ಜೀವ ಪಣಕ್ಕಿಟ್ಟು ಮಗುವಿನ ಪ್ರಾಣ ಉಳಿಸಿದ, ಅದೇ ಪುಟಾಣಿಗೆ ಬಹುಮಾನದ ಅರ್ಧ ಹಣ ಕೊಟ್ಟ ರೈಲ್ವೆ ಉದ್ಯೋಗಿ: ಉದಾತ್ತ ಮನಸ್ಸಿಗೆ ನೆಟ್ಟಿಗರು ಫಿದಾ

|

Updated on: Apr 22, 2021 | 5:25 PM

Mayur Shelke: ನನಗೆ ಲಭಿಸಿದ ಹಣದ ಅರ್ಧವನ್ನು ನಾನು ಆ ಬಾಲಕನಿಗೆ ನೀಡಲಿದ್ದೇನೆ. ಅದು ಅವನ ಶಿಕ್ಷಣಕ್ಕಾಗಿ ಬಳಕೆಯಾಗಲಿ. ಆರ್ಥಿಕವಾಗಿ ಹಿಂದುಳಿದ ಕುಟುಂಬ ಅವರದ್ದು ಎಂದು ಗೊತ್ತಾಯ್ತು. ಹಾಗಾಗಿಯೇ ನಾನು ಈ ನಿರ್ಧಾರ ಕೈಗೊಂಡೆ ಎಂದು ಮಯೂರ್ ಶಿಲ್ಕೆ ಹೇಳಿದ್ದಾರೆ.

ಜೀವ ಪಣಕ್ಕಿಟ್ಟು ಮಗುವಿನ ಪ್ರಾಣ ಉಳಿಸಿದ, ಅದೇ ಪುಟಾಣಿಗೆ ಬಹುಮಾನದ ಅರ್ಧ ಹಣ ಕೊಟ್ಟ ರೈಲ್ವೆ ಉದ್ಯೋಗಿ: ಉದಾತ್ತ ಮನಸ್ಸಿಗೆ ನೆಟ್ಟಿಗರು ಫಿದಾ
ಮಯೂರ್ ಶೆಲ್ಕೆ.
Follow us on

ಮುಂಬೈ: ಮುಂಬೈ ರೈಲ್ವೆ ನಿಲ್ದಾಣದಲ್ಲಿ ಅಮ್ಮನ ಕೈಹಿಡಿದುಕೊಂಡು ಹೋಗುತ್ತಿದ್ದ 6ರ ಹರೆಯದ ಬಾಲಕ ಫ್ಲಾಟ್ ಫಾರಂನ ಅಂಚಿನಿಂದ ಜಾರಿ ರೈಲು ಹಳಿಗೆ ಬೀಳುತ್ತಾನೆ. ಆ ಕಡೆಯಿಂದ ರೈಲು ಬರುತ್ತಿದೆ, ಅಸಹಾಯಕಳಾದ ಅಮ್ಮ. ಆ ಹೊತ್ತಿಗೆ ಈ ಕಡೆಯಿಂದ ಓಡಿ ಬಂದ ಸೆಂಟ್ರಲ್ ರೈಲ್ವೆ ಪಾಯಿಂಟ್​ಮೆನ್ ಆ ಬಾಲಕನ್ನು ಹಳಿಯಿಂದ ಮೇಲೆತ್ತಿ ಕಾಪಾಡುತ್ತಾನೆ. ಒಂದೇ ಒಂದು ಸೆಕೆಂಡ್ ತಡವಾಗಿದ್ದರೆ ಅಲ್ಲಿನ ಕತೆಯೇ ಬೇರೆಯಾಗುತ್ತಿತ್ತು. ತನ್ನ ಜೀವದ ಹಂಗು ತೊರೆದು ರೈಲ್ವೆ ಹಳಿಯಿಂದ ಬಾಲಕನನ್ನು ರಕ್ಷಿಸಿದ ಆ ವ್ಯಕ್ತಿಯ ಹೆಸರು ಮಯೂರ್ ಶೆಲ್ಕೆ. ಥಾಣೆ ಜಿಲ್ಲೆಯ ವಾನಗನಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಈ ಘಟನೆಯ ವಿಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಶಿಲ್ಕೆ ಅವರ ಈ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆಗಳ ಪೂರವೇ ಹರಿದು ಬಂದಿದೆ.

ಶಿಲ್ಕೆಯ ಧೈರ್ಯವನ್ನು ರೈಲ್ವೆ ಸಚಿವ ಪೀಯುಷ್ ಗೋಯಲ್ ಶ್ಲಾಘಿಸಿದ್ದಾರೆ. ಸೆಂಟ್ರಲ್ ರೈಲ್ವೆಯ ವಿಭಾಗೀಯ ರೈಲ್ವೆ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಶಿಲ್ಕೆ ಅವರಿಗೆ 50,000 ರೂ ಬಹುಮಾನವಾಗಿ ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಶಿಲ್ಕೆ, ಈ ಹಣದಲ್ಲಿ ಅರ್ಧ ಹಣವನ್ನು ಆ ಬಾಲಕನಿಗೆ ನೀಡುವುದಾಗಿ ಹೇಳಿದ್ದಾರೆ.

