ದೆಹಲಿ: ಮಹಾರಾಷ್ಟ್ರ, ಗೋವಾದ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಈಗ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಬಂಧಿಸಿದ್ದಾರೆ. ಆದರೆ ಈ ಪ್ರಕರಣದ ಬಳಿಕ ಸಮೀರ್ ವಾಂಖೆಡೆ ವಿರುದ್ಧವೇ ಆರೋಪಗಳು ಕೇಳಿ ಬರುತ್ತಿವೆ. ಮಹಾರಾಷ್ಟ್ರದ ಆಡಳಿತರೂಢ ಸರ್ಕಾರದ ಸಚಿವ ಹಾಗೂ ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್, ಸಮೀರ ವಾಂಖೆಡೆ ವಿರುದ್ಧ ನೇರಾನೇರ ಆರೋಪಗಳನ್ನು ಮಾಡಿದ್ದಾರೆ. ಸಮೀರ್ ವಾಂಖೆಡೆ ವಾಟ್ಸಾಪ್ ಚಾಟ್ ಪರಿಶೀಲಿಸಿದರೇ, ಎನ್‌ಸಿಬಿ ಪ್ರಕರಣಗಳು ಎಷ್ಟು ನಕಲಿ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸಮೀರ್ ವಾಂಖೆಡೆಯನ್ನು ಕೇಂದ್ರ ಸರ್ಕಾರವು ಎನ್‌ಸಿಬಿಗೆ ಕರೆತಂದಿದೆ ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮತ್ತೊಮ್ಮೆ ಸಮೀರ್ ವಾಂಖೆಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಎನ್‌ಸಿಬಿಯು ಸುಳ್ಳು ಕೇಸ್ ದಾಖಲಿಸಿದೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ. ಸಮೀರ್ ವಾಂಖೇಡೆ ಹಾಗೂ ಎನ್‌ಸಿಬಿ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಮುಂಬೈ ಕರಾವಳಿಯಲ್ಲಿ ಕ್ರೂಸ್ ಮೇಲೆ ದಾಳಿ ನಡೆಸಿದ್ದರು. ನಂತರ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ ಕೆಲವರನ್ನು ಬಂಧಿಸಿದ್ದಾರೆ. ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ಅಳಿಯ ಸಮೀರ್ ಖಾನ್ ಕೂಡ ಈ ವರ್ಷ ಜನವರಿಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿದ್ದರು. ಕಳೆದ ತಿಂಗಳು ಅವರಿಗೆ ಜಾಮೀನು ನೀಡಲಾಗಿತ್ತು.
ಹಡಗಿನಿಂದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಹೇಳಲಾದ ಪ್ರಕರಣವು ನಕಲಿ ಎಂದು ನವಾಬ್ ಮಲಿಕ್ ಪದೇ ಪದೇ ಹೇಳುತ್ತಿದ್ದಾರೆ ಮತ್ತು ಕೇವಲ ವಾಟ್ಸಾಪ್ ಚಾಟ್‌ಗಳ ಆಧಾರದ ಮೇಲೆ ಎನ್‌ಸಿಬಿಯ ಮುಂದೆ ಹತ್ತಾರು ನಟರನ್ನು ಮೆರವಣಿಗೆ ಮಾಡಲಾಯಿತು ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ, ವಿಶೇಷ ಅಧಿಕಾರಿ ಸಮೀರ್ ವಾಂಖೆಡೆಯನ್ನು ಎನ್‌ಸಿಬಿಗೆ ಕರೆತರಲಾಯಿತು. ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಆದರೆ ಅವರ ಆತ್ಮಹತ್ಯೆ ಅಥವಾ ಕೊಲೆಯ ಬಗೆಗಿನ ರಹಸ್ಯವು ಬಯಲಾಗಿಲ್ಲ. ಆದರೆ, ಅದರ ನಂತರ ಎನ್‌ಸಿಬಿ ಬಾಲಿವುಡ್ನೊಂದಿಗೆ ಆಟವಾಡಲು ಆರಂಭಿಸಿತು ಎಂದು ನವಾಬ್ ಮಲಿಕ್ ಹೇಳಿದ್ದಾರೆ.
ಕೆಲವು ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಲಾಯಿತು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇಡೀ ಚಿತ್ರೋದ್ಯಮ ಮಾಲ್ಡೀವ್ಸ್‌ನಲ್ಲಿತ್ತು. ಮಾಲ್ಡೀವ್ಸ್ ಮತ್ತು ದುಬೈನಲ್ಲಿ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಏನು ಮಾಡುತ್ತಿತ್ತು? ಇದನ್ನು ಸಮೀರ್ ವಾಂಖೆಡೆ ಸ್ಪಷ್ಟಪಡಿಸಬೇಕು. ಸಮೀರ್ ವಾಂಖೆಡೆ ದುಬೈನಲ್ಲಿದ್ದರೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕೆಂದು ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲ್ಲಿಕ್ ಒತ್ತಾಯಿಸಿದ್ದಾರೆ.
