ರಾಜ್ಯಸಭೆಯಲ್ಲಿ ಲೇಡಿ ಮಾರ್ಷಲ್​ಗಳನ್ನು ಎಳೆದಾಡಿದ ವಿಪಕ್ಷಗಳ ಸಂಸದರು; ನಾಚಿಕೆಯೇ ಆಗಲ್ವ ಎಂದ ನೆಟ್ಟಿಗರು

Rajya Sabha Ruckus Video: ರಾಜ್ಯಸಭಾ ಕಲಾಪದ ಸಿಸಿಟಿವಿ ವಿಡಿಯೋವನ್ನು ರಿಲೀಸ್ ಮಾಡಲಾಗಿದ್ದು, ಕಾಂಗ್ರೆಸ್ ಸಂಸದರು ಮಹಿಳಾ ಮಾರ್ಷಲ್ ಮೇಲೆ ಹಲ್ಲೆ ನಡೆಸಿದ, ವಿಪಕ್ಷಗಳ ಸಂಸದರು ಮಾರ್ಷಲ್​ಗಳನ್ನು ಎಳೆದಾಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ರಾಜ್ಯಸಭೆಯಲ್ಲಿ ಲೇಡಿ ಮಾರ್ಷಲ್​ಗಳನ್ನು ಎಳೆದಾಡಿದ ವಿಪಕ್ಷಗಳ ಸಂಸದರು; ನಾಚಿಕೆಯೇ ಆಗಲ್ವ ಎಂದ ನೆಟ್ಟಿಗರು
ರಾಜ್ಯಸಭಾ ಕಲಾಪದಲ್ಲಿ ಗಲಭೆಯ ದೃಶ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 12, 2021 | 5:46 PM

ನವದೆಹಲಿ: ಈ ಬಾರಿ ಮುಂಗಾರು ಅಧಿವೇಶನ ಶುರುವಾದಾಗಿನಿಂದಲೂ ಒಂದಿಲ್ಲೊಂದು ಹೈಡ್ರಾಮ ನಡೆಯುತ್ತಲೇ ಇದೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದವರು ಅಸಭ್ಯವಾಗಿ ವರ್ತಿಸಿದ್ದನ್ನು ಕಂಡು ನಿನ್ನೆಯಷ್ಟೇ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಭಾವುಕರಾಗಿ ಬೇಸರ ಹೊರಹಾಕಿದ್ದರು. ಆದರೆ, ಮತ್ತೆ ವಿಪಕ್ಷಗಳ ಹೈಡ್ರಾಮಾ ಮುಂದುವರೆದಿದ್ದು, ನಿನ್ನೆಯ ಕಲಾಪದ ವೇಳೆ ಮೇಜಿನ ಮೇಲೆ ಹತ್ತಿ, ಕಡತಗಳನ್ನು ಹರಿದು ಬಿಸಾಡಿ ರೌಡಿಸಂ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿತ್ತು. ಆದರೆ, ಹೊರಗಿನವರನ್ನು ಬಿಟ್ಟು ನಮ್ಮ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧಪಕ್ಷದವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಸಭಾ ಕಲಾಪದ ಸಿಸಿಟಿವಿ ವಿಡಿಯೋವನ್ನು ರಿಲೀಸ್ ಮಾಡಲಾಗಿದ್ದು, ಕಾಂಗ್ರೆಸ್ ಸಂಸದರು ಮಹಿಳಾ ಮಾರ್ಷಲ್ ಮೇಲೆ ಹಲ್ಲೆ ನಡೆಸಿದ, ವಿಪಕ್ಷಗಳ ಸಂಸದರು ಮಾರ್ಷಲ್​ಗಳನ್ನು ಎಳೆದಾಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಮೂಲಕ ವಿರೋಧ ಪಕ್ಷದವರು ಮಾಡಿದ್ದ ಆರೋಪ ಅವರತ್ತಲೇ ತಿರುಗಿದೆ.

ಮಹಿಳಾ ಮಾರ್ಷಲ್​ಗಳನ್ನು ವಿಪಕ್ಷಗಳ ಸಂಸದರು ತಮ್ಮ ಸ್ಥಾನವನ್ನೂ ಮರೆತು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಂಸದರ ವರ್ತನೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಸ್ಥಾನಕ್ಕಾದರೂ ಬೆಲೆ ಕೊಡಿ, ನಿಮ್ಮನ್ನು ಆರಿಸಿ ಕಳುಹಿಸಿದ್ದಕ್ಕೂ ಸಾರ್ಥಕವಾಯಿತು, ನಿಮಗೆ ನಾಚಿಕೆಯೇ ಆಗುವುದಿಲ್ಲವೇ? ನಿಮ್ಮಿಂದ ಭಾರತವೇ ತಲೆ ತಗ್ಗಿಸುವಂತಾಗಿದೆ ಎಂದು ಹಲವರು ಆ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಬುಧವಾರದ ರಾಜ್ಯಸಭೆ ಕಲಾಪದ ವೇಳೆ ಆರ್​ಎಸ್​ಎಸ್​ನವರನ್ನು ಮಾರ್ಷಲ್​ಗಳ ವೇಷದಲ್ಲಿ ಕರೆಸಿ ನಮ್ಮ ಮೇಲೆ ಹಲ್ಲೆ ಮಾಡಿಸಿದೆ ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಇದು ಪ್ರಜಾಪ್ರಭುತ್ವದ ಕೊಲೆ. ವಿರೋಧ ಪಕ್ಷದ ಸಂಸದರನ್ನು ಕಲಾಪದ ವೇಳೆ ಥಳಿಸಲಾಗಿದೆ ಎಂದು ರಾಹುಲ್ ಆರೋಪಿಸಿದ್ದರು. ಇದೀಗ ಕಲಾಪದ ವೇಳೆ ನಡೆದ ಘಟನೆಯ ಸಿಸಿಟಿವಿ ವಿಡಿಯೋ ರಿಲೀಸ್ ಆಗಿದ್ದು, ಅದರಲ್ಲಿ ವಿರೋಧಪಕ್ಷದವರು ಗಲಭೆಯೆಬ್ಬಿಸಿ, ಹಲ್ಲೆ ಮಾಡಿರುವುದು ರೆಕಾರ್ಡ್ ಆಗಿದೆ.

