ಮುದ್ರಾ ಬಂದರಿನಲ್ಲಿ ಭಾರೀ ಮೊತ್ತದ ಹೆರಾಯಿನ್ ವಶ ಪ್ರಕರಣ; ಚೆನ್ನೈ ದಂಪತಿ, ಅಫ್ಘಾನ್ ಪ್ರಜೆ ಬಂಧನ

ಈ ಪ್ರಕರಣದಲ್ಲಿ ತಮಿಳುನಾಡಿನ ಚೆನ್ನೈ ದಂಪತಿಯ ಪಾತ್ರ ಇರೋದು ಈಗ ಬೆಳಕಿಗೆ ಬಂದಿದೆ. ಇಷ್ಟಕ್ಕೂ ಹೆರಾಯಿನ್ ಸಾಗಾಟದಲ್ಲಿ ಚೆನ್ನೈ ದಂಪತಿಯ ಪಾತ್ರ ಏನು ಎನ್ನುವುದರ ವಿವರ ಇಲ್ಲಿದೆ ನೋಡಿ.

ಮುದ್ರಾ ಬಂದರಿನಲ್ಲಿ ಭಾರೀ ಮೊತ್ತದ ಹೆರಾಯಿನ್ ವಶ ಪ್ರಕರಣ; ಚೆನ್ನೈ ದಂಪತಿ, ಅಫ್ಘಾನ್ ಪ್ರಜೆ ಬಂಧನ
ವಶಕ್ಕೆ ಪಡೆದಿರುವ ಹೆರಾಯಿನ್
Follow us
S Chandramohan
| Updated By: ಸುಷ್ಮಾ ಚಕ್ರೆ

Updated on:Sep 23, 2021 | 5:57 PM

ನವದೆಹಲಿ: ಕಳೆದ ವಾರ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ 3 ಸಾವಿರ ಕೆಜಿ ತೂಕದ ಹೆರಾಯಿನ್ ಅನ್ನು ರೆವಿನ್ಯೂ ಇಂಟಲಿಜೆನ್ಸ್ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಅಫ್ಘನಿಸ್ತಾನದಿಂದ ಭಾರತಕ್ಕೆ ಈ ಹೆರಾಯಿನ್ ಅನ್ನು ಕಂಟೇನರ್​ನಲ್ಲಿ ರವಾನೆ ಮಾಡಲಾಗಿತ್ತು. ಟಾಲ್ಕಂ ಪೌಡರ್ ಎಂದು ಹೇಳಿ, ಕಂಟೇನರ್​ನಲ್ಲಿ ಹೆರಾಯಿನ್ ಸಾಗಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ತಮಿಳುನಾಡಿನ ಚೆನ್ನೈ ದಂಪತಿಯ ಪಾತ್ರ ಇರೋದು ಈಗ ಬೆಳಕಿಗೆ ಬಂದಿದೆ. ಇಷ್ಟಕ್ಕೂ ಹೆರಾಯಿನ್ ಸಾಗಾಟದಲ್ಲಿ ಚೆನ್ನೈ ದಂಪತಿಯ ಪಾತ್ರ ಏನು ಎನ್ನುವುದರ ವಿವರ ಇಲ್ಲಿದೆ ನೋಡಿ.

