ಗಡಿಭಾಗಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ಬೇರೂರಲು ಚೀನಾ ಸಂಚು; ಎಲ್​ಎಸಿ ಬಳಿ ನಿರ್ಮಾಣವಾಗುತ್ತಿವೆ ಕಾಂಕ್ರೀಟ್ ಕ್ಯಾಂಪ್​ಗಳು

| Updated By: Lakshmi Hegde

Updated on: Jul 15, 2021 | 5:34 PM

ಈ ಕಾಂಕ್ರೀಟ್ ಶಿಬಿರಗಳು ತುಂಬ ಆಧುನಿಕವಾಗಿದ್ದು, ಪೂರ್ವ ಲಡಾಖ್​​ ಮತ್ತು ಅರುಣಾಚಲ ಪ್ರದೇಶಗಳ ಎಲ್​ಎಸಿ ಬಳಿಯೂ ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಗಡಿಭಾಗಗಳಲ್ಲಿ ಮತ್ತಷ್ಟು ಗಟ್ಟಿಯಾಗಿ ಬೇರೂರಲು ಚೀನಾ ಸಂಚು; ಎಲ್​ಎಸಿ ಬಳಿ ನಿರ್ಮಾಣವಾಗುತ್ತಿವೆ ಕಾಂಕ್ರೀಟ್ ಕ್ಯಾಂಪ್​ಗಳು
ನಾಕು ಲಾ ಮಾರ್ಗ
Follow us on

ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್​, ಉತ್ತರ ಸಿಕ್ಕಿಂನ ನಾಕು ಲಾ ಗಡಿಗಳಲ್ಲಿ ಸಂಘರ್ಷ ಮುಂದುವರಿದಿದೆ. ಈ ಮಧ್ಯೆ ಚೀನಾ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ವಾಸ್ತವಿಕ ಗಡಿ ರೇಖೆಗಳ ಬಳಿ, ಶಾಶ್ವತವಾದ ಕಾಂಕ್ರೀಟ್​ ಕ್ಯಾಂಪ್​ಗಳನ್ನು ಕಟ್ಟುತ್ತಿದೆ. ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ, ಚೀನಾದ ಭೂಪ್ರದೇಶದ ಒಳಗೆ ಕೆಲವೇ ಕಿಲೋಮೀಟರ್​ ದೂರದಲ್ಲಿ ಈಗಾಗಲೇ ಚೀನಾ ಸೈನಿಕರು ಸಿಮೆಂಟ್​​ನಿಂದ ಶಿಬಿರಗಳನ್ನು ಕಟ್ಟಿದ್ದು ಗೊತ್ತಾಗಿದೆ. ಜನವರಿಯಲ್ಲಿ ನಾಕು ಲಾ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡೂ ಕಡೆಯ ಯೋಧರು ಗಾಯಗೊಂಡಿದ್ದರು. ಈ ಸಂಘರ್ಷ ನಡೆದ ಪ್ರದೇಶಕ್ಕಿಂತ ಕೆಲವೇ ಮೀಟರ್ ಅಂತರದಲ್ಲಿ ಚೀನಾ ಕಾಂಕ್ರೀಟ್​ ಶಿಬಿರ ನಿರ್ಮಾಣ ಮಾಡಿದ್ದನ್ನು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಸಾಮಾನ್ಯವಾಗಿ ಗಡಿ ಭಾಗದಲ್ಲಿ ಎರಡೂ ದೇಶಗಳ ಯೋಧರು ನಿಯೋಜಿಸಲ್ಪಟ್ಟಿರುತ್ತಾರೆ. ಅಲ್ಲೆಲ್ಲ ತಾತ್ಕಾಲಿಕ ಸೇನಾ ಶಿಬಿರಗಳು ಇರುತ್ತವೆ. ಆದರೆ ಚೀನಾದವರು ಇದೀಗ ಶಾಶ್ವತ ಕಟ್ಟಡವನ್ನು ಕಟ್ಟುತ್ತಿದ್ದಾರೆ. ಇದರಿಂದ ಗಡಿಯಲ್ಲಿ ಮುಂಚೂಣಿಯಲ್ಲಿ ನಿಯೋಜಿಸಲ್ಪಟ್ಟಿರುವ ಸೈನಿಕರಿಗೆ ತುಂಬ ಅನುಕೂಲವಾಗುತ್ತದೆ. ಈ ಕಟ್ಟಡಕ್ಕೆ ತೆರಳುವ ಮಾರ್ಗಗಳೂ ತುಂಬ ಉತ್ತಮವಾಗಿದ್ದು, ಭಾರತೀಯ ಯೋಧರಿಗಿಂತ ಮೊದಲೇ ಗಡಿ ಭಾಗ ತಲುಪಲು ಸಹಾಯ ಆಗುತ್ತದೆ ಎಂದೂ ಮೂಲಗಳು ತಿಳಿಸಿವೆ.