ಅಲ್ಲದೆ, ವಿರೋಧಪಕ್ಷದವರು ಸದನದ ಬಾವಿಗಿಳಿದು ಮಾರ್ಷಲ್​ಗಳ ಜೊತೆಗೆ ಗಲಾಟೆ ಮಾಡಿದ್ದಷ್ಟೇ ಅಲ್ಲದೆ ಮೇಜಿನ ಮೇಲೆ ಹತ್ತಿ ನಿಂತು ಕಾಗದ ಪತ್ರಗಳನ್ನು ಹರಿದು ಬಿಸಾಡಿರುವುದು ಕೂಡ ಸಿಸಿಟಿವಿ ವಿಡಿಯೋದಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ಮಾರ್ಷಲ್​ಗಳು ಹಾಗೂ ಆಡಳಿತ ಪಕ್ಷದವರಲ್ಲಿ ಕ್ಷಮೆ ಕೋರಬೇಕೆಂದು ಆಡಳಿತ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.

ಮಂಗಳವಾರದ ರಾಜ್ಯಸಭಾ ಕಲಾಪದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಮೇಜಿನ ಮೇಲೆ ಹತ್ತಿ ನಿಂತು, ಕಡತವನ್ನು ರಾಜ್ಯಸಭಾ ಸಭಾಪತಿ ಪೀಠದ ಕಡೆಗೆ ಎಸೆದು ಗಲಭೆಯೆಬ್ಬಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ರಾಜ್ಯಸಭಾ ಅಧಿವೇಶನದಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದ್ದ ಸಭಾಪತಿ ವೆಂಕಯ್ಯ ನಾಯ್ಡು ರಾಜ್ಯಸಭೆಯಲ್ಲಿ ಅಸಭ್ಯ ವರ್ತನೆ ತೋರಿರುವ ವಿಪಕ್ಷ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ನಿನ್ನೆಯ ಕಲಾಪದಲ್ಲಿ ಭಾವುಕರಾಗಿದ್ದ ವೆಂಕಯ್ಯ ನಾಯ್ಡು, ನನ್ನಿಂದ ಈ ಸದನದ ಗೌರವವನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಬಹಳ ನೋವಾಗುತ್ತಿದೆ. ಕಡತವನ್ನು ನನ್ನ ಪೀಠದತ್ತ ಎಸೆಯುವಂತಹ ವರ್ತನೆ ತೋರಿದ ಸದಸ್ಯರ ಬಗ್ಗೆ ನನಗೆ ಬೇಸರವಾಗಿದೆ. ಆ ಘಟನೆಯಿಂದ ಬೇಸರವಾಗಿ ನಾನು ರಾತ್ರಿಯಿಡೀ ನಿದ್ರೆ ಮಾಡಿಲ್ಲ. ನಿಮ್ಮ ಈ ದುರ್ವರ್ತನೆಗೆ ಕಾರಣವೇನೆಂದು ಯೋಚಿಸಿ ನನಗೆ ಸಾಕಾಗಿದೆ. ಯಾಕೆ ಈ ರೀತಿ ವರ್ತನೆ ಮಾಡುತ್ತಿದ್ದೀರೆಂದು ನೀವೇ ಹೇಳಿಬಿಡಿ. ಸದನದ ಬಾವಿಗಿಳಿದು ನಿನ್ನೆ ನೀವು ವರ್ತಿಸಿದ ರೀತಿಯಿಂದ ಸದನದ ಗೌರವ ಕುಸಿದುಹೋಗಿದೆ ಎಂದು ವೆಂಕಯ್ಯ ನಾಯ್ಡು ಹೇಳಿದ್ದರು. ಆದರೆ, ಅದಾದ ಬಳಿಕ ನಿನ್ನೆಯೂ ಮೇಜಿನ ಮೇಲೆ ಹತ್ತಿ, ಸದನದ ಬಾವಿಗಿಳಿದು ವಿಪಕ್ಷಗಳ ನಾಯಕರು ದುರ್ವರ್ತನೆ ತೋರಿದ್ದಾರೆ.

ಇದನ್ನೂ ಓದಿ: ವಿಮಾ ಮಸೂದೆ ಚರ್ಚೆಗೆ ಒತ್ತಾಯಿಸಿದ ಮಹಿಳಾ ಸದಸ್ಯರ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ: ಶರದ್​ ಪವಾರ್

ರಾಜ್ಯಸಭೆಯಲ್ಲಿ ಗಲಭೆಯೆಬ್ಬಿಸಿದವರ ವಿರುದ್ಧ ಕ್ರಮ, ನಿಮ್ಮ ವರ್ತನೆಯಿಂದ ರಾತ್ರಿ ನಿದ್ರೆಯೇ ಮಾಡಿಲ್ಲ; ಭಾವುಕರಾದ ವೆಂಕಯ್ಯ ನಾಯ್ಡು

(Rajya Sabha Ruckus CCTV Footage Shows Opposition MPs Attacking Jostling Lady Marshals in Session)

Published On - 5:42 pm, Thu, 12 August 21