
ದೆಹಲಿ, ಜನವರಿ 24: ಬಹುಕಾಲದಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆಗೆ (Wage Revision) ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಆ ಮೂಲಕ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಾರ್ವಜನಿಕ ವಲಯದ ವಿಮಾ ಕಂಪನಿ, ನಬಾರ್ಡ್ ಉದ್ಯೋಗಿಗಳು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳವಾಗಲಿದೆ.
ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಮಾಧ್ಯಮ ಪ್ರಕರಟಣೆ ಹೊರಡಿಸಿದೆ. ಈ ನಿರ್ಧಾರವು ಪಿಂಚಣಿದಾರರ ದೀರ್ಘ ಮತ್ತು ಸಮರ್ಪಿತ ವೃತ್ತಿಪರ ಸೇವೆಯನ್ನು ಗುರುತಿಸಿ, ಸರ್ಕಾರದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಯೋಗಕ್ಷೇಮದ ಮೇಲಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಒತ್ತಿ ಹೇಳಿದೆ.
Central Government approves the Wage Revision as well as Pension Revision for the employees and pensioners of PSGICs, NABARD and RBI https://t.co/Q0d98WTJeN
— Nirmala Sitharaman (@nsitharaman) January 23, 2026
ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ ಘೋಷಣೆಯಾಗಿದ್ದು, ಈ ಪರಿಷ್ಕರಣೆಯಿಂದ ಒಟ್ಟಾರೆ ವೇತನ ವೆಚ್ಚದಲ್ಲಿ 12.41 ಶೇಕಡಾ ಹೆಚ್ಚಳವಾಗಲಿದೆ. ಇದರ ಭಾಗವಾಗಿ, ಪ್ರಸ್ತುತ ಮೂಲ ವೇತನ ಮತ್ತು ಡಿಯರ್ನೆಸ್ ಅಲೌನ್ಸ್ ಮೇಲೆ 14 ಶೇಕಡಾ ಹೆಚ್ಚಳ ನೀಡಲಾಗುತ್ತದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಗೆಲುವು ಹೀಗೆಯೇ ಆರಂಭವಾಗಿತ್ತು, ಮುಂದೆ ಕೇರಳದಲ್ಲೂ ಗೆಲ್ತೀವಿ: ಪ್ರಧಾನಿ ಮೋದಿ
ಈ ವೇತನ ಪರಿಷ್ಕರಣೆಯಿಂದ ಒಟ್ಟು 43,247 ಪಿಎಸ್‌ಜಿಐಸಿ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಜೊತೆಗೆ, 01 ಏಪ್ರಿಲ್ 2010ರ ನಂತರ ಸೇವೆಗೆ ಸೇರಿದ ಉದ್ಯೋಗಿಗಳ ಭವಿಷ್ಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗೆ ನೀಡುವ ಕೊಡುಗೆಯನ್ನು 10 ಶೇಕಡೆಯಿಂದ 14 ಶೇಕಡಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ವೇತನ ಪರಿಷ್ಕರಣೆಯಿಂದ ಸರ್ಕಾರಕ್ಕೆ ಒಟ್ಟು ರೂ. 8,170.30 ಕೋಟಿ ರೂ ವೆಚ್ಚವಾಗಲಿದೆ. ಇದರಲ್ಲಿ ವೇತನ ಪರಿಷ್ಕರಣೆ ಬಾಕಿ ಹಣ (ಅರಿಯರ್ಸ್) ಪಾವತಿಗೆ ರೂ. 5,822.68 ಕೋಟಿ ಮೀಸಲಿಡಲಾಗಿದೆ. ಜೊತೆಗೆ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಗಾಗಿ ರೂ. 250.15 ಕೋಟಿ ರೂ ಹಾಗೂ ಕುಟುಂಬ ಪಿಂಚಣಿಗೆ ರೂ. 2,097.47 ಕೋಟಿ ರೂ ವೆಚ್ಚವಾಗಲಿದೆ.
ನಬಾರ್ಡ್‌ನ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ವರ್ಗದ ಎಲ್ಲಾ ಉದ್ಯೋಗಿಗಳಿಗೆ ವೇತನ ಹಾಗೂ ಭತ್ಯೆಗಳಲ್ಲಿ ಶೇಕಡಾ 20ರಷ್ಟು ಹೆಚ್ಚಳ ನೀಡಲು ತೀರ್ಮಾನಿಸಲಾಗಿದೆ. ಈ ನಿರ್ಧಾರದಿಂದ ಸುಮಾರು 3,800 ಸೇವೆಯಲ್ಲಿರುವ ಹಾಗೂ ನಿವೃತ್ತ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಈ ವೇತನ ಪರಿಷ್ಕರಣೆಯಿಂದ ನಬಾರ್ಡ್‌ಗೆ ವರ್ಷಕ್ಕೆ ಹೆಚ್ಚುವರಿ ಸುಮಾರು ರೂ. 170 ಕೋಟಿ ರೂ ವೇತನ ವೆಚ್ಚವಾಗಲಿದೆ. ಅಲ್ಲದೆ, ಬಾಕಿ ಹಣ (ಅರಿಯರ್ಸ್) ಪಾವತಿಗೆ ಒಟ್ಟು ಸುಮಾರು ರೂ. 510 ಕೋಟಿ ವೆಚ್ಚವಾಗಲಿದೆ.
ಪಿಂಚಣಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಒಮ್ಮೆ ಮಾತ್ರ ನೀಡಲಾಗುವ ಬಾಕಿ ಪಾವತಿಗೆ ರೂ. 50.82 ಕೋಟಿ ರೂ ಖರ್ಚಾಗಲಿದ್ದು, ಪ್ರತೀ ತಿಂಗಳು ಪಿಂಚಣಿ ಪಾವತಿಗಾಗಿ ಹೆಚ್ಚುವರಿಯಾಗಿ ರೂ. 3.55 ಕೋಟಿ ರೂ ವೆಚ್ಚವಾಗಲಿದೆ. ಇದರಿಂದ ನಬಾರ್ಡ್‌ನ 269 ಪಿಂಚಣಿದಾರರು ಹಾಗೂ 457 ಕುಟುಂಬ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿಲ್ಲ: ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸುವೆ ಎಂದ ಶಶಿ ತರೂರ್
ಇನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹಿರಿಯ ನಾಗರಿಕರು ಹಾಗೂ ಅವಲಂಬಿತರಿಗಾಗಿ ನ್ಯಾಯಸಮ್ಮತ, ಸಮರ್ಪಕ ಮತ್ತು ದೀರ್ಘಕಾಲಿಕ ನಿವೃತ್ತಿ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಹಾಗೂ 23,260 ಕುಟುಂಬ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಈ ನಿರ್ಧಾರವು ಪಿಎಸ್‌ಜಿಐಸಿ ಮತ್ತು ನಬಾರ್ಡ್ ಸಂಸ್ಥೆಗಳ ಉದ್ಯೋಗಿಗಳು, ಆರ್‌ಬಿಐ ಹಾಗೂ ನಬಾರ್ಡ್‌ನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಮಹತ್ವದ ಪರಿಹಾರವನ್ನು ಒದಗಿಸಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.