ನನಗೆ ಲಭಿಸಿದ ಹಣದ ಅರ್ಧವನ್ನು ನಾನು ಆ ಬಾಲಕನಿಗೆ ನೀಡಲಿದ್ದೇನೆ. ಅದು ಅವನ ಶಿಕ್ಷಣಕ್ಕಾಗಿ ಬಳಕೆಯಾಗಲಿ. ಆರ್ಥಿಕವಾಗಿ ಹಿಂದುಳಿದ ಕುಟುಂಬ ಅವರದ್ದು ಎಂದು ಗೊತ್ತಾಯ್ತು. ಹಾಗಾಗಿಯೇ ನಾನು ಈ ನಿರ್ಧಾರ ಕೈಗೊಂಡೆ ಎಂದು ಶಿಲ್ಕೆ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.


ದೃಷ್ಟಿದೋಷವಿರುವ ಅಮ್ಮನೊಂದಿಗೆ ಹೋಗುತ್ತಿದ್ದಾಗ ಬಾಲಕ ರೈಲ್ವೆ ಹಳಿಗೆ ಬಿದ್ದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.


ಕೊವಿಡ್ ಸಾಂಕ್ರಾಮಿಕದ ದುರಿತ ಕಾಲದಲ್ಲಿಯೂ ನನಗೆ ಹಣವನ್ನು ದೇಣಿಗೆಯಾಗಿ ನೀಡಲಿಚ್ಛಿಸುವವರು ದಯವಿಟ್ಟು ಚೆಕ್ ಮೂಲಕ ಕೊಡಿ. ಹೀಗೆ ಕೊಟ್ಟರೆ ನಾನು ಆ ಬಾಲಕ ಮತ್ತು ಅವನ ಅಮ್ಮನಿಗೆ ಅಥವಾ ಹಣದಅಗತ್ಯವಿರುವವರಿಗೆ ಸಹಾಯ ಮಾಡಬಹುದು ಎಂದು ಶಿಲ್ಕೆ ಮನವಿ ಮಾಡಿದ್ದರು.

ಈ ನಿರ್ಧಾರ ಘೋಷಿಸುತ್ತಿದ್ದಂತೆ ನೆಟ್ಟಿಗರು ಶಿಲ್ಕೆಯ ಹೃದಯವಂತಿಕೆಯನ್ನು ಕೊಂಡಾಡಿದ್ದಾರೆ.
5 ವರ್ಷಗಳಿಂದ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಶಿಲ್ಕೆ ಬಾಲಕನನ್ನು ರಕ್ಷಿಸಿದ ಘಟನೆಯನ್ನು ಮನೆಯಲ್ಲಿ ಹೇಳಿರಲಿಲ್ಲವಂತೆ. ಈ ಬಗ್ಗೆ ಇಂಡಿಯನ್ ಎಕ್ಸ್​ಪ್ರೆಸ್ ಜತೆ ಮಾತನಾಡಿದ ಅವರು, ಎರಡು ದಿನಗಳವರೆಗೆ ನಾನು ಈ ವಿಷಯವನ್ನು ಹೇಳಲಿಲ್ಲ. ಇವತ್ತು ವಿಡಿಯೊ ವೈರಲ್ ಆದಾಗ ಅವರು ಫೋನ್ ಮಾಡಿದರು. ಮೊದಲಿಗೆ ಅಮ್ಮ ನನಗೆ ಬೈದರು.ಆಮೇಲೆ ಹೆಮ್ಮೆ ಅನಿಸುತ್ತಿದೆ ಎಂದು ಹೇಳಿದರು. ನನ್ನ ಪತ್ನಿಗೂ ಭಯ ಆಗಿತ್ತು. ಆದರೆ ಈಗ ಆಕೆಗೆ ಖುಷಿಯಾಗಿದೆ. ಶಿಲ್ಕೆ ಅವರು ನೆರಾಲ್ ನಲ್ಲಿ ಹೆತ್ತವರು,ಪತ್ನಿ ಮತ್ತು 10 ವರ್ಷದ ಮಗನೊಂದಿಗೆ ವಾಸವಾಗಿದ್ದಾರೆ.

ಇದನ್ನೂ ಓದಿ: Viral Video: ರೈಲ್ವೇ ಹಳಿಗೆ ಬಿದ್ದ ಮಗು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು; ಸಿಬ್ಬಂದಿಗೆ ರೈಲ್ವೇ ಇಲಾಖೆ ಪ್ರಶಂಸೆ