ಚಂದ್ರಯಾನ-3 ಉಡಾವಣೆಗೆ ಮುನ್ನ ಚೆಂಗಾಲಮ್ಮಗೆ ಪೂಜೆ ಸಲ್ಲಿಸುವ ಇಸ್ರೋ; ಈ ದೇಗುಲದ ವಿಶೇಷತೆ ಏನು?

|

Updated on: Jul 12, 2023 | 3:35 PM

ಈ ದೇವಾಲಯವು ತಿರುಪತಿ ಜಿಲ್ಲೆ ಮತ್ತು ತಮಿಳುನಾಡಿನ ಗಡಿ ಪ್ರದೇಶವಾದ ಸುಳ್ಳೂರು ಪೇಟೆಯಲ್ಲಿದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನಕ್ಕೆ ತೆಲುಗು ರಾಜ್ಯಗಳಲ್ಲದೆ ಕರ್ನಾಟಕ ಮತ್ತು ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ. ಈ ದೇವಾಲಯಕ್ಕೆ ಹಲವು ವರ್ಷಗಳ ಇತಿಹಾಸವಿದೆ

ಚಂದ್ರಯಾನ-3 ಉಡಾವಣೆಗೆ ಮುನ್ನ ಚೆಂಗಾಲಮ್ಮಗೆ ಪೂಜೆ ಸಲ್ಲಿಸುವ ಇಸ್ರೋ; ಈ ದೇಗುಲದ ವಿಶೇಷತೆ ಏನು?
ಚಂದ್ರಯಾನ-3
Follow us on

ಜುಲೈ 14ರಂದು ಶ್ರೀಹರಿಕೋಟದಿಂದ (Sriharikota) ಚಂದ್ರಯಾನ-3 (Chandrayaan-3)ಉಡಾವಣೆ ಆಗಲಿದೆ. ಅಂದು ಮಧ್ಯಾಹ್ನ 2:35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III (LVM3) ಉಡಾವಣಾ ವಾಹನ ಮೂಲಕ ಚಂದ್ರಯಾನ ಉಡಾವಣೆ ಆಗಲಿದೆ ಇದಕ್ಕಾಗಿ ಇಸ್ರೋ (ISRO) ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಪ್ರಯೋಗ ಯಶಸ್ವಿಯಾಗಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂದಹಾಗೆ ಇಸ್ರೋ ಯಾವುದೇ ಉಡಾವಣೆ ಮಾಡಿದರೂ ಮೊದಲು ದೇವಸ್ಥಾನಕ್ಕೆ ಭೇಟಿ ನೀಡುವುದು ವಾಡಿಕೆ ಆಗಿದೆ.

ಉಡಾವಣೆಗೆ ಮುನ್ನ ಇಸ್ರೋ ಮುಖ್ಯಸ್ಥರು ತಿರುಪತಿ ಜಿಲ್ಲೆಯ ಸುಳ್ಳೂರಿನ ಪೇಟಾ ಪಟ್ಟಣದಲ್ಲಿರುವ ಚೆಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಪದ್ಧತಿ ದಶಕಗಳಿಂದ ನಡೆದು ಬಂದಿದೆ. ಬಾಹ್ಯಾಕಾಶ ಕಾರ್ಯಾಚರಣೆಗಳ ಯಶಸ್ಸಿಗಾಗಿ ಇಸ್ರೋ ಅಧ್ಯಕ್ಷರು ಮತ್ತು ಇತರ ಕೆಲವು ಅಧಿಕಾರಿಗಳು ಈ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡುತ್ತಾರೆ. ಚೆಂಗಾಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರವೇ ರಾಕೆಟ್ ಉಡಾವಣೆ ಮಾಡಲಾಗುತ್ತದೆ. ಇತ್ತೀಚೆಗೆ ಇಸ್ರೋ ಪಿಎಸ್‌ಎಲ್‌ಸಿ-ಸಿ55 ರಾಕೆಟ್ ಉಡಾವಣೆಗೂ ಮುನ್ನ ಇಸ್ರೋ ಅಧ್ಯಕ್ಷ ಸೋಮನಾಥ್ ಚೆಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷರು ಇಸ್ರೋದ ಇತ್ತೀಚಿನ ಚಂದ್ರಯಾನ-3 ಉಡಾವಣೆಯ ಸಂದರ್ಭದಲ್ಲೂ ಚೆಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಹಾಗಾದರೆ ವಿಜ್ಞಾನಿಗಳು ಈ ದೇವಾಲಯಕ್ಕೆ ಏಕೆ ಭೇಟಿ ನೀಡುತ್ತಾರೆ? ಈ ದೇವಾಲಯದ ಇತಿಹಾಸವೇನು ಎಂಬುದನ್ನು ತಿಳಿಯೋಣ.