ಕಳೆದ ವಾರ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸೆಪ್ಟೆಂಬರ್ 16ರಂದು 3 ಸಾವಿರ ಕೆ.ಜಿ. ತೂಕದ ಹೆರಾಯಿನ್ ಪತ್ತೆಯಾಗಿತ್ತು. ಭಾರತದಲ್ಲಿ ಹೆರಾಯಿನ್ ಮಾದಕ ವಸ್ತು. ಇದರ ಸಾಗಾಟ, ಬಳಕೆ ಎರಡೂ ಕೂಡ ಕಾನೂನಿಗೆ ವಿರುದ್ಧ ಹಾಗೂ ಅಪರಾಧ. ಉದ್ಯಮಿ ಗೌತಮ್ ಅದಾನಿಗೆ ಸೇರಿದ ಮುಂದ್ರಾ ಬಂದರಿನಲ್ಲಿ ಪತ್ತೆಯಾದ ಹೆರಾಯಿನ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 21 ಸಾವಿರ ಕೋಟಿ ರೂಪಾಯಿ ಮೌಲ್ಯದ್ದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಕಂಟೇನರ್ ಗಳಲ್ಲಿ ಹೆರಾಯಿನ್ ಅನ್ನು ಮುಂದ್ರಾ ಬಂದರಿಗೆ ರವಾನೆ ಮಾಡಲಾಗಿತ್ತು. ಅಫ್ಘನಿಸ್ತಾನದ ಕಂದಹಾರ್​ನಲ್ಲಿ ಕಂಟೇನರ್ ಗಳಲ್ಲಿ ತುಂಬಿ, ಇರಾನಿನ ಭಂಡಾರ್ ಅಬ್ಬಾರ್ ಬಂದರಿನ ಮೂಲಕ ಗುಜರಾತ್‌ನ ಮುಂದ್ರಾ ಬಂದರಿಗೆ ಕಳಿಸಲಾಗಿತ್ತು.

ಆದರೆ, ಬೃಹತ್ ಪ್ರಮಾಣದ ಈ ಹೆರಾಯಿನ್ ಸಾಗಾಟದಲ್ಲಿ ಚೆನ್ನೈ ದಂಪತಿಯ ಪಾತ್ರ ಇರುವುದು ರೆವಿನ್ಯೂ ಇಂಟಲಿಜೆನ್ಸ್ ಇಲಾಖೆಯ ಅಧಿಕಾರಿಗಳ ತನಿಖೆಯ ವೇಳೆಯಲ್ಲಿ ಪತ್ತೆಯಾಗಿದೆ. ಚೆನ್ನೈನ ಗೋವಿಂದರಾಜು ದುರ್ಗಾ ಪೂರ್ಣ ವೈಶಾಲಿ ಹಾಗೂ ಆಕೆಯ ಪತಿ ಮಾಚವರಂ ಸುಧಾಕರ್ ಪಾತ್ರ ಇರುವುದು ಗೊತ್ತಾಗಿದೆ, ಈ ದಂಪತಿಯ ವಿಜಯವಾಡದಲ್ಲಿ ಆಶಿ ಟ್ರೇಡಿಂಗ್ ಕಂಪನಿಯನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಈ ಕಂಪನಿಗೆ ಬಂದ ಕಂಟೇನರ್ ಗಳಲ್ಲಿ ಹೆರಾಯಿನ್ ಪತ್ತೆಯಾಗಿದೆ. ಆದರೇ, ಕಂಟೇನರ್ ಗಳಲ್ಲಿ ಟಾಲ್ಕಮ್ ಪೌಡರ್ ಎಂದು ಅಫ್ಘನಿಸ್ತಾನದಿಂದ ಇರಾನ್ ಮೂಲಕ ಅಮದು ಮಾಡಿಕೊಳ್ಳಲಾಗಿತ್ತು. ಆದರೆ, ಪರಿಶೀಲಿಸಿದಾಗ ಕಂಟೇನರ್ ಗಳಲ್ಲಿ ಟಾಲ್ಕಮ್ ಪೌಡರ್ ಇರಲಿಲ್ಲ. ಬದಲಿಗೆ ಇದ್ದಿದ್ದು ಹೆರಾಯಿನ್. ಹೀಗೆ ಟಾಲ್ಕಮ್ ಪೌಡರ್ ಹೆಸರಿನಲ್ಲಿ ಹೆರಾಯಿನ್ ಅಮದು ಮಾಡಿಕೊಂಡಿದ್ದಕ್ಕೆ ಚೆನ್ನೈನ ದುರ್ಗಾಪೂರ್ಣ ವೈಶಾಲಿ ಹಾಗೂ ಪತಿ ಸುಧಾಕರ್ ಗೆ ಬರೀ 10 ರಿಂದ 12 ಲಕ್ಷ ರೂಪಾಯಿ ಕಮೀಷನ್ ಸಿಕ್ಕಿದೆ. ಈ ದಂಪತಿಯು ಅಫ್ಘನಿಸ್ತಾನ ಹಾಗೂ ಇರಾನ್ ನ ಕೆಲವರ ಸೂಚನೆ ಪಡೆದು ಈ ಕೆಲಸ ಮಾಡಿರಬಹುದು ಎಂಬ ಮಾಹಿತಿಯೂ ಅಧಿಕಾರಿಗಳಿಗೆ ಇದೆ. ಚೆನ್ನೈ ದಂಪತಿಗೆ ಜುಜುಬಿ ಕಮೀಷನ್ ಹಣ ನೀಡಿ ಬಾರಿ ಪ್ರಮಾಣದ ಹೆರಾಯಿನ್ ಕಳ್ಳಸಾಗಾಟ ಮಾಡಲಾಗಿದೆ.

