ಇತಿಹಾಸದಲ್ಲೇ ಮೊದಲು: ಸುಪ್ರೀಂಕೋರ್ಟ್​ಗೆ ನೇಮಕವಾದ 9 ನ್ಯಾಯಮೂರ್ತಿಗಳಿಂದ ಒಟ್ಟಿಗೇ ಪ್ರಮಾಣವಚನ ಸ್ವೀಕಾರ

| Updated By: Lakshmi Hegde

Updated on: Aug 31, 2021 | 1:07 PM

ಮೊದಲಿನಿಂದಲೂ ನಡೆದುಕೊಂಡ ಪದ್ಧತಿಯಂತೆ ಹೊಸದಾಗಿ ನೇಮಕಗೊಳ್ಳುವ ನ್ಯಾಯಾಧೀಶರು, ಸಿಜೆಐ ಅವರ ಕೋರ್ಟ್​ ರೂಮ್​​ನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಆದರೆ ಈ ಬಾರಿ ಹಾಗೆ ಮಾಡಿಲ್ಲ.

ಇತಿಹಾಸದಲ್ಲೇ ಮೊದಲು: ಸುಪ್ರೀಂಕೋರ್ಟ್​ಗೆ ನೇಮಕವಾದ 9 ನ್ಯಾಯಮೂರ್ತಿಗಳಿಂದ ಒಟ್ಟಿಗೇ ಪ್ರಮಾಣವಚನ ಸ್ವೀಕಾರ
ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದ ಸಿಜೆಐ ಎನ್​.ವಿ.ರಮಣ
Follow us on

ದೆಹಲಿ: ಇಂದು ಒಟ್ಟು 9 ನ್ಯಾಯಾಧೀಶರು ಸುಪ್ರೀಂಕೋರ್ಟ್​ ನ್ಯಾಯಮೂರ್ತಿ(Supreme Court Judges)ಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂವರು ಮಹಿಳಾ ಜಡ್ಜ್​ಗಳು ಸೇರಿ 9 ನ್ಯಾಯಾಧೀಶರಿಗೆ ಮುಖ್ಯ ನ್ಯಾಯಮೂರ್ತಿ (CJI) ಎನ್​.ವಿ.ರಮಣ (NV Ramana) ಪ್ರಮಾಣವಚನ ಬೋಧಿಸಿದರು. ಈ ಮೂಲಕ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಸಿಜೆಐ ಸೇರಿ ನ್ಯಾಯಮೂರ್ತಿಗಳ ಬಲ 34ಕ್ಕೆ ತಲುಪಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಇತಿಹಾಸದಲ್ಲಿ ಇದೇ ಮೊದಲಬಾರಿಗೆ 9 ನ್ಯಾಯಾಧೀಶರು, ಸುಪ್ರೀಂ ನ್ಯಾಯಮೂರ್ತಿಗಳಾಗಿ ಒಟ್ಟಿಗೇ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. 

ಮೊದಲಿನಿಂದಲೂ ನಡೆದುಕೊಂಡ ಪದ್ಧತಿಯಂತೆ ಹೊಸದಾಗಿ ನೇಮಕಗೊಳ್ಳುವ ನ್ಯಾಯಾಧೀಶರು, ಸಿಜೆಐ ಅವರ ಕೋರ್ಟ್​ ರೂಮ್​​ನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಆದರೆ ಈ ಬಾರಿ ಕೊರೊನಾ ಸೋಂಕಿನ ಕಾರಣದಿಂದ ಪ್ರಮಾಣವಚನ ಸಮಾರಂಭ ಸುಪ್ರೀಂಕೋರ್ಟ್​ಗೆ ಹೊಂದಿಕೊಂಡಿರುವ ಕಟ್ಟಡ ಸಂಕೀರ್ಣದ ಅಡಿಟೋರಿಯಂನಲ್ಲಿ ನಡೆದಿದೆ. ಈ ಬಾರಿ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಹುದ್ದೆಗೆ ನೇಮಕಾತಿ ಮಾಡಲು ಸುಪ್ರೀಂಕೋರ್ಟ್​ ಕೊಲಿಜಿಯಂ 9 ಜಡ್ಜ್​​ಗಳ ಹೆಸರನ್ನು ಶಿಫಾರಸ್ಸು ಮಾಡಿತ್ತು. ಅದರಲ್ಲಿ ಕೆಲವು ಹೆಸರುಗಳನ್ನು ಮರುಪರಿಶೀಲನೆ ಮಾಡುವಂತೆ ಸರ್ಕಾರ ಹೇಳಿತ್ತು. ಆದರೆ ಸುಪ್ರೀಂಕೋರ್ಟ್ ಸಿಜೆಐ ಅದನ್ನು ನಿರಾಕರಿಸಿದ್ದರು. ನಂತರ ಸರ್ಕಾರ 9 ಮಂದಿಯ ಹೆಸರಿಗೂ ಅನುಮೋದನೆ ನೀಡಿತ್ತು.

ಸುಪ್ರೀಂಕೋರ್ಟ್​ನ ಹೊಸ ನ್ಯಾಯಮೂರ್ತಿಗಳ ಹೆಸರು ಹೀಗಿದೆ..
1.ಗುಜರಾತ್​ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ವಿಕ್ರಮ್​ ನಾಥ್
2.ಕರ್ನಾಟಕ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ಎ.ಎಸ್​.ಒಕಾ
3.ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ
4.ಸಿಕ್ಕಿಂ ಮುಖ್ಯನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ
5. ಕರ್ನಾಟಕ ಹೈಕೋರ್ಟ್​ ನ್ಯಾಯಾಧೀಶೆ ಬಿ.ವಿ.ನಾಗರತ್ನಾ
6. ಮದ್ರಾಸ್​ ಹೈಕೋರ್ಟ್​ ಜಡ್ಜ್​​ ಎಂ.ಎಂ.ಸುಂದರೇಶ್​
7. ಕೇರಳ  ಹೈಕೋರ್ಟ್​ ನ್ಯಾಯಾಧೀಶ ಸಿ.ಟಿ.ರವಿಕುಮಾರ್​
8. ಗುಜರಾತ್​ ಹೈಕೋರ್ಟ್​ ನ್ಯಾಯಾಧೀಶ ಬೇಲಾ ಎಂ.ತ್ರಿವೇದಿ
9. ಹಿರಿಯ ನ್ಯಾಯವಾಧಿ ಪಿ.ಎಸ್​.ನರಸಿಂಹ​

ಇದನ್ನೂ ಓದಿ: ಮೇಕೆದಾಟು ಡಿಪಿಆರ್ ಬಗ್ಗೆ ಪ್ರಸ್ತಾಪಿಸಲು ಮುಂದಾದ ಕರ್ನಾಟಕ; ಚರ್ಚೆ ಮಾಡಕೂಡದು ಎಂದು ಆಕ್ಷೇಪ ತೆಗೆದ ತಮಿಳುನಾಡು

ಸುಪ್ರೀಂಕೋರ್ಟ್​ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರಾ ಕರ್ನಾಟಕ ಮೂಲದ ನ್ಯಾ. ಬಿ.ವಿ.ನಾಗರತ್ನ?

(CJI Ramana Administers Oath to 9 New SC Judges Including 3 Women)