ಮುಂಬೈ: ಮಹಾರಾಷ್ಟ್ರ ಮೈತ್ರಿಕೂಟ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ. ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನಾನಾ ಪಟೋಲೆ ಅವರು, ಮುಖ್ಯಮಂತ್ರಿ ಉಧವ್ ಠಾಕ್ರೆ ಮತ್ತು ಅವರು ಸಂಪುಟದಲ್ಲಿ ಉಪ ಮುಖ್ಯಂತ್ರಿಯಾಗಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ತಮ್ಮ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳುವ ಮೂಲಕ ಶಿವ ಸೇನಾ-ಕಾಂಗ್ರೆಸ್-ಎನ್ಸಿಪಿಗಳ; ಸಮ್ಮಿಶ್ರ ಸರ್ಕಾರದಲ್ಲಿ ಕಂದಕಗಳ ಏರ್ಪಡುತ್ತಿವೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದೇ ಪಟೋಲೆ ಅವರು ದೇವೇಂದ್ರ ಫಡ್ನವಿಸ್ ಅವರ ನಾಯಕತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ತನ್ನ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಸೋಮವಾರದಂದು ನಡೆಸಿದ ಒಂದು ಸುದ್ದಿಗೋಷ್ಟಿಯಲ್ಲಿ ಪಟೋಲೆ, ಮುಖ್ಯಮಂತ್ರಿ ಮತ್ತು ಗೃಹ ಖಾತೆಯನ್ನು ಹುದ್ದೆಗಳನ್ನು ಹೊಂದಿರುವ ಶಿವ ಸೇನಾ ಮತ್ತು ಎನ್ಸಿಪಿ, ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿವೆ ಅಂತ ಆಪಾದಿಸಿದರು.
‘ಎಲ್ಲಾ ಬಗೆಯ ವರದಿಗಳು ಅವರಿಗೆ ಲಭ್ಯವಾಗುತ್ತಿವೆ. ಯಾರು ಎಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಮೊದಲಾದ ಸಂಗತಿಗಳೆಲ್ಲ ಅವರಿಗೆ ಅಪ್ಡೇಟ್ ಆಗುತ್ತವೆ. ನಾನೇನು ಮಾಡುತ್ತಿರುವೆ ಅನ್ನೋದು ಸಹ ಅವರ ಗಮನಕ್ಕೆ ಬಂದಿರುತ್ತದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನನ್ನ ಮೇಲೆ ಕಣ್ಣಿಟ್ಟಿದ್ದಾರೆ,’ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಪಟೋಲೆ ಹೇಳಿದರು.
ಜೂನ್ನಲ್ಲಿ ಪಟೋಲೆ ಅವರೇ ಈ ಮೈತ್ರಿಕೂಟ ಅಲ್ಪಾಯುಷಿ ಎಂದು ಹೇಳಿ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಮೂಡುವಂತೆ ಮಾಡಿದ್ದರು.
‘ಬಿಜೆಪಿಯನ್ನು ತಡೆಯಲು 5ವರ್ಷಗಳ ಅವಧಿಗೆ ನಾವು ಮಹಾ ವಿಕಾಸ್ ಅಗಾದಿ (ಎಮ್ವಿಎ) ರಚಿಸಿದೆವು. ಇದು ಖಾಯಂ ಏರ್ಪಾಟೇನೂ ಅಲ್ಲ. ಪ್ರತಿಯೊಂದು ಪಕ್ಷಕ್ಕೆ ತನ್ನ ಸಂಘಟನೆಯನ್ನು ಬಲಪಡಿಸಿಕೊಳ್ಳುವ ಹಕ್ಕಿರುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೊವಿಡ್-19ಸೋಂಕಿಗೊಳಗಾಗಿರುವ ಜನರಿಗೆ ರಕ್ತ, ಆಕ್ಸಿಜನ್ ಮತ್ತು ಪ್ಲಾಸ್ಮಾ ಒದಗಿಸುವುದು ಕಾಂಗ್ರೆಸ್ ಆದ್ಯತೆಯಾಗಿ ಭಾವಿಸಿದೆ,’ ಎಂದು ಪಟೋಲೆ ಹೇಳಿದರು.
ಅವರ ಆಪಾದನೆಗಳ ನಂತರ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು, ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತಾಡುವವರಿಗೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದರು.
ತಾತ್ವಿಕವಾಗಿ ಪರಸ್ಪರ ವಿರುದ್ಧ ಧಿಕ್ಕುಗಳಾಗಿದ್ದು ದಶಕಗಳಿಂದ ಕಚ್ಚಾಡುತ್ತಿದ್ದ ಶಿವ ಸೇನೆ ಮತ್ತು ಕಾಂಗ್ರೆಸ್, 2019 ರ ಅಸೆಂಬ್ಲಿ ಚುನಾವಣೆ ನಂತರ ಎನ್ಸಿಪಿ ಪಿತಾಮಹ ಶರದ್ ಪವಾರ್ ಅವರ ಪ್ರಭಾವಕ್ಕೊಳಗಾಗಿ ಜೊತೆಗೂಡಿದ್ದವು.
ಆದರೆ ಠಾಕ್ರೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುಣಗಾನ ಮಾಡಲಾರಂಭಿಸಿದ ನಂತರ ಶಿವ ಸೇನಾ ಪುನಃ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಪ್ರಯತ್ನಿಸಬಹುದೆಂಬ ಗುಮಾನಿಗಳು ಹುಟ್ಟಿದಾಗ ಸಮ್ಮಿಶ್ರ ಸರ್ಕಾರದಲ್ಲಿ ಅಪಸ್ವರಗಳು ಕೇಳಿಬರಲಾರಂಭಿಸಿವೆ
ಈ ವರ್ಷದ ಆರಂಭದಲ್ಲಿ ತಾವು ಲೋಕ ಸಭಾ ಸದಸ್ಯನಾಗಿದ್ದಾಗ ಮತ್ತು ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಪಟೋಲೆ ಅವರು 2016-17ರಲ್ಲಿ ತನ್ನ ಫೋನ್ ಟ್ಯಾಪ್ ಮಾಡಲಾಗತಿತ್ತು ಎಂದು ಆರೋಪ ಮಾಡಿದ್ದರು. ತಮ್ಮ ಪೋನ್ ಡ್ರಗ್ ಪೆಡ್ಲರ್ ಅಮ್ಜದ್ ಖಾನ್ಗೆ ಸೇರಿದ್ದು ಎಂಬ ನೆಪ ಹೇಳಿ ಅದನ್ನು ಟ್ಯಾಪ್ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಎಂವಿಎ ಮೈತ್ರಿಯನ್ನು ಮುರಿಯುವುದಿಲ್ಲ, ಪೂರ್ಣ 5 ವರ್ಷಗಳ ಕಾಲ ಸರ್ಕಾರಕ್ಕೆ ಬೆಂಬಲ : ಪೃಥ್ವಿರಾಜ್ ಚವಾಣ್