ದೆಹಲಿ ಆಗಸ್ಟ್ 30: ಅರುಣಾಚಲ ಪ್ರದೇಶ (Arunachal Pradesh) ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ಒಳಗೊಂಡಿರುವ ಬೀಜಿಂಗ್‌ನ “ಸ್ಟ್ಯಾಂಡರ್ಡ್ ಮ್ಯಾಪ್” ಗೆ (standard map) ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಬುಧವಾರ ಚೀನಾ (China) ಪ್ರತಿಕ್ರಿಯೆ ನೀಡಿದೆ. ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್‌ನ 2023 ರ ಆವೃತ್ತಿಯ ಬಿಡುಗಡೆಯು ಕಾನೂನಿಗೆ ಅನುಸಾರವಾಗಿ ದೇಶದ ಸಾರ್ವಭೌಮತ್ವದ ಸಾಮಾನ್ಯ ಪ್ರಕ್ರಿಯೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಸಂಬಂಧಿತ ಪಕ್ಷಗಳು ಅದನ್ನು ವಸ್ತುನಿಷ್ಠವಾಗಿ ಪರಿಗಣಿಸುತ್ತವೆ ಮತ್ತು ಅದರ ಬಗ್ಗೆ ಹೆಚ್ಚಿನ ವಿವರಣೆ ಬಯಸುವುದಿಲ್ಲ ಎಂದು ಭಾವಿಸುತ್ತೇವೆ ಎಂದು ಚೀನಾ ಹೇಳಿದೆ.
ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶದ ಮೇಲೆ ಚೀನಾದ ಪ್ರಾದೇಶಿಕ ಹಕ್ಕುಗಳ ಪ್ರತಿಪಾದನೆಯ ವಿರುದ್ಧ ತೀವ್ರ ಪ್ರತಿಭಟನೆ ದಾಖಲಿಸಿತ್ತು. ಇಂತಹ ಕ್ರಮಗಳು ಗಡಿ ಪ್ರಶ್ನೆಯ ಪರಿಹಾರವನ್ನು ಸಂಕೀರ್ಣಗೊಳಿಸುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಇದು ಆಧಾರ ರಹಿತ. ಭಾರತದ ಭೂಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ 2023 ರ ‘ಸ್ಟ್ಯಾಂಡರ್ಡ್ ಮ್ಯಾಪ್’ ಎಂದು ಕರೆಯಲ್ಪಡುವ ಭೂಪಟಕ್ಕೆ ನಾವು ಇಂದು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಈ ಹಕ್ಕುಗಳನ್ನು ನಾವು ತಿರಸ್ಕರಿಸುತ್ತೇವೆ ಏಕೆಂದರೆ ಅವುಗಳಿಗೆ ಯಾವುದೇ ಆಧಾರವಿಲ್ಲ. ಚೀನಾದ ಕಡೆಯಿಂದ ಇಂತಹ ಕ್ರಮಗಳು ಗಡಿ ಪ್ರಶ್ನೆಯ ಪರಿಹಾರವನ್ನು ಸಂಕೀರ್ಣಗೊಳಿಸುತ್ತವೆ” ಎಂದು ಅವರು ಹೇಳಿದರು.
ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಆ ದೇಶಕ್ಕೆ ಸೇರಿದ್ದು ಎಂದು ಚೀನಾ ತನ್ನ “ಸ್ಟ್ಯಾಂಡರ್ಡ್ ಮ್ಯಾಪ್” 2023 ರ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಒಂದು ದಿನದ ನಂತರ ಭಾರತದ ಪ್ರತಿಕ್ರಿಯೆ ಬಂದಿದೆ. ಈ ಭೂಪಟದಲ್ಲಿ ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಚೀನಾದ ಭಾಗವೆಂದು ತೋರಿಸಿದೆ.
ಇದನ್ನೂ ಓದಿ: ಚೀನಾ ಭೂಪಟದಲ್ಲಿ ಭಾರತದ ಭೂಭಾಗ; ಪ್ರಧಾನಿ ಈ ಬಗ್ಗೆ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದ ರಾಹುಲ್ ಗಾಂಧಿ
ವಿದೇಶಾಂಗ ವ್ಯವಹಾರಗಳ ಸಚಿವ (MEA) ಎಸ್ ಜೈಶಂಕರ್ ಕೂಡ ಈ ಭೂಪಟವನ್ನು ಚೀನಾದ “ಸ್ಟ್ಯಾಂಡರ್ಡ್ ಮ್ಯಾಪ್” ಎಂದು ಕರೆಯುವುದನ್ನು ಖಂಡಿಸಿದ್ದಾರೆ. ಕೇವಲ “ಅಸಂಬದ್ಧವಾದ ಹಕ್ಕುಗಳನ್ನು” ಮಾಡುವುದರಿಂದ ಇತರ ದೇಶದ ಪ್ರದೇಶಗಳು ನಿಮ್ಮದಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಚೀನಾವು ಈ ಹಿಂದೆಯೂ ಸಹ ಚೀನಾದಲ್ಲದ ಪ್ರದೇಶಗಳನ್ನುತಮ್ಮದು ಎಂದು ಹೇಳಿಕೊಳ್ಳುವ ನಕ್ಷೆಗಳನ್ನು ಬಿಡುಗಡೆ ಮಾಡಿದೆ. ಇದು ಅವರ ಹಳೆಯ ಅಭ್ಯಾಸವಾಗಿದೆ ಎಂದು ಎನ್‌ಡಿಟಿವಿಯೊಂದಿಗೆ ಮಾತನಾಡಿದ ಜೈಶಂಕರ್ ಹೇಳಿದ್ದಾರೆ. ಇದು ಹೊಸದೇನಲ್ಲ. ಇದು 1950 ರ ದಶಕದಲ್ಲಿಯೇ ಇದು ಪ್ರಾರಂಭವಾಯಿತು. ಗಡಿ ಭಾಗಗಳನ್ನು, ಭಾರತದ ವಿವಿಧ ಪ್ರದೇಶಗಳನ್ನು ತಮ್ಮ ಭೂಪಟದಲ್ಲಿ ಸೇರಿಸುವುದರಿಂದ ಯಾವುದೇ ಬದಲಾವಣೆ ಸಂಭವಿಸುವುದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