ಇಡೀ ಚಿತ್ರೋದ್ಯಮ ಮಾಲ್ಡೀವ್ಸ್‌ನಲ್ಲಿದ್ದಾಗ, ಸಮೀರ್ ವಾಂಖೆಡೆ ಕುಟುಂಬ ಮಾಲ್ಡೀವ್ಸ್‌ನಲ್ಲಿ ಇತ್ತೇ? ಅವರು ಅಲ್ಲಿಗೆ ಹೋಗುವುದರ ಹಿಂದಿನ ಕಾರಣವೇನು? ನಾವು ತುಂಬಾ ಸ್ಪಷ್ಟವಾಗಿದ್ದೇವೆ. ಈ ಎಲ್ಲಾ ವಸೂಲಿ (ಸುಲಿಗೆ) ಮಾಲ್ಡೀವ್ಸ್ ಮತ್ತು ದುಬೈನಲ್ಲಿ ನಡೆದಿದೆ . ನಾನು ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ಬಿಡುಗಡೆ ಮಾಡುತ್ತೇನೆ. ಸಮೀರ್ ವಾಂಖೆಡೆ ಅವರ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಬೇಕು. ಸಮೀರ್ ವಾಂಖೆಡೆ ವಾಟ್ಸಾಪ್ ಚಾಟ್ ಪರಿಶೀಲಿಸಿದರೇ, ಎನ್‌ಸಿಬಿ ಪ್ರಕರಣಗಳು ಎಷ್ಟು ನಕಲಿ ಎಂಬುದು ಗೊತ್ತಾಗುತ್ತದೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ.
ಕಳೆದ ವಾರ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಎನ್‌ಸಿಬಿ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಬಳಸುತ್ತಿದೆ ಎಂದು ಶರದ್ ಪವಾರ್ ಆರೋಪಿಸಿದರು. ಈಗ ಅವರ ಪಕ್ಷದ ವಕ್ತಾರ ಹಾಗೂ ಸಚಿವ ನವಾಬ್ ಮಲ್ಲಿಕ್ ಕಳೆದ ಕೆಲವು ದಿನಗಳಿಂದ ಎನ್‌ಸಿಬಿಯನ್ನು ಗಿರಿಯಾಗಿಸಿ ಮಾಡಿ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ನೇರವಾಗಿ ಎನ್‌ಸಿಬಿಯ ಮುಂಬೈ, ಗೋವಾ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಆದರೇ, ಈಗಾಗಲೇ ಈ ಹಿಂದೆ ನವಾಬ್ ಮಲ್ಲಿಕ್ ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಎನ್‌ಸಿಬಿ ಅಧಿಕಾರಿಗಳು, ಎನ್‌ಸಿಬಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದೆ. ಎನ್‌ಸಿಬಿ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯ, ಆಧಾರ ಇಲ್ಲ. ಪೂರ್ವಾಗ್ರಹಪೀಡಿತರಾಗಿ ಆರೋಪ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಎನ್‌ಸಿಬಿ ದೇಶದಲ್ಲಿ ಡ್ರಗ್ಸ್ ವಿರುದ್ದದ ಸಮರವನ್ನು ಮುಂದುವರಿಸುತ್ತದೆ ಎಂದು ಹೇಳಿದೆ.
ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಪತ್ನಿ ಕೂಡ ಮಾಡೆಲ್ ಆಗಿದ್ದಾರೆ. ಸಮೀರ್ ವಾಂಖೆಡೆ ಪತ್ನಿ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಯತ್ನಿಸಿದ್ದರು. ಸಮೀರ್ ಪತ್ನಿಗೆ ಸಿನಿಮಾಗಳಲ್ಲಿ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಬಾಲಿವುಡ್ ಅನ್ನು ಟಾರ್ಗೆಟ್ ಮಾಡಿಕೊಂಡು ಸಮೀರ್ ಡ್ರಗ್ಸ್ ದಾಳಿ ಮಾಡುತ್ತಿದ್ದಾರೆ. ಬಾಲಿವುಡ್‌ನ ಸೆಲಿಬ್ರೆಟಿಗಳನ್ನು ಎನ್‌ಸಿಬಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಸಮೀರ್ ವಾಂಖೆಡೆ ಪ್ರಚಾರಪ್ರಿಯ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೇ, ಈ ಟೀಕೆಗಳಿಗೆಲ್ಲಾ ಸಮೀರ್ ವಾಂಖೆಡೆ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಕೆಲಸವನ್ನು ತಾವು ಮುಂದುವರಿಸಿದ್ದಾರೆ.
ಇದನ್ನೂ ಓದಿ:
‘ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವೈಯಕ್ತಿಕ ದ್ವೇಷಕ್ಕೆ ಆರ್ಯನ್ ಅರೆಸ್ಟ್’: ಕಿಶೋರ್ ತಿವಾರಿ ಆರೋಪ
‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್‌ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್ ಪುತ್ರ ಆರ್ಯನ್ ಖಾನ್