ಯುಪಿಎ ಪ್ರತಿ 4 ನಿಮಿಷಕ್ಕೆ 1 ಮಸೂದೆಯನ್ನು ಅಂಗೀಕರಿಸಿತ್ತು; ‘ಚರ್ಚೆ ಮಾಡಿಲ್ಲ’  ಎಂಬ ವಿಪಕ್ಷಗಳ ಆರೋಪಕ್ಕೆ ಸರ್ಕಾರ ತಿರುಗೇಟು

| Updated By: ರಶ್ಮಿ ಕಲ್ಲಕಟ್ಟ

Updated on: Aug 12, 2021 | 6:24 PM

ಸಚಿವರ ಪತ್ರಿಕಾಗೋಷ್ಠಿಯ ನಂತರ ಹೊರಡಿಸಿದ ಪ್ರಕಟಣೆಯಲ್ಲಿ ಕೇಂದ್ರ ಈ ಹಿಂದೆ ಅಂಗೀಕರಿಸಲಾದ ಮಸೂದೆಗಳನ್ನು ಸರ್ಕಾರ ಪಟ್ಟಿ ಮಾಡಿದೆ. ಇವುಗಳಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ ಸೇರಿದೆ. ಇದನ್ನು 2006 ರಲ್ಲಿ ಕೇವಲ ಮೂರು ನಿಮಿಷಗಳಲ್ಲಿ ಅಂಗೀಕರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಯುಪಿಎ ಪ್ರತಿ 4 ನಿಮಿಷಕ್ಕೆ 1 ಮಸೂದೆಯನ್ನು ಅಂಗೀಕರಿಸಿತ್ತು; ‘ಚರ್ಚೆ ಮಾಡಿಲ್ಲ’  ಎಂಬ ವಿಪಕ್ಷಗಳ ಆರೋಪಕ್ಕೆ ಸರ್ಕಾರ ತಿರುಗೇಟು
ಪಿಯೂಷ್ ಗೋಯಲ್
Follow us on

ದೆಹಲಿ: ದೆಹಲಿಯ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳ ಮೇಲೆ ಕೇಂದ್ರವು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದು “ಅರಾಜಕತೆ” ಯಾವಾಗಲೂ ಅವರ ಅಜೆಂಡಾ ಎಂದು ಆರೋಪಿಸಿದೆ. ಆದರೆ ಅಡ್ಡಿಗಳ ಹೊರತಾಗಿಯೂ, ರಾಜ್ಯಸಭೆಯಲ್ಲಿ ಈ ಅಧಿವೇಶನದಲ್ಲಿ ದಿನಕ್ಕೆ ಅಂಗೀಕರಿಸಲಾದ ಮಸೂದೆಗಳ ಸಂಖ್ಯೆ 2014 ರ ನಂತರ ಎರಡನೇ ಅತಿ ಹೆಚ್ಚು ಎಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ ಮತ್ತು ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಗಸ್ಟ್ 11 ರ ವರೆಗಿನ ಅಡಚಣೆಗಳು/ಮುಂದೂಡಿಕೆಗಳಿಂದಾಗಿ ಕಳೆದುಹೋದ ಸಮಯವು 76 ಗಂಟೆಗಳ 26 ನಿಮಿಷಗಳು. ದೈನಂದಿನ ಸರಾಸರಿ 4 ಗಂಟೆ 30 ನಿಮಿಷಗಳು ಎಂದು ಸಚಿವರು ಹೇಳಿದ್ದಾರೆ.

ಆದರೆ ಎಲ್ಲಾ ಅವ್ಯವಸ್ಥೆ ಮತ್ತು ಅಡ್ಡಿಗಳ ನಡುವೆ, ಸಂಸತ್ತಿನ ಉಭಯ ಸದನಗಳಲ್ಲಿ 22 ಮಸೂದೆಗಳನ್ನು ಅಂಗೀಕರಿಸಲಾಯಿತು. ಇದರಲ್ಲಿ 2021-22ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳು ಮತ್ತು 2017-2018ರ ಹೆಚ್ಚುವರಿ ಅನುದಾನದ ಬೇಡಿಕೆಗಳಿಗೆ ಸಂಬಂಧಿಸಿದ ಎರಡು ವಿನಿಯೋಗ ಮಸೂದೆಗಳು ಸೇರಿವೆ. ಇದು ತನ್ನ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಸಂಸತ್ತಿನಲ್ಲಿ ಶಾಸಕಾಂಗ ಕಾರ್ಯಸೂಚಿಯನ್ನು ನಡೆಸುವ ಕೇಂದ್ರ ಸರ್ಕಾರದ ಬದ್ಧತೆ, ಉತ್ಪಾದಕತೆ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ಹೇಳಿದರು.

