ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದ ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾ

ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ, ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ತಮ್ಮ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಪೀಠವು, ಅರ್ಜಿಯಲ್ಲಿ ಕೆಲವು ಕಾನೂನಾತ್ಮಕ ಹಾಗೂ ತಾಂತ್ರಿಕ ದೋಷಗಳಿರುವುದನ್ನು ಸ್ಪಷ್ಟವಾಗಿ ಎತ್ತಿ ತೋರಿಸಿತು. ನ್ಯಾಯಾಲಯದ ಸೂಚನೆ ಮತ್ತು ಕಾನೂನು ತೊಡಕುಗಳನ್ನು ಮನಗಂಡ ಅರ್ಜಿದಾರರ ಪರ ವಕೀಲರು, ಆ ಅರ್ಜಿಯನ್ನು ವಾಪಸ್ ಪಡೆಯಲು ನಿರ್ಧರಿಸಿದರು. ಅದರಂತೆ ನ್ಯಾಯಾಲಯದ ಅನುಮತಿಯೊಂದಿಗೆ ಅರ್ಜಿಯನ್ನು ಹಿಂಪಡೆಯಲಾಗಿದೆ.

ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದ ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾ
ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ
Image Credit source: PTI
Edited By:

Updated on: Oct 21, 2026 | 3:52 PM

ನವದೆಹಲಿ, ಅಕ್ಟೋಬರ್ 21: ನಿಷೇಧಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಿ ವಶಕ್ಕೆ ಪಡೆದ ಬಳಿಕ ಎಸ್​ಇಎಂ ನೀಡಿದ್ದ ನ್ಯಾಯಾಂಗ ಬಂಧನವನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಇಂದು ದೆಹಲಿ ಹೈಕೋರ್ಟ್‌ನಲ್ಲಿದ್ದ ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಆ ಅರ್ಜಿಯನ್ನು ವಾಪಸ್ ಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ. ಆದರೆ ವಿಚಾರಣೆ ವೇಳೆ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಅವರ ವಯಸ್ಸಿನ ಬಗ್ಗೆ ಪ್ರಶ್ನಿಸಿ ಇಬ್ಬರೂ ಜೆನ್ -ಜಿ ಅಲ್ಲ ಎಂಬುದನ್ನು ಒತ್ತಿಹೇಳಿತು. ಸೌರವ್ ದಾಸ್‌ಗೆ 27 ವರ್ಷ ಹಾಗೂ ಅಶುತೋಷ್ ರಂಕಾ 31 ವರ್ಷ ವಯಸ್ಸಿನವರಾಗಿದ್ದು, 1997ರ ನಂತರ ಜನಿಸಿದವರು ಮಾತ್ರ ಜೆನ್ ಜಿ ಆಗುತ್ತಾರೆ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುಬ್ರಮಣಿಯಮ್ ಪ್ರಸಾದ್ ಅವರು, ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಎಸ್ಇಎಂ ಜೊತೆ ಮುಂಚಿತವಾಗಿ ಮಾಡಿಕೊಂಡಿದ್ದ ಬಾಂಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅರ್ಜಿದಾರರು ಮೊದಲು ಪರಿಷ್ಕರಣಾ ನ್ಯಾಯಾಲಯವನ್ನು ಸಂಪರ್ಕಿಸಬೇಕು ಮತ್ತು “ನಂತರ ಕಾನೂನಿನಲ್ಲಿ ನಿಮಗೆ ಏನು ಲಭ್ಯವಿದೆ ಎಂಬುದನ್ನು ನೋಡಿಕೊಳ್ಳಿ” ಎಂದು ಸಲಹೆ ನೀಡಿದರು.

ಇದನ್ನೂ ಓದಿ: ನೀವೇನು ಜೆನ್​-ಝಿಗಳಲ್ಲ, ನಿಮ್ಮ ಅಸಲಿ ಉದ್ದೇಶವೇನು? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತಪರಾಕಿ

ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಕ್ಟೋಬರ್ 10ರಂದು ಸಿಜೆಪಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೂ ಮುನ್ನ ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅವರೊಂದಿಗೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಕೂಡ ವಶದಲ್ಲಿದ್ದರು. 1 ವರ್ಷದವರೆಗೆ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಡ್ ಬರೆದುಕೊಟ್ಟ ಬಳಿಕ ಮೂವರನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ದೆಹಲಿ ದಸರಾ ಸಂಭ್ರಮದಲ್ಲಿ 30 ಅಡಿ ಎತ್ತರದ ಜಿರಳೆ ಪ್ರತಿಕೃತಿ ದಹನ: ‘ಉಚಿತ ಪ್ರಚಾರಕ್ಕೆ ಧನ್ಯವಾದ’ ಎಂದ ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ

ಆದರೆ, ಅಕ್ಟೋಬರ್ 13ರಂದು ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರು ನಿಷೇಧಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ನ ಲಾಕ್ ಮಾಡಲಾಗಿದ್ದ ಗೇಟ್ ಅನ್ನು ಹತ್ತಲು ಯತ್ನಿಸಿದರು. ಇದರ ಪರಿಣಾಮವಾಗಿ ಅವರನ್ನು ಮತ್ತೆ ವಶಕ್ಕೆ ಪಡೆದು 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಕ್ಟೋಬರ್ 19ರಂದು ಅವರ ಬಂಧನದ ಅವಧಿಯನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸಲಾಗಿತ್ತು.

ನ್ಯಾಯಾಂಗ ಬಂಧನ ವಿಸ್ತರಣೆಯನ್ನು ವಿರೋಧಿಸಿ ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತೆರಳಿದ್ದ ಅವರು ತುರ್ತು ರಾತ್ರಿ ವಿಚಾರಣೆ ಕೋರಿದ್ದರು. ಇದೀಗ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:36 pm, Wed, 21 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us