Bangalore Rains: ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಲೇ ಶುರುವಾದ ಮಳೆ, ಹಲವೆಡೆ ಟ್ರಾಫಿಕ್ ಜಾಮ್
ಕರ್ನಾಟಕದಾದ್ಯಂತ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಭಾರಿ ಮಳೆ ಮತ್ತು ಗಾಳಿಯಿಂದ ಮರಗಳು ಉರುಳಿ, ಟ್ರಾಫಿಕ್ ಜಾಮ್ ಉಂಟಾಗಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಇನ್ನೂ ಭಾರಿ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜನರು ಎಚ್ಚರಿಕೆಯಿಂದ ಇರಬೇಕು ಸೂಚಿಸಿದೆ.

ಬೆಂಗಳೂರು, ಮೇ 16: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆಯ (Karnataka Rain) ಅಬ್ಬರ ಜೋರಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲೂ ವರುಣಾರ್ಭಟ (Bengaluru Rain) ಜೋರಾಗಿದೆ. ಗಾಳಿ-ಮಳೆಗೆ ಮರಗಳು ಧರೆಗೆ ಉರುಳಿವೆ. ಕೆಲವು ಕಡೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಶುಕ್ರವಾರ (ಮೇ.16) ಬೆಂಗಳೂರಿನ ಕೆಲವು ಕಡೆ ಮೋಡಕವಿದ ವಾತಾವರಣವಿದ್ದು, ಇನ್ನು ಕೆಲವು ಏರಿಯಾಗಳಲ್ಲಿ ಮಳೆಯಾಗುತ್ತಿದೆ.
ರಾಜಧಾನಿ ಬೆಂಗಳೂರು ನಗರದ ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ ಮಳೆಯಾಗುತ್ತಿದೆ. ಮಳೆ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ವಾಹನ ಸವಾರರು ಪರದಾಡಿದರು. ಮಳೆ ಸುರಿದು, ರಸ್ತೆಗಳಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರಿನಲ್ಲಿ ಮೇ 17 ರಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮರ ಬಿದ್ದು ಸಂಚಾರ ನಿರ್ಬಂಧ
ಭಾರಿ ಗಾಳಿ-ಮಳೆಗೆ ಶಿವಾನಂದ ಜಂಕ್ಷನ್‌ನಲ್ಲಿ ಮರ ಬಿದ್ದ ಕಾರಣ ಕೆಕೆ ರಸ್ತೆಯಿಂದ-ಮೇಖ್ರಿ ವೃತ್ತದ ಕಡೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಟ್ವಿಟರ್ ಪೋಸ್ಟ್
ಶಿವಾನಂದ ಜಂಕ್ಷನ್‌ನಲ್ಲಿ ಮರ ಬಿದ್ದ ಕಾರಣ ಕೆಕೆ ರಸ್ತೆಯನ್ನು ಮೇಖ್ರಿ ವೃತ್ತದ ಕಡೆಗೆ ಮುಚ್ಚಲಾಗಿದೆ,ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ. pic.twitter.com/7rlTm3ucK3
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) May 16, 2025
ಇನ್ನು ಗುಬ್ಬಲಾಲ ಮುಖ್ಯ ರಸ್ತೆಯಲ್ಲೂ ಮರ ಬಿದ್ದ ಕಾರಣ ಗುಬ್ಬಲಾಲ 80ಅಡಿ ರಸ್ತೆ ಕಡೆಗೆ ನಿಧಾನಗತಿಯ ವಾಹನ ಸಂಚಾರವಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಮುಂದಿನ 3 ಗಂಟೆ ಭಾರಿ ಮಳೆ
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ 23 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆ
ಕಳೆದ 24ಗಂಟೆಗಳಲ್ಲಿ ಕೋಲಾರ ಜಿಲ್ಲೆಯಾದ್ಯಂತ ಮಳೆಯಾಗಿದೆ. ಇನ್ನು, ಬೆಂಗಳೂರು ಗ್ರಾಮಾಂತರ, ವಿಜಯಪುರ, ಕಲಬುರಗಿ, ಚಿಕ್ಕಮಗಳೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಹಾಗೆ, ಬೆಳಗಾವಿ, ತಮಕೂರು, ಬೆಂಗಳೂರು ನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲೆಗಳ ಅಲ್ಲಲ್ಲಿ ಚುದರಿದಂತೆ ಮಳೆಯಾಗದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮೇ 17ರಿಂದ ಭಾರಿ ಮಳೆ, ಕರ್ನಾಟಕದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮಂಡ್ಯ, ಶಿವಮೊಗ್ಗ, ದಾವಣಗೆರೆ, ಉಡುಪಿ, ಹಾವೇರಿ, ರಾಯಚೂರು, ಮೈಸೂರು, ಭಾಗಲಕೋಟೆ, ಚಾಮರಾಜನಗರ, ಕೊಡಗು, ಬೀದರ್, ಕೊಪ್ಪಳ, ಉತ್ತರ ಕನ್ನಡ, ಧಾರವಾಡ, ದಕ್ಷಿಣ ಕನ್ನಡ, ವಿಜಯನಗರ, ಗದಗ, ಬಳ್ಳಾರಿ ಮತ್ತು ರಾಮನಗರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Fri, 16 May 25