ಈಗ ಈ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ (ಇ.ಡಿ.) ಇಳಿದಿದೆ. ಹೆರಾಯಿನ್ ಕಳ್ಳ ಸಾಗಾಟದಲ್ಲಿನ ಆಕ್ರಮ ಹಣ ವರ್ಗಾವಣೆ ಹಾಗೂ ಅಂತಾರಾಷ್ಟ್ರೀಯ ಮಾಫಿಯಾವನ್ನು ಬಯಲಿಗೆಳೆಯಲು ಇ.ಡಿ. ತನಿಖೆ ನಡೆಸುತ್ತಿದೆ. ಹೆರಾಯಿನ್ ಕಳ್ಳಸಾಗಾಟದ ಮೂಲಕ ಅಂತಾರಾಷ್ಟ್ರೀಯ ಸಿಂಡಿಕೇಟ್ ಅನ್ನು ಬಯಲಿಗೆಳೆದು ಅವರ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವುದು ಇ.ಡಿ. ಪ್ಲ್ಯಾನ್.

”ತಾಲಿಬಾನ್ -ಅಫ್ಘನಿಸ್ತಾನ-ಪಾಕಿಸಾನದ ಲಿಂಕ್ ಈ ಪ್ರಕರಣಕ್ಕೆ ಇದೆ. ನಕಲಿ ಕಂಪನಿಯ ಮೂಲಕ ದೊಡ್ಡ ಮೊತ್ತದ ಹೆರಾಯಿನ್ ಅನ್ನು ಕಳ್ಳಸಾಗಾಟ ಮಾಡಲಾಗಿದೆ. ಹೀಗಾಗಿ ಆಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ತನಿಖೆ ನಡೆಸಲು ಇದು ಸೂಕ್ತವಾದ ಪ್ರಕರಣ. ಸಂಚುಕೋರರ ಆಸ್ತಿಗಳನ್ನು ಜಫ್ತಿ ಮಾಡಲಾಗುತ್ತೆ” ಎಂದು ಇ.ಡಿ. ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ, ಪವನ್ ಖೇರಾ, ಡ್ರಗ್ಸ್ ಅನ್ನು ಅಫ್ಘನಿಸ್ತಾನದಿಂದ ಇರಾನ್ ಮೂಲಕ ಭಾರತಕ್ಕೆ ಕಳಿಸಲಾಗಿದೆ. ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಹೆರಾಯಿನ್ ಪತ್ತೆಯಾಗಿದೆ. ಡ್ರಗ್ಸ್ ನ ಬೆಲೆ ಮತ್ತು ಮೌಲ್ಯವನ್ನು ನೋಡಿದಾಗ ಭಾರತಕ್ಕೆ ಇದು ಬಹಳ ಗಂಭೀರವಾದ ವಿಷಯ. ನಮ್ಮ ಯುವಜನತೆಯನ್ನು ಡ್ರಗ್ ಅಡಿಕ್ಟ್ ಗಳಾಗಿ ಮಾಡಲು ನಡೆದಿರುವ ಷಡ್ಯಂತ್ರ. ಡ್ರಗ್ಸ್ ಕಳ್ಳಸಾಗಾಟದಿಂದ ಗಳಿಸಿದ ಹಣವನ್ನು ಭಾರತದ ವಿರುದ್ಧ ಭಯೋತ್ಪಾದನೆ ನಡೆಸಲು ಬಳಸಲಾಗುತ್ತೆ. ಇದು ಬಹಳ ಗಂಭೀರ ವಿಷಯ ಹಾಗೂ ಬಹಳ ಪ್ರಶ್ನೆಗಳನ್ನು ಎತ್ತಲು ಕಾರಣವಾಗಿದೆ. ಕಳೆದ 18 ತಿಂಗಳಿನಿಂದ ಕೇಂದ್ರ ಸರ್ಕಾರ ಏಕೆ ಎನ್‌ಸಿಬಿ ಗೆ ಡೈರೆಕ್ಟರ್ ಜನರಲ್ ಅವರನ್ನು ನೇಮಕ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಮುಂದ್ರಾ ಬಂದರಿನಲ್ಲಿ ಹೆರಾಯಿನ್ ಪತ್ತೆಯಾದ ಬಗ್ಗೆ ಅದಾನಿ ಕಂಪನಿಯು ತನ್ನ ಪ್ರತಿಕ್ರಿಯೆ ನೀಡಿದ್ದು, ಬಂದರಿನಲ್ಲಿ ಅದಾನಿ ಕಂಪನಿಯು ಯಾವುದೇ ಪೊಲೀಸ್ ವ್ಯವಸ್ಥೆಯನ್ನ ಹೊಂದಿಲ್ಲ. ಕೇಂದ್ರ ಸರ್ಕಾರದ ರೆವಿನ್ಯೂ ಇಂಟಲಿಜೆನ್ಸ್ ಮತ್ತು ಕಸ್ಟಮ್ಸ್ ಇಲಾಖೆಗಳು ಯಾವುದೇ ಕಾರ್ಗೋವನ್ನು ಬೇಕಾದರೂ ತಪಾಸಣೆ, ಪರಿಶೀಲನೆ ನಡೆಸಿ ಆಕ್ರಮ ಇರುವ ಕಾರ್ಗೋಗಗಳನ್ನು ಜಫ್ತಿ ಮಾಡುವ ಅಧಿಕಾರ ಹೊಂದಿವೆ. ದೇಶಾದ್ಯಂತ ಬಂದರು ನಡೆಸುವ ಕಂಪನಿಗಳು ಕಂಟೇನರ್ ಗಳನ್ನು ತಪಾಸಣೆ ಮಾಡಲ್ಲ. ನಮ್ಮ ಪಾತ್ರ ಬಂದರು ನಡೆಸುವುದಕ್ಕೆ ಮಾತ್ರ ಸೀಮಿತ. ಈ ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಕಂಪನಿಯ ವಿರುದ್ಧ ನಡೆಯುತ್ತಿರುವ ದುರುದ್ದೇಶಪೂರಿತ ಅಪಪ್ರಚಾರಗಳಿಗೆ ತಡೆ ಬೀಳುತ್ತೆ ಎಂದು ಭರವಸೆ ಇಟ್ಟಿದ್ದೇವೆ ಎಂದು ಅದಾನಿ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಚೆನ್ನೈ ದಂಪತಿ ಮಾತ್ರವಲ್ಲದೆ ಅಫ್ಘನಿಸ್ತಾನದ ನಾಲ್ವರು ನಾಗರಿಕರು ಹಾಗೂ ದೆಹಲಿಯ ಓರ್ವ ಭಾರತದ ನಾಗರಿಕನನ್ನು ಬಂಧಿಸಲಾಗಿದೆ. ಈ ವೇಳೆ ಹೆಚ್ಚುವರಿಯಾಗಿ 20 ಕೆಜಿ ಹೆರಾಯಿನ್, 8 ಕೆಜಿ ಕೋಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಹೆರಾಯಿನ್ ಡ್ರಗ್ಸ್ ಗೂ ವಿಜಯವಾಡ ನಗರಕ್ಕೂ ಯಾವುದೇ ಸಂಬಂಧವಿಲ್ಲ. ಏನಿದ್ದರೂ, ಚೆನ್ನೈ ದಂಪತಿಯು ತಮ್ಮ ಕಂಪನಿಗೆ ವಿಜಯವಾಡದ ವಿಳಾಸ ನೀಡಿದ್ದಾರೆ ಎಂದು ವಿಜಯವಾಡ ಪೊಲೀಸರು ಹೇಳಿದ್ದಾರೆ. ದುರ್ಗಾಪೂರ್ಣ ವೈಶಾಲಿ ಚೆನ್ನೈ ನಿವಾಸಿ, ಆದರೇ, 2020ರ ಆಗಸ್ಟ್ ತಿಂಗಳಿನಲ್ಲಿ ವಿಜಯವಾಡದ ಸತ್ಯನಾರಾಯಣಪುರಂ ವಿಳಾಸ ನೀಡಿದ್ದಾರೆ ಎಂದು ವಿಜಯವಾಡ ಪೊಲೀಸರು ಹೇಳಿದ್ದಾರೆ. ದುರ್ಗಾಪೂರ್ಣ ವೈಶಾಲಿ ಪತಿ ಕೂಡ ಚೆನ್ನೈ ನಿವಾಸಿ. ಆದರೇ, ವಿಳಾಸದ ಕಟ್ಟಡದ ಮಾಲೀಕರು ಗೋವಿಂದರಾಜು ತಾರಕ. ಇವರು ದುರ್ಗಾಪೂರ್ಣ ವೈಶಾಲಿಯ ತಾಯಿ ಎಂದು ವಿಜಯವಾಡ ಪೊಲೀಸರು ಹೇಳಿದ್ದಾರೆ.

