ಜಾನ್ಸನ್ ಆ್ಯಂಡ್ ಜಾನ್ಸನ್ ಕೊವಿಡ್ 19 ವಾಕ್ಸಿನ್ ಸುರಕ್ಷಿತವಲ್ಲ..ಪಾರ್ಶ್ವವಾಯುವಿಗೆ ಕಾರಣವಾಗಬಹುದು: ಎಫ್ಡಿಎ ವರದಿ
Covid-19 vaccine: ಜಾನ್ಸನ್ ಆ್ಯಂಡ್ ಜಾನ್ಸನ್ ಕೊವಿಡ್ 19 ಲಸಿಕೆ ಬಗ್ಗೆ ಆತಂಕಕಾರಿ ಮಾಹಿತಿಯನ್ನು ನೀಡಿರುವ ಎಫ್ಡಿಎ, ಮಾಡೆರ್ನಾ ಮತ್ತು ಫೈಜರ್ ಲಸಿಕೆಗಳು ಅಂಥ ಅಪಾಯಕಾರಿ ಫಲಿತಾಂಶವನ್ನು ತೋರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ವಾಷಿಂಗ್ಟನ್: ಕೊರೊನಾ ವೈರಸ್ ವಿರುದ್ಧ ಜನರ ಜೀವ ಕಾಪಾಡಲು ಹಲವು ಸಂಸ್ಥೆಗಳು ಕೊವಿಡ್ 19 ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಅದರಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯೂ ಒಂದು. ಆದರೆ ಈ ಕಂಪನಿಯ ಲಸಿಕೆಗೆ ಇದೀಗ ಭಾರಿ ಹಿನ್ನಡೆಯಾಗಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕೊರೊನಾ ವೈರಸ್ ಲಸಿಕೆ (Johnson & Johnson’s Covid-19 vaccine) ಕೆಲವು ಅಪರೂಪದ ನರವೈಜ್ಞಾನಿಕ ತೊಂದರೆಗಳಿಗೆ ಕಾರಣವಾಗಬಹುದು ಎಂದು ಯುಎಸ್ನ ಆಹಾರ ಮತ್ತು ಔಷಧ ಆಡಳಿತ (FDA) ಎಚ್ಚರಿಕೆ ನೀಡಿದೆ. ಈ ಲಸಿಕೆ ತೆಗೆದುಕೊಂಡವರಿಗೆ ಎಲ್ಲರಿಗೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದಲ್ಲ, ಆದರೂ ಅಪಾಯದ ಪ್ರಮಾಣ ತುಸು ಹೆಚ್ಚಾಗಿಯೇ ಇದೆ ಎಂದು ಎಫ್ಡಿಎ ಎಚ್ಚರಿಸಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಕೊವಿಡ್ 19 ಲಸಿಕೆ ನರವೈಜ್ಞಾನಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆಯೇ? ಇಲ್ಲವೇ ಎಂಬುದನ್ನು ನಾವಿನ್ನೂ ಪ್ರಮಾಣೀಕರಿಸಿಲ್ಲ. ಆದರೆ ಗುಯಿಲಿನ್-ಬಾರ್ ಸಿಂಡ್ರೋಮ್(Guillain-Barre syndrome) ಎಂಬ ಒಂದು ರೂಪದ ಪಾರ್ಶ್ವವಾಯುವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂಬುದನ್ನು ಗಮನಿಸಿದ್ದೇವೆ ಎಂದು ಎಫ್ಡಿಎ (FDA) ತಿಳಿಸಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಕೊವಿಡ್ 19 ಲಸಿಕೆ ಬಗ್ಗೆ ಆತಂಕಕಾರಿ ಮಾಹಿತಿಯನ್ನು ನೀಡಿರುವ ಎಫ್ಡಿಎ, ಮಾಡೆರ್ನಾ ಮತ್ತು ಫೈಜರ್ ಲಸಿಕೆಗಳು ಅಂಥ ಅಪಾಯಕಾರಿ ಫಲಿತಾಂಶವನ್ನು ತೋರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಈವರೆಗೆ ಸುಮಾರು 12.8 ಮಿಲಿಯನ್ ಡೋಸ್ ಜಾನ್ಸೆನ್ ಲಸಿಕೆ ನೀಡಲಾಗಿದೆ. ಅದರಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್ನ ಸುಮಾರು 100 ಪ್ರಕರಣಗಳು ಪತ್ತೆಯಾಗಿವೆ ಎಂದೂ ಎಫ್ಡಿಎ ಮಾಹಿತಿ ನೀಡಿದೆ.
ಇದನ್ನು ಓದಿ: ಕೊರೊನಾ ಮೂರನೇ ಅಲೆ ಭೀತಿ: ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ, ಅನಿರ್ದಿಷ್ಟಾವಧಿ ನಿಯಮ ಜಾರಿ