ಒಬಿಸಿ ಮೀಸಲಾತಿ ಕುರಿತ ಮಹತ್ವದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಒಳಗೊಂಡಂತೆ 19 ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಸಚಿವರು ಹೇಳಿದರು. ಈ ಎಲ್ಲಾ ಮಸೂದೆಗಳು ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದ್ದು, ಬಡವರು, ಒಬಿಸಿಗಳು, ಕಾರ್ಮಿಕರು, ಉದ್ಯಮಿಗಳು ಮತ್ತು ಸಮಾಜದ ಎಲ್ಲ ವರ್ಗದವರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.


2004 ರಿಂದ 2014 ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA) ಸರ್ಕಾರದಲ್ಲಿ ಅವರು 18 ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸಿದ್ದಾರೆ ಎಂದು ಹೇಳಿದರು. ಸರ್ಕಾರವು ಯಾವುದೇ ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸರ್ಕಾರ ಈ ರೀತಿ ಪ್ರತಿಕ್ರಿಯೆ ನೀಡಿದೆ.

ಸಚಿವರ ಪತ್ರಿಕಾಗೋಷ್ಠಿಯ ನಂತರ ಹೊರಡಿಸಿದ ಪ್ರಕಟಣೆಯಲ್ಲಿ ಕೇಂದ್ರ ಈ ಹಿಂದೆ ಅಂಗೀಕರಿಸಲಾದ ಮಸೂದೆಗಳನ್ನು ಸರ್ಕಾರ ಪಟ್ಟಿ ಮಾಡಿದೆ. ಇವುಗಳಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ ಸೇರಿದೆ. ಇದನ್ನು 2006 ರಲ್ಲಿ ಕೇವಲ ಮೂರು ನಿಮಿಷಗಳಲ್ಲಿ ಅಂಗೀಕರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. ಯುಪಿಎ ಸರ್ಕಾರವು 17 ಮಸೂದೆಗಳನ್ನು 72 ನಿಮಿಷಗಳಲ್ಲಿ ಅಂಗೀಕರಿಸಿದೆ ಅಥವಾ ಸರಾಸರಿ ಪ್ರತಿ ನಾಲ್ಕು ನಿಮಿಷಕ್ಕೆ ಒಂದು ಮಸೂದೆಯನ್ನು ಅಂಗೀಕರಿಸಿದೆ ಎಂದು ಕೇಂದ್ರ ಹೇಳಿದೆ.

2006 ಆಗಸ್ಟ್ 7 ರಂದು ಲೋಕಸಭೆಯು ಕೇವಲ 14 ನಿಮಿಷಗಳಲ್ಲಿ ಸರ್ಕಾರಿ ಭದ್ರತಾ ಮಸೂದೆಯನ್ನು ಅಂಗೀಕರಿಸಿತು. 2007 ರಲ್ಲಿ, ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ತಿದ್ದುಪಡಿ) ಮಸೂದೆಯನ್ನು ನಾಲ್ಕು ನಿಮಿಷಗಳಲ್ಲಿ ಅಂಗೀಕರಿಸಲಾಯಿತು, ಆದರೆ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮತ್ತು ರಾಷ್ಟ್ರೀಯ ತೆರಿಗೆ ನ್ಯಾಯಮಂಡಳಿ (ತಿದ್ದುಪಡಿ) ಮಸೂದೆಗಳನ್ನು ಐದು ನಿಮಿಷಗಳಲ್ಲಿ ಅಂಗೀಕರಿಸಲಾಗಿದೆ ಎಂದು ಅದು ಹೇಳಿದೆ.

ತೆರಿಗೆ ಕಾನೂನುಗಳ (ತಿದ್ದುಪಡಿ) ವಿಧೇಯಕವನ್ನು ಮಾರ್ಚ್ 19, 2007 ರಂದು ಕೇವಲ ಎರಡು ನಿಮಿಷಗಳಲ್ಲಿ ತೆರವುಗೊಳಿಸಲಾಗಿದೆ ಎಂದು ಸರ್ಕಾರವು ಮತ್ತಷ್ಟು ಹೇಳಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಪ್ರತಿಪಕ್ಷಗಳು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು ಮತ್ತು ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆಮಾಡಿದ ಆರೋಪದ ಕುರಿತು ತನಿಖೆ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಮುಂದೂಡುವಂತೆ ಒತ್ತಾಯಿಸಿತು.

ಪ್ರತಿಪಕ್ಷಗಳ ಗದ್ದಲದಿಂದಾಗಿ ಅಧಿವೇಶನವನ್ನು ಅದರ ನಿಗದಿತ ಅಂತಿಮ ದಿನಾಂಕಕ್ಕೆ (ಆಗಸ್ಟ್ 13 ರ) ಎರಡು ದಿನಗಳ ಮೊದಲು ಮೊಟಕುಗೊಳಿಸಲಾಯಿತು.

ಇದನ್ನೂ ಓದಿ: ಮುಂದಿನ ವರ್ಷ ಆಗಸ್ಟ್ 15ರ ಮುನ್ನ ಹೊಸ ಸಂಸತ್ ಭವನ ನಿರ್ಮಾಣ ಪೂರ್ಣ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ

(Centre on lashed out at Opposition parties no discussion charge UPA government passed 17 bills in 72 mins)