ಚೆನ್ನೈ ದಂಪತಿಯನ್ನು ಬಂಧಿಸಿ ಭುಜ್ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ದಂಪತಿಯನ್ನು ಹತ್ತು ದಿನಗಳ ಕಾಲ ತನಿಖೆಗಾಗಿ ರೆವಿನ್ಯೂ ಇಂಟಲಿಜೆನ್ಸ್ ವಶಕ್ಕೆ ನೀಡಿದೆ. ಈಗ ರೆವಿನ್ಯೂ ಇಂಟಲಿಜೆನ್ಸ್ ಹಾಗೂ ಕಸ್ಟಮ್ಸ್ ಇಲಾಖೆಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿವೆ.

ಇದನ್ನೂ ಓದಿ: ಗುಜರಾತ್​ನ ಮುಂದ್ರಾ ಬಂದರಿನಲ್ಲಿ 2,100 ಕೋಟಿ ರೂ. ಮೌಲ್ಯದ 3,000 ಕೆಜಿ ಡ್ರಗ್ಸ್ ವಶ

2500 ಕೋಟಿ ರೂ.ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡ ದೆಹಲಿ ಪೊಲೀಸರು; ಅಫ್ಘಾನಿಸ್ತಾನದಿಂದ ಪೂರೈಕೆ, ಪಾಕಿಸ್ತಾನದಿಂದ ಧನ ಸಹಾಯ !

Published On - 5:56 pm, Thu, 23 September 21