ಅಯೋಧ್ಯೆ ಅಭಿವೃದ್ಧಿಯ ಮಹತ್ವಕಾಂಕ್ಷಿ ಯೋಜನೆಗಳನ್ನು ಪ್ರಧಾನಿ ಮೋದಿಯವರ ಎದುರು ಪ್ರಸ್ತುತ ಪಡಿಸಿದ ಉತ್ತರ ಪ್ರದೇಶ ಸರ್ಕಾರ
ಅಯೋಧ್ಯೆಯ ಸುತ್ತ ಅಂತಾರಾಷ್ಟ್ರೀಯ ಮಟ್ಟದ ಪ್ರದಕ್ಷಣಾ ಮಾರ್ಗ ನಿರ್ಮಾಣ. ಹಾಗೇ ಇಲ್ಲಿ ಘಾಟ್ಗಳು, ಕೊಳಗಳು, ಪಾರಂಪರಿಕ ತಾಣಗಳು, ಮನರಂಜನಾ ತಾಣಗಳು ಸೇರಿ ಒಟ್ಟು 208 ಅಧ್ಯಾತ್ಮ ತಾಣಗಳನ್ನು ರಚಿಸಲಾಗುವುದು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಅಯೋಧ್ಯೆ ಅಭಿವೃದ್ಧಿಗೆ ಸಂಬಂಧಪಟ್ಟ ಮಹತ್ತರ ಯೋಜನೆಗಳನ್ನು ಎರಡು ವಾರಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿಯವರ ಎದುರು ಮಂಡಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP)ದಲ್ಲಿ ರಾಮಾಯಣ ಅಧ್ಯಾತ್ಮ ಅರಣ್ಯ, 65 ಕಿಮೀ ಉದ್ದದ ರಿಂಗ್ ರಸ್ತೆ ಮತ್ತು ದೆಹಲಿಯ ಚಾಣಕ್ಯಪುರಿಯ ಮಾರ್ಗದಲ್ಲಿ ರಾಜ್ಯ ಭವನಗಳು ಮತ್ತು ವಿದೇಶಿ ಭವನಗಳೂ, 1,200 ಎಕರೆಗಳ ವಿಸ್ತೀರ್ಣದ ವೈದಿಕ ಟೌನ್ಶಿಪ್ಗಳ ನಿರ್ಮಾಣವನ್ನು ಈ ಅಯೋಧ್ಯಾ ಅಭಿವೃದ್ಧಿ ಯೋಜನೆ ಒಳಗೊಂಡಿದೆ.
ಐತಿಹಾಸಿಕ ಅಂಶಗಳೊಂದಿಗೆ ಆಧುನಿಕ AMRUT ಮತ್ತು SMART city ಪರಿಕಲ್ಪನೆಯನ್ನೂ ಸೇರಿಸಿ ಅಯೋಧ್ಯೆ ವೈಭವವನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ. ಅಯೋಧ್ಯೆಯನ್ನು ಜಾಗತಿಕ ಮಟ್ಟದಲ್ಲಿ ಅಧ್ಯಾತ್ಮ, ಧಾರ್ಮಿಕ ಮತ್ತು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಆಶಯ ಹೊಂದಿದ್ದೇವೆ. ಅಷ್ಟೇ ಅಲ್ಲ, ಸನಾತನ ಸಂಪ್ರದಾಯದ ರಕ್ಷಣೆಯೊಂದಿಗೆ ಈ ಪಟ್ಟಣವನ್ನು ಮಾಲಿನ್ಯ ಮುಕ್ತ, ಶೂನ್ಯ ತ್ಯಾಜ್ಯ, ಹೇರಳವಾಗಿ ನೀರು ಸಿಗುವ ಪ್ರದೇಶವನ್ನಾಗಿ ಮಾಡುವ ಯೋಜನೆಗಳನ್ನು ಹೊಂದಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಎದುರು ಹೇಳಿದೆ.
ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳು ಎಲ್ಲಕ್ಕಿಂತಲೂ ಮಿಗಿಲಾಗಿ ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಶ್ವದರ್ಜೆಯ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸುವ ಮಹತ್ವದ ಪ್ರಸ್ತಾಪವನ್ನೂ ಯುಪಿ ಸರ್ಕಾರ ನರೇಂದ್ರ ಮೋದಿಯವರ ಎದುರು ಪ್ರಸ್ತುತಿ ಪಡಿಸಿದೆ. ಅಯೋಧ್ಯೆಯನ್ನು ತಲುಪುವ ವಿವಿಧ ಮಾರ್ಗಗಳನ್ನು 4 ಲೇನ್ ಮತ್ತು 6 ಲೇನ್ಗಳ ಹೈವೇಗಳನ್ನಾಗಿ ಬದಲಿಸಲಾಗುವುದು. ಅಯೋಧ್ಯೆಗೆ ಒಟ್ಟು ಆರು ಪ್ರವೇಶ ದ್ವಾರಗಳು ಇರಲಿದ್ದು, ಅವೆಲ್ಲವೂ ರಾಮ ದೇವಾಲಯ ವಿನ್ಯಾಸ ಒಳಗೊಂಡಿರಲಿವೆ. ಹಾಗೇ, ಅಯೋಧ್ಯೆಯಲ್ಲಿ 65 ಕಿಮೀ ಉದ್ದದ ರಿಂಗ್ರೋಡ್ ನಿರ್ಮಾಣ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೀಘ್ರದಲ್ಲೇ ಪ್ರಾರಂಭ ಮಾಡಲಿದೆ ಎಂದೂ ಯೋಜನೆಯಲ್ಲಿ ವಿವರಿಸಲಾಗಿದೆ.
ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ರಾಮಾಯಣ ಅಧ್ಯಾತ್ಮ ಅರಣ್ಯ ನಿರ್ಮಾಣ ಮಾಡಲಾಗುವುದು. ಇದನ್ನೂ ಸಹ ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲೇ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಅದಕ್ಕೆ ರಾಮ ಸ್ಮೃತಿ ವನ ಎಂದು ಹೆಸರಿಡಲಾಗುತ್ತದೆ. ಶ್ರೀರಾಮನ ಅರಣ್ಯವಾಸದ ಚಿತ್ರಣ ಕಟ್ಟಿಕೊಡಲಾಗುತ್ತದೆ. ಇನ್ನು 1200 ಎಕರೆ ವಿಸ್ತೀರ್ಣದಲ್ಲಿ ವೇದಿಕ್ ಟೌನ್‌ಶಿಪ್ ಕಟ್ಟಿ ಅದರಲ್ಲಿ ಆಶ್ರಮಗಳ ನಿರ್ಮಾಣ ಮಾಡಲಾಗುವುದು. ಫೈವ್ ಸ್ಟಾರ್ ಹೋಟೆಲ್ಗಳು, ರಾಜ್ಯ ಭವನಗಳು ಮತ್ತು ವಿದೇಶಿ ಭವನಗಳನ್ನು ನಿರ್ಮಾಣ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದೂ ಯೋಜನೆಯಲ್ಲಿ ವಿವರಿಸಲಾಗಿದೆ.