ಈ ಕಾಂಕ್ರೀಟ್ ಶಿಬಿರಗಳು ತುಂಬ ಆಧುನಿಕವಾಗಿದ್ದು, ಪೂರ್ವ ಲಡಾಖ್​​ ಮತ್ತು ಅರುಣಾಚಲ ಪ್ರದೇಶಗಳ ಎಲ್​ಎಸಿ ಬಳಿಯೂ ನಿರ್ಮಾಣವಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಚೀನಿ ಸೈನಿಕರು ಅನನುಕೂಲತೆ ಅನುಭವಿಸುವುದನ್ನು ಈ ಕಟ್ಟಡಗಳು ಕಡಿಮೆ ಮಾಡುತ್ತವೆ. ಅದರಲ್ಲೂ ಪೂರ್ವ ಲಡಾಖ್​ನಲ್ಲಿ ಚೀನಾ ಸೈನಿಕರು ತುಂಬ ಚಳಿ ಅನುಭವಿಸುತ್ತಾರೆ. ಅವರಿಗೆ ಭಾರತೀಯ ಯೋಧರನ್ನು ಚಳಿ ತಾಳಿಕೊಳ್ಳುವ ಶಕ್ತಿ ಇಲ್ಲದೆ ಇರುವುದರಿಂದ ಆಗಾಗ ಪರ್ಯಾಯ ನಿಯೋಜನೆಗಳು ನಡೆಯುತ್ತಲೇ ಇರುತ್ತವೆ. ಹೀಗೊಂದು ಶಾಶ್ವತ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳುವುದರಿಂದ ಚಳಿ ಮತ್ತಿತರ ಸಮಸ್ಯೆಗಳಿಂದ ಪಾರಾಗಬಹುದು ಎಂದು ಮೂಲಗಳಿಂದ ಗೊತ್ತಾಗಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ಮೊದಲು ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟು, ಅದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ನಂತರ ಉತ್ತರ ಸಿಕ್ಕಿಂನ ನಾಕು ಲಾ ಗಡಿಭಾಗದಲ್ಲೂ ಹೊಡೆದಾಟ ನಡೆದಿತ್ತು. ನಂತರ ಎರಡೂ ದೇಶಗಳು ಗಡಿ ಭಾಗಗಳಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸಿದ್ದರು. ಶಾಂತಿಸ್ಥಾಪನೆಗಾಗಿ ಹಲವು ಮಿಲಿಟರಿ ಹಂತದ ಮಾತುಕತೆಗಳು ಭಾರತ-ಚೀನಾ ಮಧ್ಯೆ ನಡೆದಿದ್ದರೂ ಆಗಾಗ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ.

ಇದನ್ನೂ ಓದಿ: ಸೆಲೆಬ್ರಿಟಿ ಬಾಡಿಗಾರ್ಡ್​ ಸಂಬಳ ಎಷ್ಟು? ಶಾರುಖ್​, ಸಲ್ಲು, ಕೊಯ್ಲಿ ಕೊಡ್ತಾರೆ ಕೋಟಿ ಕೋಟಿ ಮೊತ್ತ 

China building permanent concrete camps near to Naku La and Eastern Ladakh