ಕೇಂದ್ರ-ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿವಾದ: ಹಕ್ಕುಚ್ಯುತಿ ಮಂಡಿಸುವಂತೆ ಕೇರಳದ ಸಿಪಿಎಂ ಸಂಸದರಿಗೆ ಕೇಂದ್ರ ಸಚಿವ ಸವಾಲು

|

Updated on: Feb 08, 2024 | 3:11 PM

ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್​​ಡಿಎಫ್ ಸರ್ಕಾರವು "ಬಂಡವಾಳ ವೆಚ್ಚದಲ್ಲಿ ಅತ್ಯಂತ ಕಡಿಮೆ ವೆಚ್ಚವನ್ನು ಹೊಂದಿದೆ. ಸಂಬಳ ಮತ್ತು ಪಿಂಚಣಿಗಳಿಗೆ ಹೆಚ್ಚಿನ ಹಂಚಿಕೆ ಮಾಡಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ತನ್ನ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ದುರಾಡಳಿತದ ಬಗ್ಗೆ ಕೋಪಗೊಂಡ ಜನರನ್ನು ದಾರಿತಪ್ಪಿಸಲು ದೆಹಲಿಯಲ್ಲಿ ರಾಜಕೀಯ ನಾಟಕದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.

ಕೇಂದ್ರ-ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿವಾದ: ಹಕ್ಕುಚ್ಯುತಿ ಮಂಡಿಸುವಂತೆ ಕೇರಳದ ಸಿಪಿಎಂ ಸಂಸದರಿಗೆ ಕೇಂದ್ರ ಸಚಿವ ಸವಾಲು
ವಿ ಮುರಳೀಧರನ್
Follow us on

ದೆಹಲಿ ಫೆಬ್ರುವರಿ 08: ಕೇಂದ್ರ ಸಚಿವ ವಿ ಮುರಳೀಧರನ್ (V Muraleedharan) ಗುರುವಾರ ಕೇರಳದ ಆಡಳಿತಾರೂಢ ಎಡರಂಗ ( Left Democratic Front) ಮತ್ತು ಪ್ರತಿಪಕ್ಷ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದು, ಎಲ್​​​ಡಿಎಫ್ ರಾಜ್ಯದ ಆರ್ಥಿಕತೆಯನ್ನು ದುರುಪಯೋಗಪಡಿಸಿಕೊಂಡಿದ್ದು ಕೇಂದ್ರದ ವಿರುದ್ಧ ವ್ಯಥಾರೋಪ ಮಾಡುತ್ತಿದ್ದಾರೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಸಲ್ಲಿಸಿದ ದಾಖಲೆಗಳ ಪ್ರಕಾರ ಬಾಕಿ ಇರುವುದನ್ನು ಒದಗಿಸಲಾಗಿದೆ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಎಡರಂಗವು ಹಣಕಾಸು ಸಚಿವೆ (ನಿರ್ಮಲಾ ಸೀತಾರಾಮನ್) ಸದನವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ನಂಬಿದರೆ, ಸಂಸತ್ ನಲ್ಲಿ ಹಕ್ಕುಚ್ಯುತಿ ಮಂಡಿಸುವಂತೆ ನಾನು ಎಡರಂಗದ ಸಂಸದರಿಗೆ ಸವಾಲು ಹಾಕುತ್ತೇನೆ ಎಂದಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರವು “ಬಂಡವಾಳ ವೆಚ್ಚದಲ್ಲಿ ಅತ್ಯಂತ ಕಡಿಮೆ ವೆಚ್ಚವನ್ನು ಹೊಂದಿದೆ.ಸಂಬಳ ಮತ್ತು ಪಿಂಚಣಿಗಳಿಗೆ ಹೆಚ್ಚಿನ ಹಂಚಿಕೆ ಇದೆ ಎಂದು ಮುರಳೀಧರನ್ ಹೇಳಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ತನ್ನ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ದುರಾಡಳಿತದ ಬಗ್ಗೆ ಕೋಪಗೊಂಡ ಜನರನ್ನು ದಾರಿತಪ್ಪಿಸಲು ದೆಹಲಿಯಲ್ಲಿ ರಾಜಕೀಯ ನಾಟಕದಲ್ಲಿ ತೊಡಗಿದೆ ಎಂದು ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು ಹೇಳಿದ್ದಾರೆ.


ಕಾಂಗ್ರೆಸ್ ಪಕ್ಷಕ್ಕೆ “ಹೇಳಲು ಏನೂ ಇಲ್ಲ” ಎಂದ ಕೇಂದ್ರ ಸಚಿವರು, “ಅವರು ‘ಉತ್ತರ-ದಕ್ಷಿಣ’ ವಿಭಜನೆಯ ಮೂಲಕ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣದ ರಾಜ್ಯಗಳ ಜನರು ಇತರ ಜನರಂತೆ ರಾಷ್ಟ್ರೀಯ ಏಕತೆಗೆ ಬದ್ಧರಾಗಿದ್ದಾರೆ. ಅವರ (ಕಾಂಗ್ರೆಸ್) ವಾದವನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, “ಕೇರಳವು ದೀರ್ಘಕಾಲದಿಂದ ಸಾಲದ ಸಂಕಷ್ಟದಲ್ಲಿದೆ. ಹಣಕಾಸು ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸ್ವತಂತ್ರ ಏಜೆನ್ಸಿಗಳು ಕೇರಳದ ಹಣಕಾಸಿನ ನ್ಯೂನತೆಗಳನ್ನು ಎತ್ತಿ ತೋರಿಸಿವೆ. ಸಿಪಿಐಎಂ ಸರ್ಕಾರವು ಕಳೆದ ಏಳು ವರ್ಷಗಳಲ್ಲಿ ರಾಜ್ಯದ ಸ್ಥಿತಿಯನ್ನು ಸುಧಾರಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.

