ಇಪಿಎಫ್ ಮೇಲೆ ಶೇ. 8.25 ಬಡ್ಡಿದರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

2025ನೇ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು ಶೇ. 8.25ರಷ್ಟು ಇಪಿಎಫ್ ಬಡ್ಡಿದರವನ್ನು ಅನುಮೋದಿಸಿದೆ. ಇದರಿಂದ 7 ಕೋಟಿ ಚಂದಾದಾರರಿಗೆ ಪ್ರಯೋಜನವಾಗಲಿದೆ. 2024-25ನೇ ಹಣಕಾಸು ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿನ ಇಪಿಎಫ್ ಸಂಗ್ರಹದ ಮೇಲೆ ವಾರ್ಷಿಕ ಶೇ. 8.25ರಷ್ಟು ಬಡ್ಡಿದರವನ್ನು ಜಮಾ ಮಾಡಲು ಸಿಬಿಟಿ ಶಿಫಾರಸು ಮಾಡಿದೆ. ಭಾರತ ಸರ್ಕಾರವು ಬಡ್ಡಿದರವನ್ನು ಅಧಿಕೃತವಾಗಿ ತಿಳಿಸುತ್ತದೆ. ಅದರ ನಂತರ ಇಪಿಎಫ್‌ಒ ಚಂದಾದಾರರ ಖಾತೆಗಳಿಗೆ ಬಡ್ಡಿದರವನ್ನು ಜಮಾ ಮಾಡುತ್ತದೆ.

ಇಪಿಎಫ್ ಮೇಲೆ ಶೇ. 8.25 ಬಡ್ಡಿದರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
Epfo

Updated on: May 24, 2025 | 6:16 PM

ನವದೆಹಲಿ, ಮೇ 24: 2024-25ನೇ ಹಣಕಾಸು ವರ್ಷಕ್ಕೆ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲಿನ ಶೇ. 8.25ರಷ್ಟು ಬಡ್ಡಿದರವನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ. ಇದು 7 ಕೋಟಿಗೂ ಹೆಚ್ಚು ಚಂದಾದಾರರ ನಿವೃತ್ತಿಯ ನಂತರದ ಉಳಿತಾಯಕ್ಕೆ ಭಾರೀ ಪ್ರಯೋಜನ ನೀಡುತ್ತದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತೆಗೆದುಕೊಂಡ ಈ ನಿರ್ಧಾರವು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಚಂದಾದಾರರ ಖಾತೆಗಳಿಗೆ ಬಡ್ಡಿ ಸಂಗ್ರಹಣೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಇದಕ್ಕೂ ಮೊದಲು, 2024ರ ಫೆಬ್ರವರಿಯಲ್ಲಿ ಇಪಿಎಫ್ಒ ಇಪಿಎಫ್ ಠೇವಣಿಗಳ ಮೇಲಿನ ಶೇ 8.25ರಷ್ಟು ಬಡ್ಡಿದರವನ್ನು ಉಳಿಸಿಕೊಳ್ಳಲು ನಿರ್ಧರಿಸಿತ್ತು. ಈ ನಿರ್ಧಾರವು ಹಣಕಾಸು ಸಚಿವಾಲಯದ ಅನುಮೋದನೆಗೆ ಒಳಪಟ್ಟಿತ್ತು. ಈಗ ಅದಕ್ಕೆ ಅನುಮೋದನೆ ಸಿಕ್ಕಿದೆ. ಅನುಮೋದನೆಯನ್ನು ದೃಢೀಕರಿಸುವ ಕಾರ್ಮಿಕ ಸಚಿವಾಲಯದ ಅಧಿಕೃತ ಸಂವಹನವನ್ನು ಗುರುವಾರ ಇಪಿಎಫ್ಒಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ವಿದೇಶಕ್ಕೆ ಹೋದರೂ ಇಪಿಎಫ್ ಪಡೆಯೋದು ಹೇಗೆ?

ಈ ಶೇ. 8.25 ಬಡ್ಡಿದರವನ್ನು ದೇಶಾದ್ಯಂತ 7 ಕೋಟಿಗೂ ಹೆಚ್ಚು ಸಕ್ರಿಯ ಇಪಿಎಫ್ ಚಂದಾದಾರರ ಭವಿಷ್ಯ ನಿಧಿ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. 2024ರ ಫೆಬ್ರವರಿ 28ರಂದು ನವದೆಹಲಿಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಇಪಿಎಫ್ಒನ ಕೇಂದ್ರ ಟ್ರಸ್ಟಿಗಳ ಮಂಡಳಿಯ 237ನೇ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

2025ರ ಹಣಕಾಸು ವರ್ಷದ 8.25% ಬಡ್ಡಿದರವು ಸಾರ್ವಜನಿಕರಿಗೆ ಲಭ್ಯವಿರುವ ಅನೇಕ ಸ್ಥಿರ-ಆದಾಯದ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದರೆ ಹೆಚ್ಚಿನ ಲಾಭವನ್ನು ಪ್ರತಿನಿಧಿಸುತ್ತದೆ. ಇಪಿಎಫ್ ಅನ್ನು ಬಹಳ ಹಿಂದಿನಿಂದಲೂ ವಿಶ್ವಾಸಾರ್ಹ ಉಳಿತಾಯ ಸಾಧನವೆಂದು ಪರಿಗಣಿಸಲಾಗಿದ್ದು, ವಿವಿಧ ವಲಯಗಳ ಉದ್ಯೋಗಿಗಳಿಗೆ ನಿವೃತ್ತಿ ನಂತರ ಈ ಹಣ ದೊರಕಲಿದೆ.

ಇದನ್ನೂ ಓದಿ: EPFO: ಹಳೆಯ ಇಪಿಎಫ್ ಅಕೌಂಟ್​ಗಳನ್ನು ಹೊಸ ಅಕೌಂಟ್​​​ಗೆ ವಿಲೀನಗೊಳಿಸದಿದ್ದರೆ ಸಮಸ್ಯೆಗಳೇನು? ಇಲ್ಲಿದೆ ಡೀಟೇಲ್ಸ್

ಈ ಬಡ್ಡಿದರವು ಇತ್ತೀಚಿನ ವರ್ಷಗಳಲ್ಲಿ ಇಪಿಎಫ್ ಆದಾಯದಲ್ಲಿ ನಿರಂತರ ಹೆಚ್ಚಳವನ್ನು ಸೂಚಿಸುತ್ತದೆ. ಇಪಿಎಫ್‌ಒ ಬಡ್ಡಿದರವನ್ನು 2023-24 ರಲ್ಲಿ ಶೇ. 8.15ರಿಂದ ಶೇ. 8.25ಕ್ಕೆ ಸ್ವಲ್ಪ ಹೆಚ್ಚಿಸಿತು. ಮಾರ್ಚ್ 2022ರಲ್ಲಿ ಇಪಿಎಫ್‌ಒ ಬಡ್ಡಿದರವನ್ನು 8.1ಕ್ಕೆ ಇಳಿಸಿತ್ತು. ಪ್ರಸ್ತುತ ದರವು ದೀರ್ಘಾವಧಿಯ ಉಳಿತಾಯಕ್ಕಾಗಿ ಸುರಕ್ಷಿತ ಮತ್ತು ಸ್ಥಿರವಾದ ಮಾರ್ಗವನ್ನು ಬಯಸುವ ಹೂಡಿಕೆದಾರರಿಗೆ ಸ್ಥಿರತೆಯನ್ನು ನೀಡುತ್ತದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