. ತಮ್ಮ ಮೂಲಕ ಬರುವ ಆದಾಯದ ಅಸಮರ್ಪಕ, ಅನ್ಯಾಯಯುತ ವಿತರಣೆ ಆಗಲು ಬಿಡಬಾರದು ಎಂದು ಸಿಸಿಐ ತಿಳಿಸಿದೆ.
ಗೂಗಲ್ ವಿರುದ್ಧ ದೂರು ಕೊಟ್ಟ ಡಿಜಿಟಲ್ ನ್ಯೂಸ್ ಪಬ್ಲಿಶರ್ಸ್ ಅಸೋಸಿಯೇಶನ್, ಡಿಜಿಟಲ್ ಸುದ್ದಿ ಪ್ರಕಾಶಕರ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಒಂದು ಖಾಸಗಿ ಕಂಪನಿ. ಗೂಗಲ್ ತಮಗೆ ಬರುವ ಆದಾಯದಲ್ಲಿ ನಷ್ಟವುಂಟು ಮಾಡುತ್ತದೆ ಎಂದು ಆರೋಪಿಸಿರುವ ಈ ಕಂಪನಿ, ಸದ್ಯ ಅಲ್ಪಾಬೆಟ್ ಇಂಕ್, ಗೂಗಲ್ ಎಲ್ಎಲ್ಸಿ ಮತ್ತು ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ದೂರು ದಾಖಲಿಸಿದೆ. ಆಂಡ್ರ್ಯಾಯ್ಡ್ ಮಾರುಕಟ್ಟೆಯಲ್ಲಿ ಗಟ್ಟಿ ಸ್ಥಾನ ಹೊಂದಿರುವ ಗೂಗಲ್ನಿಂದಾಗಿ ಪ್ರಕಾಶಕರಿಗೆ ಜಾಹೀರಾತಿನಲ್ಲೂ ನಷ್ಟವಾಗಿದೆ. ಶೇ.51ರಷ್ಟನ್ನು ನಾವು ಪಡೆಯುವಂತಾಗಿದೆ ಎಂದೂ ಸಂಘ ಆರೋಪಿಸಿದೆ. ಡಿಜಿಟಲ್ ನ್ಯೂಸ್ ಪಬ್ಲಿಶರ್ಸ್ ಅಸೋಸಿಯೇಶನ್ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿ, 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಿಸಿಐ, ಮಹಾನಿರ್ದೇಶಕರಿಗೆ ಸೂಚಿಸಿದೆ.