ಕೊರೊನಾ ಮೂರನೇ ಅಲೆ ಭೀತಿ: ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ, ಅನಿರ್ದಿಷ್ಟಾವಧಿ ನಿಯಮ ಜಾರಿ
ಈ ಆದೇಶ ಅನಿರ್ದಿಷ್ಟಾವಧಿ ಜಾರಿಯಲ್ಲಿರಲಿದ್ದು, ಪ್ರತಿ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ನಂದಿಗಿರಿಧಾಮಕ್ಕೆ ಪ್ರವೇಶ ಇರುವುದಿಲ್ಲ.
ಚಿಕ್ಕಬಳ್ಳಾಫುರ: ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ (Nandi Hills) ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧಿಸಿರುವುದಾಗಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ ಆದೇಶ ಹೊರಡಿಸಿದ್ದಾರೆ. ಅನ್ಲಾಕ್ (Corona Unlock) ಆಗುತ್ತಿದ್ದಂತೆಯೇ ನಂದಿ ಗಿರಿಧಾಮದತ್ತ ಪ್ರವಾಹೋಪಾದಿಯಲ್ಲಿ ಪ್ರವಾಸಿಗರ ದಂಡು ತೆರಳಲಾರಂಭಿಸಿದ್ದು, ಇದೀಗ ಮೂರನೇ ಅಲೆ (Covid 19 Third wave) ಭೀತಿ ಹೆಚ್ಚಾಗುತ್ತಿರುವುದಕ್ಕಾಗಿ ವಾರಂತ್ಯದಲ್ಲಿ (Weekend) ಪ್ರವೇಶ ನಿರ್ಬಂಧಿಸಿದ್ದಾರೆ. ಈ ಆದೇಶ ಅನಿರ್ದಿಷ್ಟಾವಧಿ ಜಾರಿಯಲ್ಲಿರಲಿದ್ದು, ಪ್ರತಿ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ನಂದಿಗಿರಿಧಾಮಕ್ಕೆ ಪ್ರವೇಶ ಇರುವುದಿಲ್ಲ (No Entry) ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಮೂರನೇ ಅಲೆಯ ಭೀತಿ ಹೆಚ್ಚುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲೆಡೆ ಕಟ್ಟುನಿಟ್ಟಾದ ಕ್ರಮಗಳನ್ನು ಮತ್ತೆ ಜಾರಿಗೊಳಿಸಬೇಕಾದ ಅನಿವಾರ್ಯತೆ ಕಾಣಿಸುತ್ತಿದೆ. ಅನ್ಲಾಕ್ ನಂತರ ಜನ ಸಂಪೂರ್ಣ ಮೈಮರೆತು ಮೋಜು ಮಸ್ತಿಯಲ್ಲಿ ತೊಡಗಿರುವುದರಿಂದ ಮೂರನೇ ಅಲೆ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಕೊರೊನಾ ನಿಯಮಾವಳಿಗಳನ್ನು ಸಡಿಲಿಸುತ್ತಿದ್ದಂತೆಯೇ ಪ್ರವಾಸಿತಾಣಗಳತ್ತ ಜನರು ಹಿಂಡುಹಿಂಡಾಗಿ ತೆರಳುತ್ತಿದ್ದು, ಅಧಿಕಾರಿಗಳಿಗೆ ಜನರನ್ನು ನಿಯಂತ್ರಿಸುವುದೇ ಸವಾಲಾಗಿದೆ. ಈ ಕಾರಣದಿಂದಲೇ ನಂದಿಗಿರಿಧಾಮಕ್ಕೆ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ ಆದೇಶ ನೀಡಿದ್ದಾರೆ.
ವಾರಾಂತ್ಯದಲ್ಲಿ ನಂದಿಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ನಂದಿಗಿರಿಧಾಮದ ರಸ್ತೆಗಳಲ್ಲಿ ಕಳೆದ ವಾರ ಟ್ರಾಫಿಕ್ ಜಾಮ್ ಆಗಿತ್ತು. ಪ್ರವಾಸಿಗರು ಸಮರ್ಪಕವಾಗಿ ಕೊರೊನಾ ನಿಯಮಗಳನ್ನು ಪಾಲಿಸದೆ, ಮಾಸ್ಕ್ ಧರಿಸಿದೆ, ದೈಹಿಕ ಅಂತರ ಕಾಪಾಡದೆ ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳು ಹರಸಾಹಸಪಡುವ ಪರಿಸ್ಥಿತಿ ಕಂಡುಬಂದಿದೆ.
ಬೆಳಗ್ಗೆ ಆರು ಗಂಟೆಯಿಂದಲೇ ಜನ ಮುಗಿಬಿದ್ದು ಗಿರಿಧಾಮದತ್ತ ಆಗಮಿಸುತ್ತಿದ್ದಾರೆ. ಆದರೆ ಮೂರನೇ ಅಲೆಯ ಭೀತಿಯನ್ನು ಮರೆತು ಇಲ್ಲಿ ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಅವರಿಗೆ ಮಾಸ್ಕ್ ಹಾಕುವಂತೆ ತಿಳಿಸುವುದೇ ಕಷ್ಟವಾಗಿದೆ ಎಂದು ಕಳೆದವಾರವಷ್ಟೇ ನಂದಿಗಿರಿಧಾಮ ಸಿಬ್ಬಂದಿ ವೇಣು ಹೇಳಿದ್ದರು. ಚೆಕ್ ಪೋಸ್ಟ್ನಲ್ಲಿ ಪ್ರತಿಯೊಂದು ಬೈಕ್ ಕಾರುಗಳನ್ನು ಪರಿಶೀಲನೆ ನಡೆಸಿ, ಮಾಸ್ಕ್ ಧರಿಸಿದ್ದಾರಾ, ಕಾರು ಬೈಕ್ಗೆ ದಾಖಲೆಗಳು ಇವೆಯಾ ಎಂಬುವುದನ್ನು ನೋಡಿ, ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತಿತ್ತಾದರೂ ಜನರು ಅಧಿಕಾರಿಗಳ ಮಾತು ಕೇಳುತ್ತಿರಲಿಲ್ಲ. ಹೀಗಾಗಿ ಇದೀಗ ಅನಿವಾರ್ಯವಾಗಿ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ನಂದಿಗಿರಿಧಾಮದತ್ತ ಹರಿದು ಬಂದ ಪ್ರವಾಸಿಗರ ದಂಡು; ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳ ಹರಸಾಹಸ