ಈ ದೇವಾಲಯವು ತಿರುಪತಿ ಜಿಲ್ಲೆ ಮತ್ತು ತಮಿಳುನಾಡಿನ ಗಡಿ ಪ್ರದೇಶವಾದ ಸುಳ್ಳೂರು ಪೇಟೆಯಲ್ಲಿದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನಕ್ಕೆ ತೆಲುಗು ರಾಜ್ಯಗಳಲ್ಲದೆ ಕರ್ನಾಟಕ ಮತ್ತು ತಮಿಳುನಾಡಿನಿಂದಲೂ ಭಕ್ತರು ಬರುತ್ತಾರೆ. ಈ ದೇವಾಲಯಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಹತ್ತನೇ ಶತಮಾನದಲ್ಲಿ ದನ ಮೇಯಿಸಲು ಕರೆದೊಯ್ದ ಕೆಲ ಯುವಕರು ಪವಿತ್ರ ಕಾಳಂಗಿ ನದಿಯಲ್ಲಿ ಈಜಲು ಹೋಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಬಂಡೆ ಹಿಡಿದು ಬದುಕುಳಿದಿದ್ದರು ಎನ್ನಲಾಗಿದೆ. ಬಂಡೆಯನ್ನು ಅವರು ದಂಡೆಗೆ ತಂದಿದ್ದು, ಆಮೇಲೆ ಅದನ್ನು ಕೆಳಗೆ ಹಾಕಿ ಹೋಗಿದ್ದರು., ಆನಂತರ ಅವರು ಹಿಂತಿರುಗಾಗಿದಾಗ ಅದೇ ಬಂಡೆ ನಿಂತಿರುವುದನ್ನು ಕಂಡರು. ಇದರಿಂದ ಆಶ್ಚರ್ಯಗೊಂಡ ಗ್ರಾಮಸ್ಥರು ಮಹಿಷಾಸುರಮರ್ಧನಿಯೇ ಎಂದು ಭಾವಿಸಿ ಮೂರ್ತಿಯನ್ನು ಗ್ರಾಮಕ್ಕೆ ಕೊಂಡೊಯ್ದು ದೇಗುಲ ನಿರ್ಮಿಸಿದ್ದಾರೆ ಎನ್ನಲಾಗಿದೆ.

ಈ ದೇವಾಲಯಕ್ಕೆ ಇಲ್ಲ ಬಾಗಿಲು

ಚೆಂಗಾಲಮ್ಮ ದೇವಸ್ಥಾನಕ್ಕೆ ಬಾಗಿಲುಗಳೇ ಇಲ್ಲ. ಇದಕ್ಕೂ ಒಂದು ಕಥೆ ಚಾಲ್ತಿಯಲ್ಲಿದೆ. ಕೆಲ ವರ್ಷಗಳ ಹಿಂದೆ ಕಳ್ಳನೊಬ್ಬ ದೇವಸ್ಥಾನಕ್ಕೆ ನುಗ್ಗಿದ್ದ. ಗ್ರಾಮಸ್ಥರೆಲ್ಲ ಸೇರಿ ದೇವಸ್ಥಾನದ ಬಾಗಿಲು ಹಾಕಿದ್ದರು. ಆದರೆ ಗ್ರಾಮಸ್ಥರ ಕನಸಿನಲ್ಲಿ ಬಂದ ದೇವತೆ ‘ಭಕ್ತರ ನಡುವೆ ಯಾವುದೇ ತಡೆಗೋಡೆ ಬೇಡ’ ಎಂದು ಹೇಳಿ ಬಾಗಿಲು ತೆಗೆದು ದೇವಸ್ಥಾನದ ಆವರಣದಲ್ಲಿ ಇರಿಸಿತ್ತಂತೆ. ಕೆಲವು ದಿನಗಳ ನಂತರ ಆ ಬಾಗಿಲುಗಳ ಮರದಿಂದ ಚಿಕ್ಕ ಗಿಡವೊಂದು ಚಿಗುರೊಡೆದು ದೊಡ್ಡ ಮರವಾಗಿ ಬೆಳೆದು ನಿಂತಿದೆ ಎಂಬ ಕತೆಯೂ ಚಾಲ್ತಿಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