Rain Updates: ಕೇರಳಕ್ಕೆ ಮಾನ್ಸೂನ್ ಆಗಮನವಾಗುತ್ತಿದ್ದಂತೆ ಕರ್ನಾಟಕ, ಗೋವಾಗೆ ರೆಡ್ ಅಲರ್ಟ್ ಘೋಷಣೆ; ಮುಂಬೈನಲ್ಲೂ ಭಾರೀ ಮಳೆ
ಭಾರತೀಯ ಹವಾಮಾನ ಇಲಾಖೆಯು ಕೇರಳ, ಗೋವಾ ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಭಾನುವಾರದವರೆಗೆ ಭಾರೀ ಮಳೆಯಾಗುವ ಬಗ್ಗೆ ಎಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು, ಮೇ 24: ಕೇರಳಕ್ಕೆ ಇಂದು ಮುಂಗಾರು (Monsoon) ಪ್ರವೇಶವಾಗಿದೆ. ನೈಋತ್ಯ ಮಾನ್ಸೂನ್ ಅನ್ನು ಸ್ವಾಗತಿಸಿರುವ ಕರ್ನಾಟಕ (Karnataka Rains) ಮತ್ತು ಕೇರಳ (Kerala Rain) ಸೇರಿದಂತೆ ಹಲವಾರು ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆಯು ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಗೋವಾಕ್ಕೂ ರೆಡ್ ಅಲರ್ಟ್ (Red Alert) ಘೋಷಿಸಲಾಗಿದ್ದು, ಭಾನುವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಇಂದು ಮತ್ತು ನಾಳೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ಹೆಚ್ಚಾಗಿದೆ. ಮಲೆನಾಡು ರಾಜ್ಯಗಳಲ್ಲೂ ಗುಡುಗು, ಮಿಂಚು ಸಹಿತ ಮಳೆಯಾಗಿದೆ.
ಹವಾಮಾನ ತಜ್ಞರು ನೀಡಿರುವ ಮುನ್ಸೂಚನೆಯಲ್ಲಿ, ಮುಂಬೈನಲ್ಲಿ ಮೇ 25ರಿಂದ 27ರವರೆಗೆ 3 ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದಿದ್ದಾರೆ. ಇಂದಿನಿಂದ ಮೋಡ ಕವಿದ ವಾತಾವರಣವಿದ್ದು, ಸೋಮವಾರದವರೆಗೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
Monsoon Surge enter #Kerala, #Karnataka, #Tamilnadu through Western Ghats There is a possibility of heavy rain for the next 5 days… Kerala Western Ghats. #Karnataka, #Mumbai, #Goa, #Kanyakumari, #Nagercoil. #Palakkad, #Konguareas,#Nilgiri #Covai #Theni, #Dindigul. #Tenkasi, pic.twitter.com/5LwwHbiGk2
— INDIAN WEATHER MAN 🌨️🌨️ (@sanjayweather_c) May 24, 2025
ಕೇರಳದಲ್ಲಿ ಮಳೆ:
ನೈಋತ್ಯ ಮಾನ್ಸೂನ್ ಇಂದು ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ್ದು, ಜೂನ್ 1ರ ಸಾಮಾನ್ಯ ದಿನಾಂಕಕ್ಕಿಂತ 8 ದಿನ ಮುಂಚಿತವಾಗಿ ಮಳೆಗಾಲ ಆರಂಭವಾಗಿದೆ. 2009ರಲ್ಲಿ ಮೇ 23ರಂದು ಮಾನ್ಸೂನ್ ಪ್ರಾರಂಭವಾದ ನಂತರ ಇದು ಕೇರಳದಲ್ಲಿ ಇಷ್ಟು ಬೇಗ ಆರಂಭವಾದ ಮೊದಲ ಮಾನ್ಸೂನ್ ಆಗಿದೆ. ಕೇರಳದಲ್ಲಿ ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಆಲಪ್ಪುಳ, ತ್ರಿಶೂರ್, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.