ಇನ್ನೊಂದು ಮಹತ್ವದ ಪ್ರಸ್ತಾಪವೆಂದರೆ, ಅಯೋಧ್ಯೆಯ ಸುತ್ತ ಅಂತಾರಾಷ್ಟ್ರೀಯ ಮಟ್ಟದ ಪ್ರದಕ್ಷಣಾ ಮಾರ್ಗ ನಿರ್ಮಾಣ. ಹಾಗೇ ಇಲ್ಲಿ ಘಾಟ್ಗಳು, ಕೊಳಗಳು, ಪಾರಂಪರಿಕ ತಾಣಗಳು, ಮನರಂಜನಾ ತಾಣಗಳು ಸೇರಿ ಒಟ್ಟು 208 ಅಧ್ಯಾತ್ಮ ತಾಣಗಳನ್ನು ರಚಿಸಲಾಗುವುದು. ಈ ವರ್ಷ ದೀಪಾವಳಿಯಿಂದಲೇ ಸರಯೂ ನದಿಯಲ್ಲಿ ವಿಹಾರ ನೌಕೆ ಸಂಚಾರ ಪ್ರಾರಂಭವಾಗಲಿದೆ. ಅಯೋಧ್ಯೆಯಲ್ಲಿ 13 ಕಿಮೀ ಉದ್ದದ ರಸ್ತೆಯನ್ನು ಅಗಲೀಕರಣಗೊಳಿಸಿ, ಅದರ ಎರಡೂ ಬದಿಯಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ಪ್ರಸ್ತುತಿಯಲ್ಲಿ ತಿಳಿಸಲಾಗಿದೆ.
ಇನ್ನು ಪಾರ್ಕಿಂಗ್ಗೆಲ್ಲ ಸುಸ್ಥಿರ ವ್ಯವಸ್ಥೆ ಮಾಡಲಾಗುತ್ತದೆ. ಹಾಗೇ. 30,000 ಯಾತ್ರಾರ್ಥಿಗಳು ಉಳಿಯಲು ಅವಕಾಶ ಆಗುವಷ್ಟು ದೊಡ್ಡ ಧರ್ಮಶಾಲೆ ನಿರ್ಮಾಣ ಮಾಡುವ ಯೋಜನೆಯಿದೆ. ಸರಯೂ ನದಿಯ ಎರಡೂ ದಡಗಳ ಅಭಿವೃದ್ಧಿ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ಸ್ಕೀಮ್ನಡಿ ಗುಪ್ತಾರ್ ಘಾಟ್ನಿಂದ ಜಂಕಿ ಘಾಟ್ವರೆಗೆ ಮಾರ್ಗವನ್ನು ಇನ್ನಷ್ಟು ಸುಂದರಗೊಳಿಸಲಾಗುವುದು. ಅಯೋಧ್ಯೆಯಲ್ಲಿರುವ 108 ಸರೋವರ, ಕೊಳಗಳ ಪುನರುಜ್ಜೀವನ, ನಯಾಘಾಟ್ನಲ್ಲಿ ಭವ್ಯವಾದ ಪ್ರವಾಸಿ ಕೇಂದ್ರ ಸ್ಥಾಪನೆಯ ಪ್ರಸ್ತಾಪಗಳನ್ನು ಉತ್ತರ ಪ್ರದೇಶ ಪ್ರಧಾನಿ ನರೇಂದ್ರ ಮೋದಿಯವರ ಎದುರು ಇಟ್ಟಿದೆ. ಹಾಗೇ, ರಾಮ ಕಥಾ ಸಂಗ್ರಹಾಲಯವನ್ನು ವಿಶ್ವ ದರ್ಜೆ ಮಟ್ಟದ ಡಿಜಿಟಲ್ ಮ್ಯೂಸಿಯಂ ಆಗಿ ಬದಲಿಸುವುದಾಗಿಯೂ ತಿಳಿಸಿದೆ. ಇದರೊಂದಿಗೆ ಇನ್ನೂ ಹಲವು ಅಭಿವೃದ್ಧಿ ಯೋಜನೆಗಳ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಇನ್ನು ನರೇಂದ್ರ ಮೋದಿಯವರೂ ಸಹ ಅಯೋಧ್ಯೆ ಅಭಿವೃದ್ಧಿ ಬಗ್ಗೆ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ.
ಇದನ್ನೂ ಓದಿ: Coronavirus cases in India: ದೇಶದಲ್ಲಿ 37,154 ಹೊಸ ಕೊವಿಡ್ ಪ್ರಕರಣ ಪತ್ತೆ, 724 ಮಂದಿ ಸಾವು
A grand plan for Ayodhya development presented before Prime Minister Narendra Modi By Uttar Pradesh Government