ಮಧ್ಯಂತರ ಬಜೆಟ್ ಮಂಡನೆಯಾದ ನಂತರ, ದಕ್ಷಿಣ ರಾಜ್ಯಗಳಿಗೆ ತೆರಿಗೆ ಹಂಚಿಕೆ ಸೇರಿದಂತೆ ಹಣ ಹಂಚಿಕೆಗೆ ಕಳವಳ ವ್ಯಕ್ತಪಡಿಸಿದರೆ, “ಪ್ರತ್ಯೇಕ ದೇಶ (ದಕ್ಷಿಣ ಭಾರತದ ರಾಜ್ಯಗಳು)” ಕುರಿತು ಕರ್ನಾಟಕ ಕಾಂಗ್ರೆಸ್ ಸಂಸದರ ಹೇಳಿಕೆಯ ವಿವಾದದ ನಡುವೆ ಕೇಂದ್ರ ಸಚಿವರ ಈ ವಾಗ್ದಾಳಿ ಬಂದಿದೆ.

ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ಕೇರಳ, ಕರ್ನಾಟಕ (ಕಾಂಗ್ರೆಸ್ ಅಧಿಕಾರದಲ್ಲಿರುವ) ಮತ್ತು ತಮಿಳುನಾಡು ಸರ್ಕಾರದ ಪ್ರತಿಭಟನೆಗಳೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯಗಳಿಗೆ ಧನಸಹಾಯದ ಕುರಿತಾದ ಗದ್ದಲವು ಉಲ್ಬಣಗೊಂಡಿದೆ.

ಮಂಗಳವಾರ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರದ ದಕ್ಷಿಣ ರಾಜ್ಯಗಳ “ಮಲತಾಯಿ” ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಆರ್ಥಿಕತೆ ಕುರಿತ ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಕಾಂಗ್ರೆಸ್​ನ ಕಪ್ಪು ಪತ್ರ ದೃಷ್ಟಿ ಬೊಟ್ಟಿದ್ದಂತೆ: ಪ್ರಧಾನಿ ಮೋದಿ

ಎಡರಂಗದ ಪ್ರತಿಭಟನೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವ

ದೆಹಲಿಯಲ್ಲಿ ವಿಪಕ್ಷ ಪ್ರತಿಭಟನೆ

ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ  ಬಿಜೆಪಿ ನೇತೃತ್ವದ ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಕೇರಳ ಮತ್ತು ತಮಿಳುನಾಡು ತಮ್ಮ ನೆರೆಯ ದಕ್ಷಿಣ ರಾಜ್ಯ ಕರ್ನಾಟಕದೊಂದಿಗೆ ಸೇರಿಕೊಂಡಿವೆ. ಕೇರಳದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮತ್ತು ತಮಿಳುನಾಡಿನ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಈ ವಿಷಯದ ವಿರುದ್ಧ ಗುರುವಾರ (ಫೆಬ್ರವರಿ 8) ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೆಹಲಿಯಲ್ಲಿ ಎಲ್​​ಡಿಎಫ್ ಪ್ರತಿಭಟನೆಗೆ ನೇತೃತ್ವ ವಹಿಸಿದ್ದಾರೆ. “ನಮ್ಮ ಬಲವಾದ ಪ್ರತಿಭಟನೆಯನ್ನು ದಾಖಲಿಸಲು ಮತ್ತು ಭಾರತದ ಫೆಡರಲ್ ರಚನೆಯನ್ನು ಸಂರಕ್ಷಿಸಲು ನಾವು ಒಟ್ಟಾಗಿ ಬಂದಿದ್ದೇವೆ. ಇಂದು, ನಾವು ರಾಜ್ಯಗಳನ್ನು ಸಮಾನವಾಗಿ ಪರಿಗಣಿಸುವುದನ್ನು ಖಾತ್ರಿಪಡಿಸುವ ಅರುಣೋದಯಕ್ಕೆ ನಾಂದಿ ಹಾಡುವ ಪುನರಾವರ್ತಿತ ಹೋರಾಟವನ್ನು ಪ್ರಾರಂಭಿಸುತ್ತಿದ್ದೇವೆ. ಕೇಂದ್ರ-ರಾಜ್ಯ ಸಂಬಂಧದಲ್ಲಿ ಸಮತೋಲನ ಕಾಯ್ದುಕೊಳ್ಳಲು ಈ ಹೋರಾಟವೂ ಶ್ರಮಿಸಲಿದೆ. ಫೆಬ್ರವರಿ 8 ಭಾರತದ ಇತಿಹಾಸದಲ್ಲಿ ಕೆಂಪು ಅಕ್ಷರದ ದಿನವಾಗಲಿದೆ” ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ದೆಹಲಿಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ಎಡರಂಗದ ಸಚಿವರು, ಸಂಸದರು ಮತ್ತು ಶಾಸಕರು ಸಹ ಭಾಗವಹಿಸುತ್ತಿದ್ದಾರೆ. ಏತನ್ಮಧ್ಯೆ, ದಕ್ಷಿಣ ರಾಜ್ಯ ಎದುರಿಸುತ್ತಿರುವ ಆರ್ಥಿಕ ನಿರ್ಲಕ್ಷ್ಯವನ್ನು ಖಂಡಿಸಿ ತಮಿಳುನಾಡು ಡಿಎಂಕೆ ಸಂಸದರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