ಕಳೆದ 25 ವರ್ಷಗಳಲ್ಲಿ, ಅತ್ಯಂತ ವಿಳಂಬವಾದ ಆಗಮನ 2016ರಲ್ಲಿ ಸಂಭವಿಸಿತ್ತು. ಆಗ ಮಾನ್ಸೂನ್ ಜೂನ್ 9ರಂದು ಕೇರಳವನ್ನು ಪ್ರವೇಶಿಸಿತ್ತು. ಕಳೆದ ಎರಡು ದಿನಗಳಿಂದ ಕೇರಳ ರಾಜ್ಯದಲ್ಲಿ ಮಾನ್ಸೂನ್ ಆರಂಭಕ್ಕೆ ಅನುಕೂಲಕರವಾದ ಎಲ್ಲಾ ಪರಿಸ್ಥಿತಿಗಳು ಅಭಿವೃದ್ಧಿಗೊಂಡಿವೆ. ಕಡಿಮೆ ಒತ್ತಡದ ಪ್ರದೇಶ ಮತ್ತು ಮುಂದುವರಿಯುತ್ತಿರುವ ಮಾನ್ಸೂನ್ ವ್ಯವಸ್ಥೆಯ ಸಂಯೋಜನೆಯಿಂದಾಗಿ ಕೇರಳದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.
ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಆಗಿರುವ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಮೇ 28ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ
ಕರ್ನಾಟಕದ ಕರಾವಳಿಯಲ್ಲಿ ರೆಡ್ ಅಲರ್ಟ್;
ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಕರ್ನಾಟಕದಾದ್ಯಂತ ಅದರಲ್ಲೂ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ (ಹವಾಮಾನ ಇಲಾಖೆ) ನೀಡಿದೆ. ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮೇ 27ರವರೆಗೆ ಬಿರುಗಾಳಿ ಸಹಿತ ಅತ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕೊಂಚ ನಿಯಂತ್ರಣಕ್ಕೆ ಬರಲಿದೆ.
Update on southwest Monsoon Advance today, the 24th May 2025 over India
❖The Southwest Monsoon has further advanced into remaining parts of south Arabian Sea, some parts of westcentral & eastcentral Arabian Sea, entire Lakshadweep area, Kerala, Mahe, some parts of Karnataka,… pic.twitter.com/4VsTjrSRw9
— India Meteorological Department (@Indiametdept) May 24, 2025
ಬೆಳಗಾವಿ ಮತ್ತು ಧಾರವಾಡದಲ್ಲಿ ಕೂಡ ಅಲರ್ಟ್ ಘೋಷಿಸಿದ್ದು, ಬಳ್ಳಾರಿ, ಬೆಂಗಳೂರು (ಗ್ರಾಮೀಣ ಮತ್ತು ನಗರ), ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು ಮತ್ತು ಇತರ ಒಳನಾಡಿನ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ. ಮೇ 25ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ.ಹವಾಮಾನ ಇಲಾಖೆಯ ಮುನ್ಸೂಚನೆಯ ಅವಧಿಯಲ್ಲಿ ಮಳೆಯೊಂದಿಗೆ ಬಿರುಗಾಳಿ ಬೀಸಲಿದ್ದು, ಹಲವಾರು ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Monsoon 2025: ಕೇರಳಕ್ಕೆ ಮುಂಗಾರು ಪ್ರವೇಶ; 2009ರ ಬಳಿಕ ಮೊದಲ ಬಾರಿ ಬೇಗ ಮಳೆಗಾಲ ಶುರು
ಬೆಂಗಳೂರಿನಲ್ಲೂ ಮಳೆ:
ಮುಂದಿನ 5 ದಿನಗಳಲ್ಲಿ ಬೆಂಗಳೂರಿನಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಬೆಂಗಳೂರಿನಲ್ಲಿ ಮೇ 28ರವರೆಗೆ ಮಳೆ ಹಗುರದಿಂದ ಸಾಧಾರಣವಾಗಿ, ಕೆಲವೆಡೆ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ಇಲ್ಲಿ ಗರಿಷ್ಠ ಗಾಳಿಯು ಪ್ರತಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ನಷ್ಟು ವೇಗದಲ್ಲಿ ಬೀಸಲಿದೆ. ಬೆಳಗಾವಿ, ಧಾರವಾಡ, ಹಾವೇರಿ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಸಹ ಭಾರಿ ಮಳೆ ಆಗಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಮೇ 27ರವರೆಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಇನ್ನುಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗುವ ಲಕ್ಷಣ ಇದ್ದು, ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಉತ್ತರ ಕನ್ನಡ, ಮಂಡ್ಯ, ಶಿವಮೊಗ್ಗ, ಗದಗ, ಹಾವೇರಿ, ತುಮಕೂರು, ಬೀದರ್, ದಾವಣಗೆರೆ, ಚಿತ್ರದುರ್ಗ, ಬಾಗಲಕೋಟೆ, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಒಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








