Delhi Chalo | ಸುಪ್ರೀಂ ಕೋರ್ಟ್ ಅಂಗಳಕ್ಕೆ ಚೆಂಡೆಸೆದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಹೇಗೂ ಹಿಂಪಡೆಯುವುದಿಲ್ಲ. ಹಾಗಾಗಿ, ರೈತರು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಬೇಕು ಎಂದು 8ನೇ ಸುತ್ತಿನ ಸಭೆಯಲ್ಲಿ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರು ನಡೆಸುತ್ತಿರುವ ಹೋರಾಟ ಇತ್ಯರ್ಥವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಕೇಂದ್ರ ಮತ್ತು ರೈತ ಮುಖಂಡರ ನಡುವೆ ನಿನ್ನೆ ನಡೆದ 8ನೇ ಸುತ್ತಿನ ಸಭೆಯೂ ಸಫಲವಾಗಿಲ್ಲ. ಈ ನಡುವೆ, ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳ ವಿಚಾರವಾಗಿ ಒರಟಾಗಿ ಪ್ರತಿಕ್ರಿಯಿಸಿರುವ ಬಗ್ಗೆ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗಳನ್ನು ಹೇಗೂ ಹಿಂಪಡೆಯುವುದಿಲ್ಲ. ಹಾಗಾಗಿ, ರೈತರು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಬೇಕು ಎಂದು ತಿಳಿಸಿದೆ. ಈ ಮೂಲಕ, ಸರ್ಕಾರ ರೈತ ಹೋರಾಟದ ಚೆಂಡನ್ನು ತನ್ನ ಅಂಗಳದಿಂದ ಸುಪ್ರೀಂ ಕೋರ್ಟ್ ಕಡೆಗೆ ಎಸೆದಿದೆ.
ಸರ್ವೋಚ್ಛ ನ್ಯಾಯಾಲಯವು ನೂತನ ಕೃಷಿ ಕಾನೂನುಗಳ ಕುರಿತ ಪ್ರಕರಣವನ್ನು ಸೋಮವಾರ (ಜ.11) ಆಲಿಸಲಿದೆ. ಇನ್ನು, ಕೇಂದ್ರ ಮತ್ತು ರೈತರ ನಡುವಿನ 9ನೇ ಸುತ್ತಿನ ಮಾತುಕತೆ ಜನವರಿ 15ಕ್ಕೆ ನಿಗದಿಯಾಗಿದೆ.
ರೈತರು ಹಾಗೂ ಕೇಂದ್ರದ ನಡುವೆ ಸುಸೂತ್ರವಾಗಿ ಮಾತುಕತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಔಪಚಾರಿಕ ಪ್ರತಿಕ್ರಿಯೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಒತ್ತಾಯಮಾಡಬಾರದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ದೇಶದ ವಿವಿಧ ಭಾಗದ ರೈತ ಮುಖಂಡರನ್ನು ಹೊಂದಿರುವ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಆದೇಶ ನೀಡಿತ್ತು. ರೈತ ಮುಖಂಡರು, ಸಮಸ್ಯೆ ಪರಿಹರಿಸುವಲ್ಲಿ ನ್ಯಾಯಾಲಯದ ನಿರ್ಧಾರವನ್ನು ಅನುಸರಿಸಲು ಆಸಕ್ತಿ ವಹಿಸಿದಂತೆ ಕಾಣಲಿಲ್ಲ. ರೈತ ಸಮಸ್ಯೆಯು ಕೇವಲ ತಾಂತ್ರಿಕ ಅಥವಾ ಕಾನೂನಾತ್ಮಕ ವಿಚಾರವಲ್ಲ ಎಂದು ತಿಳಿಸಿ ಪ್ರತಿಭಟನೆ ಮುಂದುವರೆಸಿದ್ದರು.
Published On - 2:28 pm, Sat, 9 January 21